Advertisement
ದಾಖಲೆ 8 ಬಾರಿಯ ಚಾಂಪಿಯನ್ ಭಾರತ ಹಾಗೂ ಹಾಲಿ ಚಾಂಪಿಯನ್ ಬಾಂಗ್ಲಾದೇಶ ನಡುವೆ ರವಿವಾರ ನಡೆದ ಕಿರಿಯರ ಏಷ್ಯಾ ಕಪ್ ಕ್ರಿಕೆಟ್ ಪ್ರಶಸ್ತಿ ಸಮರದಲ್ಲಿ ಕನಿಷ್ಠ ಮೊತ್ತದ ಪಂದ್ಯದಲ್ಲಿ ಭಾರತ ತಂಡವು 59ರನ್‌ಗಳಿಂದ ಸೋಲು ಅನುಭವಿಸಿತು. ಬಾಂಗ್ಲಾದೇಶ ತಂಡ ಸತತ ಎರಡನೇ ಬಾರಿಗೆ ಅಂಡರ್-19 ಏಷ್ಯಾಕಪ್ ಪ್ರಶಸ್ತಿ ಗೆದ್ದು ಇತಿಹಾಸ ನಿರ್ಮಿಸಿದೆ. ಏಷ್ಯಾಕಪ್ ಪಂದ್ಯಾವಳಿಯ 1989ರಿಂದ ಆಡುತ್ತಿದ್ದು ಬಾಂಗ್ಲಾದೇಶ ತಂಡ ಅಂಡರ್-19 ಏಷ್ಯಾಕಪ್ ಇತಿಹಾಸದಲ್ಲಿ ಎರಡನೇ ಬಾರಿಗೆ ಪ್ರಶಸ್ತಿ ಗೆದ್ದ ಎರಡನೇ ತಂಡವಾಗಿದೆ.
ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡ ಭಾರತ ಬಾಂಗ್ಲಾದೇಶ ತಂಡವನ್ನು 49.1 ಓವರ್‌ಗಳಲ್ಲಿ 198 ರನ್‌ಗೆ ನಿಯಂತ್ರಿಸುವಲ್ಲಿ ಯಶಸ್ವಿಯಾದರು. ಬಾಂಗ್ಲಾದೇಶ ಪರ ರಿಜಾನ್ ಹಸನ್ ಗರಿಷ್ಠ 47 ರನ್ ಗಳಿಸಿದರೆ, ಮೊಹಮ್ಮದ್ ಶಿಹಾಬ್ ಜೇಮ್ಸ್ ಕೂಡ 40 ರನ್ ಕೊಡುಗೆ ನೀಡಿದರು. ಫರೀದ್ ಹಸನ್ ಕೂಡ 39 ರನ್ ಪೇರಿಸಿದರು. ಭಾರತದ ಪರ ಯುಧಾಜಿತ್ ಗುಹಾ, ಚೇತನ್ ಶರ್ಮಾ ಮತ್ತು ಹಾರ್ದಿಕ್ ರಾಜ್ ತಲಾ 2 ವಿಕೆಟ್ ಪಡೆದರೆ, ಕಿರಣ್ ಚೋರ್ಮಲೆ, ಕೆಪಿ ಕಾರ್ತಿಕೇಯ ಮತ್ತು ಆಯುಷ್ ಮ್ಹಾತ್ರೆ ತಲಾ 1 ವಿಕೆಟ್ ಪಡೆದರು.
Related Articles
ಬಾಂಗ್ಲಾ ತಂಡ ನೀಡಿದ 199 ರನ್‌ಗಳ ಗುರಿಯ ಬೆನ್ನಟ್ಟಿದ ಭಾರತ ತಂಡದ ಆರಂಭಿಕರು ಪ್ರಮುಖ ಘಟ್ಟವಾದ ಅಂತಿಮ ಪಂದ್ಯದಲ್ಲಿ ವೈಫಲ್ಯ ಕಂಡರು . ಆರಂಭಿಕ ಆಯುಷ್ ಮ್ಹಾತ್ರೆ 1 ರನ್ ಕಲೆ ಹಾಕಲಷ್ಟೇ ಶಕ್ತರಾದರು. ಕಳೆದ ಪಂದ್ಯದಲ್ಲಿ ಸ್ಫೋಟಕ ಬ್ಯಾಟಿಂಗ್ ಮಾಡಿದ್ದ ವೈಭವ್ ಸೂರ್ಯವಂಶಿ ಕೂಡ ಕೇವಲ 9 ರನ್ ಗಳಿಸಿ ನಿರಾಸೆ ಮೂಡಿಸಿದರು. ಇದಾದ ನಂತರ ಸತತವಾಗಿ ತಂಡದ ವಿಕೆಟ್‌ಗಳು ಉದುರುತ್ತಲೇ ಸಾಗಿದವು.
