Advertisement

ಪೊಲೀಸರನ್ನೇ ಬೆಚ್ಚಿಬೀಳಿಸಿದ ಬೆರಳಚ್ಚು ಕಳ್ಳರು! ವಂಚಕನ ಬಳಿ ಇದ್ದವು 2 ಸಾವಿರ ಬೆರಳಚ್ಚುಗಳು

10:37 AM Jun 13, 2022 | Team Udayavani |

ಹೈದರಾಬಾದ್‌: ಪ್ರತಿಯೊಬ್ಬ ವ್ಯಕ್ತಿಯ ಬೆರಳಚ್ಚು ಕೂಡ ವಿಶಿಷ್ಟವಾಗಿರುವ ಕಾರಣ ನಕಲು ಮಾಡಲು ಸಾಧ್ಯವಿಲ್ಲ ಎಂಬ ಮಾತಿದೆ. ಇದೇ ಕಾರಣಕ್ಕಾಗಿ ನಮ್ಮ ಸೂಕ್ಷ್ಮ ದಾಖಲೆಗಳ ರಕ್ಷಣೆಗೆ “ಫಿಂಗರ್‌ಪ್ರಿಂಟ್‌’ ಬಳಸುತ್ತೇವೆ. ಆದರೆ ಅವುಗಳನ್ನೇ ಕಳ್ಳರು ಕದ್ದರೆ?

Advertisement

ಹೌದು, ಇದು ಕೂಡ ಸಾಧ್ಯ ಎಂದು ಕಳ್ಳರು ಸಾಬೀತುಪಡಿಸಿ ದ್ದಾರೆ! ನಿಮ್ಮ ಗುರುತನ್ನೇ ಕದ್ದು, ನಿಮ್ಮ ಹೆಸರಲ್ಲೇ ಬ್ಯಾಂಕ್‌ ಖಾತೆ ತೆರೆದು, ವಂಚಿಸುವ ಜಾಲವಿದು. ಇತ್ತೀಚೆಗೆ ಇಂಥ ವಂಚಕನೊಬ್ಬ ಸಿಕ್ಕಿಬಿದ್ದಿದ್ದು, ಅವನ ಬಳಿ ಪತ್ತೆಯಾದ 2 ಸಾವಿರ ಬೆರಳಚ್ಚುಗಳನ್ನು ಕಂಡು ಪೊಲೀಸರೇ ಬೆಚ್ಚಿಬಿದ್ದಿದ್ದಾರೆ ವಿವಿಧ ವ್ಯಕ್ತಿಗಳ ಸುಮಾರು 2 ಸಾವಿರ ಬೆರಳಚ್ಚುಗಳನ್ನು ಈತ ಬೇರೊಬ್ಬನಿಂದ ಖರೀದಿಸಿದ್ದ. ಆದರೆ ಇಷ್ಟು ಮಂದಿಯ ಫಿಂಗರ್‌ಪ್ರಿಂಟ್‌ ಅವನಿಗೆ ಹೇಗೆ ಸಿಕ್ಕಿದವು ಎಂಬ ಮಾಹಿತಿ ತಿಳಿದುಬಂದಿಲ್ಲ. ಈ ಬೆರಳಚ್ಚುಗಳನ್ನು ಬಳಸಿ ನಕಲಿ ಐಡಿಗಳನ್ನು ಸೃಷ್ಟಿಸಿ ವಂಚಿಸುವುದು ಈತನ ಕೆಲಸ.

“ನಮ್ಮ ಕೈಗೆ ಒಬ್ಬ ಮಾತ್ರ ಸಿಕ್ಕಿಬಿದ್ದಿದ್ದಾನೆ. ಈ ರೀತಿ ವ್ಯಕ್ತಿಗಳ ಡಿಜಿಟಲ್‌ ಐಡೆಂಟಿಟಿಯನ್ನು ಕದ್ದು ಹಣ ಮಾಡುವ ಎಷ್ಟೋ ಮಂದಿ ಇರಬಹುದು. ಅವರ ಬಗ್ಗೆ ಎಚ್ಚರಿಕೆಯಿಂದಿರಿ’ ಎಂದು ನಾಗರಿಕರಿಗೆ ಸೈಬರ್‌ ಕ್ರೈಂ ಪೊಲೀಸರು ಸಲಹೆ ನೀಡಿದ್ದಾರೆ.

