Advertisement

ದ್ವಿಚಕ್ರ ವಾಹನ ಕಳ್ಳರ ಹಾವಳಿ ಹೆಚ್ಚಳ: ಇರಲಿ ಎಚ್ಚರ 

08:43 PM Sep 22, 2021 | Team Udayavani |

ಮಹಾನಗರ: ಮಹಾ ನಗರವೂ ಸಹಿತ ಮಂಗಳೂರು ಪೊಲೀಸ್‌ ಕಮಿ ಷನರೆಟ್‌ ವ್ಯಾಪ್ತಿಯ ಹಲವೆಡೆ ದ್ವಿಚಕ್ರ ವಾಹನಗಳ ಕಳ್ಳತನ ಹೆಚ್ಚುತ್ತಿದ್ದು, ದ್ವಿಚಕ್ರ ವಾಹನ ಸವಾರರಲ್ಲಿ ಆತಂಕವನ್ನುಂಟು ಮಾಡಿದೆ.

Advertisement

ಒಂದು ತಿಂಗಳ ಅವಧಿಯಲ್ಲಿ 7 ಕಡೆಗಳಲ್ಲಿ ದ್ವಿಚಕ್ರ ವಾಹನಗಳ ಕಳವು ನಡೆದಿರುವುದು ವರದಿಯಾಗಿದೆ. ಮಂಗಳೂರು ನಗರ ಮಾತ್ರವಲ್ಲದೆ ಮೂಡುಬಿದಿರೆ, ಉಳ್ಳಾಲ ಪರಿಸರದಲ್ಲಿಯೂ ದ್ವಿಚಕ್ರ ವಾಹನಗಳನ್ನು ಕಳವು ಮಾಡಲಾಗಿದೆ.

10-15 ನಿಮಿಷದಲ್ಲೇ ಮಾಯ!:

ಮೊಯಿದ್ದಿನ್‌ ಇರ್ಫಾನ್‌ ಸೆ. 11ರಂದು ಬೆಳಗ್ಗೆ 11.15ರ ವೇಳೆಗೆ ಮಂಗಳೂರು ನಗರದ ಕಾರ್‌ಸ್ಟ್ರೀಟ್‌ನ ಫ್ಲವರ್‌ ಮಾರ್ಕೆಟ್‌ ಹಿಂಬದಿ ಅನಂತೇಶ್ವರ ಹೊಸ ಕಟ್ಟಡದ ಎದುರುಗಡೆ ರಸ್ತೆ ಬದಿಯಲ್ಲಿ ಪಾರ್ಕ್‌ಮಾಡಿದ್ದ ಸ್ಕೂಟರ್‌ 15 ನಿಮಿಷದ ಅವಧಿಯಲ್ಲಿಯೇ ಕಳವಾಗಿತ್ತು. ಸುರೇಶ್‌ ನಾಯಕ್‌ ಅವರು ಇದೇ ಪರಿಸರದಲ್ಲಿ ಸೆ. 3ರಂದು ಅಪರಾಹ್ನ 2.30ಕ್ಕೆ ಪಾರ್ಕ್‌ ಮಾಡಿದ್ದ ದ್ವಿಚಕ್ರ ವಾಹನ 3.30ರ ವೇಳೆಗೆ  ಬಂದು ನೋಡಿದಾಗ ಕಳವಾಗಿರುವುದು ಗೊತ್ತಾಗಿದೆ. ಇದಕ್ಕೂ ಮೊದಲು ಆ. 30ರಂದು ಸಂಜೆ 7 ಗಂಟೆಗೆ ಪಿವಿಎಸ್‌ ಮಾನಸಾ ಟವರ್‌ನ ಪಾರ್ಕಿಂಗ್‌ ಜಾಗದಲ್ಲಿ ಪ್ರದೀಪ್‌ ಕುಮಾರ್‌ ಅವರು ಪಾರ್ಕ್‌ ಮಾಡಿದ್ದ ದ್ವಿಚಕ್ರ ವಾಹನ ಅರ್ಧ ಗಂಟೆಯೊಳಗೆ ಕಳವಾಗಿತ್ತು.