Advertisement
ಇದರಿಂದ ಭಾರತ ತಂಡ ಪಂದ್ಯದಲ್ಲಿ ಪುಟಿದೇಳಲು ಸಾಧ್ಯವಾಗಲಿಲ್ಲ. ಸಿದ್ದಾರ್ಥ್ (20), ಕೆಪಿ ಕಾರ್ತಿಕೇಯ 21 ರನ್ ಗಳಿಸಿದರು. ನಿಖಿಲ್ ಕುಮಾರ್ಗೆ ಖಾತೆ ತೆರೆಯಲೂ ಸಾಧ್ಯವಾಗಲಿಲ್ಲ. ತಂಡದ ನಾಯಕ ಮೊಹಮ್ಮದ್ ಅಮಾನ್ (26) ಹಾಗೂ ಹಾರ್ದಿಕ್ ರಾಜ್ (24) ಜೊತೆಯಾಟವಾಡಿ ತಂಡಕ್ಕೆ ಪುನಶ್ಚೇತನ ನೀಡಿ ಮೊತ್ತ ಹೆಚ್ಚಿಸಿದರಾದರೂ ತಂಡವನ್ನು ಗೆಲುವಿನ ದಡಕ್ಕೆ ಕೊಂಡೊಯ್ಯುವಲ್ಲಿ ವಿಫಲರಾದರು. ಅಂತಿಮವಾಗಿ ಭಾರತ 35.2 ಓವರ್‌ಗಳಲ್ಲಿ 139 ರನ್‌ಗಳಿಗೆ ಸರ್ವಪತನ ಕಂಡಿತು.
ಕ್ರಿಕೆಟ್ ಅಭಿಮಾನಿಗಳಿಗೆ ಬ್ಯಾಡ್ ಸಂಡೇ:ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ರವಿವಾರ ಕೆಟ್ಟ ದಿನವೆಂದೇ ಹೇಳಬಹುದು. ಒಂದೇ ದಿನ ಭಾರತದ ಪುರುಷರ ತಂಡ ಹಾಗೂ ಮಹಿಳಾ ತಂಡ ಕ್ರಿಕೆಟ್‌ನಲ್ಲಿ ಸೋಲು ಕಂಡಿವೆ. ಮೊದಲಿಗೆ ಭಾರತದ ಪುರುಷರ ತಂಡ ಅಡಿಲೇಡ್ನಲ್ಲಿ ನಡೆದ ಪಂದ್ಯದಲ್ಲಿ 10 ವಿಕೆಟ್ಗಳಿಂದ 2ನೇ ಟೆಸ್ಟ್ ಸೋತರೆ, ಇದಾದ ಕೆಲವೇ ಗಂಟೆಗಳಲ್ಲಿ ಮಹಿಳಾ ತಂಡವು ಆಸ್ಟ್ರೇಲಿಯಾ ವಿರುದ್ಧ 122 ರನ್‌ಗಳಿಂದ ಸೋಲು ಕಂಡಿತು. ಸಂಜೆ ವೇಳೆಗೆ ಅಂಡರ್ 19- ಪುರುಷರ ಏಷ್ಯಾಕಪ್ ಫೈನಲ್‌ನಲ್ಲಿ ಭಾರತ ತಂಡವು ಬಾಂಗ್ಲಾದೇಶ ವಿರುದ್ಧ 59ರನ್ ಗಳಿಗೆ ಸೋಲು ಕಂಡು ನಿರಾಸೆ ಅನುಭವಿಸಬೇಕಾಯಿತು. ಸಂಕ್ಷಿಪ್ತ ಸ್ಕೋರ್:
ಬಾಂಗ್ಲಾದೇಶ- 49.1 ಓವರ್‌ಗಳಲ್ಲಿ 198 (ರಿಜಾನ್ 47, ಶಿಹಾಬ್ 40, ಫೈಸಲ್ 39, ಗುಹಾ 29ಕ್ಕೆ 2, ಹಾರ್ದಿಕ್ ರಾಜ್ 41ಕ್ಕೆ 2, ಚೇತನ್ ಶರ್ಮ 48ಕ್ಕೆ 2). ಭಾರತ-35.2 ಓವರ್‌ಗಳಲ್ಲಿ 139 (ಅಮಾನ್ 26, ಹಾರ್ದಿಕ್ ರಾಜ್ 24, ಕಾರ್ತಿಕೇಯ 21, ಸಿದ್ಧಾರ್ಥ 20, ಅಜಿಜುಲ್ 8ಕ್ಕೆ 3, ಇಕ್ಬಾಲ್ 24ಕ್ಕೆ 3, ಫಹಾದ್ 34ಕ್ಕೆ 2). ಪಂದ್ಯಶ್ರೇಷ್ಠ, ಸರಣಿಶ್ರೇಷ್ಠ: ಇಕ್ಬಾಲ್ ಹುಸೇನ್ ಇಮೊನ್.