ವಂಚಕ ಏನು ಮಾಡುತ್ತಿದ್ದ?
2 ಸಾವಿರ ಬೆರಳಚ್ಚುಗಳನ್ನು ಹೊಂದಿದ್ದ ವಂಚಕ ಮೊದಲಿಗೆ ಕದ್ದ ಬಯೋಮೆಟ್ರಿಕ್‌ ವಿವರಗಳನ್ನು ಬಳಸಿ, ಅಷ್ಟೂ ಮಂದಿಯ ಹೆಸರಿನಲ್ಲಿ ಸಿಮ್‌ ಕಾರ್ಡ್‌ ಖರೀದಿಸುತ್ತಿದ್ದ. ಅನಂತರ ಆಯಾ ವ್ಯಕ್ತಿಗಳ ಹೆಸರಿನಲ್ಲಿ ಕೈವೆಸಿ ಮಾಡಿಸಿಕೊಂಡು, ಒಟಿಪಿ ವಂಚನೆ ಮಾಡುತ್ತ ಹಣ ದೋಚುತ್ತಿದ್ದ. ಇಷ್ಟೇ ಅಲ್ಲದೆ ಕದ್ದಿರುವ ಮಾಹಿತಿಗಳನ್ನು ಬಳಸಿ ಸಾಮಾಜಿಕ ಜಾಲತಾಣಗಳಲ್ಲಿ ಖಾತೆಗಳನ್ನು ತೆರೆದಿರುವ ಪ್ರಕರಣಗಳೂ ವರದಿಯಾಗಿವೆ ಎಂದು ಪೊಲೀಸರು ಹೇಳಿದ್ದಾರೆ.

ಬೆರಳಚ್ಚು ಮೂಲಕ
ಏನೇನು ಮಾಡಬಹುದು?
– ಕದ್ದ ಫಿಂಗರ್‌ಪ್ರಿಂಟ್‌ ಬಳಸಿ ಹ್ಯಾಕರ್‌ಗಳು ನಿಮ್ಮ ಫೋನ್‌, ಲ್ಯಾಪ್‌ಟಾಪ್‌ ಗಳನ್ನು ತಮ್ಮ ನಿಯಂತ್ರಣಕ್ಕೆ ಪಡೆಯಬಹುದು.
– ಆನ್‌ಲೈನ್‌ ಖಾತೆ ಮತ್ತು ಡಿಜಿಟಲ್‌ ವ್ಯಾಲೆಟ್‌ಗಳನ್ನುಅನ್‌ಲಾಕ್‌ ಮಾಡಿ ಹಣ ಕಬಳಿಸಬಹುದು.
– ನಿಮ್ಮ ಇಮೇಲ್‌ಗ‌ಳಿಗೆ ಬಂದಿರುವ ಸಂದೇಶ, ಮಾಹಿತಿ ಬಳಸಿಕೊಳ್ಳಬಹುದು ಅಥವಾ ಪಾಸ್‌ವರ್ಡ್‌ ರೀಸೆಟ್‌ ಇಮೇಲ್‌ ಪಡೆಯಬಹುದು
– ಡಿವೈಸ್‌ಗಳಲ್ಲಿರುವ ವೈದ್ಯಕೀಯ ಮಾಹಿತಿ ಕದ್ದು, ನಿಮ್ಮ ಆರೋಗ್ಯ ವಿಮೆಯ ಸೌಲಭ್ಯವನ್ನು ತಾವೇ ಪಡೆಯಬಹುದು ಅಥವಾ ಡಾರ್ಕ್‌ವೆಬ್‌ನಲ್ಲಿ ಮಾರಾಟ ಮಾಡಬಹುದು.
– ಖಾಸಗಿ ಫೋಟೋ, ದಾಖಲೆ ತೋರಿಸಿ ನಿಮ್ಮನ್ನು ಬ್ಲ್ಯಾಕ್‌ಮೇಲ್ ಮಾಡಿ ಹಣ ದೋಚಬಹುದು.

Advertisement

 

Advertisement

Udayavani is now on Telegram. Click here to join our channel and stay updated with the latest news.

Next