ಮನೆಯಂಗಳದಿಂದಲೂ ಕದ್ದೊಯ್ದರು:

Advertisement

ಅಶೋಕನಗರ ದಡ್ಡಲ್‌ಕಾಡ್‌ ಎಂಬ ವಲ್ಲಿನ ಪೂಜಶ್ರೀ ಅವರು ಆ. 21ರಂದು ಬೆಳಗ್ಗೆ 8 ಗಂಟೆಗೆ ಪಾರ್ಕ್‌ ಮಾಡಿದ್ದ ದ್ವಿಚಕ್ರ ವಾಹನ 11 ಗಂಟೆಗೆ ನೋಡುವಾಗ ಕಳವಾಗಿರುವುದು ಗಮನಕ್ಕೆ ಬಂದಿತ್ತು.

ಕೀ ತೆಗೆಯದೆ ಎಡವಟ್ಟು :

ದ್ವಿಚಕ್ರ ವಾಹನವನ್ನು ಪಾರ್ಕ್‌ ಮಾಡಿದ ಅನಂತರ ಕೀ ಅದರಲ್ಲಿಯೇ ಬಿಟ್ಟು ಕೆಲವು ಸವಾರರು ಎಡವಟ್ಟು ಮಾಡಿಕೊಂಡಿದ್ದಾರೆ. ರತೀಶ್‌ ಕುಮಾರ್‌ ಅವರು ಸೆ. 12ರಂದು ರಾತ್ರಿ 7.45ಕ್ಕೆ ಮೂಡುಬಿದಿರೆ ಅಮರಶ್ರೀ ಟಾಕೀಸ್‌ ಬಳಿ ಇರುವ ಕಚೇರಿಯೊಂದರ ಬಳಿ ದ್ವಿಚಕ್ರ ನಿಲ್ಲಿಸಿದ್ದರು. ಕೀಯನ್ನು ಅದರಲ್ಲೇ ಬಿಟ್ಟು ಕಚೇರಿಗೆ ತೆರಳಿದ್ದರು. 10 ನಿಮಿಷ ಬಿಟ್ಟು ಬಂದು ನೋಡಿದಾಗ ಸ್ಕೂಟರ್‌ ಕಳವಾಗಿತ್ತು. ಸೆ. 14ರಂದು ಸಂಜೆ ಜನಾರ್ದನ ಜಯ ಶೆಟ್ಟಿಗಾರ್‌ ಅವರು ಹಂಪನಕಟ್ಟೆ ರೈಲು ನಿಲ್ದಾಣ ರಸ್ತೆಯ ಎಡಬದಿಯಲ್ಲಿ ಕೀ ಸಹಿತ ಪಾರ್ಕ್‌ ಮಾಡಿದ್ದ ದ್ವಿಚಕ್ರ ವಾಹನ ಕಳವಾಗಿತ್ತು.

ಅಡ್ಕದಲ್ಲಿಯೂ ಕಳವು :

ಉಳ್ಳಾಲ ಪೊಲೀಸ್‌ ಠಾಣಾ ವ್ಯಾಪ್ತಿಯ ಕೋಟೆಕಾರ್‌ ಗ್ರಾಮದ ಅಡ್ಕದ ಬಳಿಯ ಗ್ಯಾರೇಜ್‌ವೊಂದರ ಬಳಿ ರೂಪೇಶ್‌ ಅವರು ಆ. 10ರಂದು ಅಪರಾಹ್ನ 3 ಗಂಟೆಯ ವೇಳೆಗೆ ಪಾರ್ಕ್‌ ಮಾಡಿದ್ದ ದ್ವಿಚಕ್ರ ವಾಹನ 4.15ರ ವೇಳೆಗೆ ನೋಡುವಾಗ ಕಳವಾಗಿತ್ತು.

ವಶಪಡೆವರನ್ನು ವಿಚಾರಿಸಿದಾಗ ಅವರು ಮೂಡುಬಿದಿರೆ ಕೋಟ್‌ ರಸ್ತೆಯಲ್ಲಿ ಅಪಾರ್ಟ್‌ ಮೆಂಟ್‌ ಬಳಿ ಹ್ಯಾಂಡ್‌ಲಾಕ್‌ ಹಾಕದೆ ನಿಲ್ಲಿಸಿಟ್ಟಿದ್ದ ದ್ವಿಚಕ್ರ ವಾಹನವನ್ನು ಗುಜರಿಗೆ ಮಾರಾಟ ಮಾಡುವ ಉದ್ದೇಶ ದಿಂದ ಕಳವು ಮಾಡಿರುವುದು ಗೊತ್ತಾಗಿತ್ತು. ಇದನ್ನು ಹೊರತುಪಡಿಸಿದರೆ ಇತರ ಪ್ರಕರಗಳನ್ನು ಭೇದಿಸಲು ಸಾಧ್ಯವಾಗಿಲ್ಲ.

ಕಾರಿನ ಗಾಜು ಒಡೆದವರೂ ಪತ್ತೆಯಾಗಿಲ್ಲ:
ನಗರದ ಮೂರು ಕಡೆಗಳಲ್ಲಿ ನಿಲ್ಲಿಸಿಡಲಾಗಿದ್ದ ಕಾರಿನ ಗಾಜನ್ನು ಒಡೆದು ಅದರೊಳಗಿದ್ದ ಲ್ಯಾಪ್‌ಟಾಪ್‌ ಮತ್ತಿತರ ವಸ್ತುಗಳನ್ನು ಕಳವು ಮಾಡಿದ ಘಟನೆ ತಿಂಗಳ ಹಿಂದೆ ಹಾಡುಹಗಲೇ ನಡೆದಿತ್ತು. ಆ ಪ್ರಕರಣಗಳ ಆರೋಪಿಗಳು ಕೂಡ ಪತ್ತೆಯಾಗಿಲ್ಲ.

ಪ್ರಕರಣ ಭೇದಿಸಲು ಸಾಧ್ಯವಾಗಿಲ್ಲ:

ಸೆ. 8ರಂದು ಮೂಡುಬಿದಿರೆಯ ವಿದ್ಯಾ ಗಿರಿ ಕಡೆಗೆ ದ್ವಿಚಕ್ರ ವಾಹನವನ್ನು ತಳ್ಳಿಕೊಂಡು ಹೋಗುತ್ತಿದ್ದ ಇಬ್ಬರನ್ನು ವಶಕ್ಕೆ ಪಡೆಯಲಾಗಿತ್ತು.

ನಿರ್ಲಕ್ಷ್ಯ ಬೇಡ :

  • ಕೀಯನ್ನು ವಾಹನದಲ್ಲೇ ಬಿಟ್ಟು ಹೋಗದಿರಿ
  • ಹ್ಯಾಂಡ್‌ಲಾಕ್‌ ಹಾಕುವುದನ್ನು ಮರೆಯದಿರಿ
  • ಸಾಧ್ಯವಾದಷ್ಟು ಭದ್ರತಾ ಸಿಬಂದಿ/ಸಿಸಿ ಕೆಮರಾ ಇರುವ ಸ್ಥಳದಲ್ಲೇ ಪಾರ್ಕ್‌ ಮಾಡಿ
  • ದಾಖಲೆ ಪತ್ರ, ಬೆಲೆ ಬಾಳುವ ವಸ್ತು ಗಳನ್ನು ವಾಹನದಲ್ಲಿಯೇ ಬಿಡಬೇಡಿ
Advertisement

Udayavani is now on Telegram. Click here to join our channel and stay updated with the latest news.

Next