ಬೆಂಗಳೂರು: ದಕ್ಷಿಣ ಮತ್ತು ಉತ್ತರ ವಿಭಾಗದ ಪೊಲೀಸರು ಮೂರು ಪ್ರತ್ಯೇಕ ದ್ವಿಚಕ್ರ ವಾಹನಗಳ ಕಳವು ಪ್ರಕರಣಗಳಲ್ಲಿ ನಾಲ್ವರು ಆರೋಪಿಗಳನ್ನು ಬಂಧಿಸಿ, 21 ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ.
ಮನೆ ಮುಂಭಾಗ ನಿಲುಗಡೆ ಮಾಡಿದ್ದ ದ್ವಿಚಕ್ರ ವಾಹನಗಳ ಕಳವು ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಜೆ.ಪಿ.ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಕರಿಸಂದ್ರ ನಿವಾಸಿಗಳಾದ ಶೇಖ್ ಮುಜಾಮಿಲ್ ಪಾಷಾ(25) ಮತ್ತು ಮೊಹಮ್ಮದ್ ಫಯಾಜ್(26) ಬಂಧಿತರು.
ಆರೋಪಿಗಳಿಂದ 4 ಲಕ್ಷ ರೂ. ಮೌಲ್ಯದ 7 ಬೈಕ್‌ಗಳನ್ನು ಜಪ್ತಿ ಮಾಡಲಾಗಿದೆ. ಮೋಜಿನ ಜೀವನಕ್ಕಾಗಿ ಮನೆ ಮುಂದೆ ನಿಲುಗಡೆ ಮಾಡಿದ್ದ ಬೈಕ್‌ಗಳ ಹ್ಯಾಂಡಲ್ ಲಾಕ್ ಮುರಿದು ಕಳವು ಮಾಡಿ, ಬೇರೆಡೆ ಮಾರಾಟ ಮಾಡುತ್ತಿದ್ದರು. ಇತ್ತೀಚೆಗೆ ಠಾಣೆ ವ್ಯಾಪ್ತಿಯಲ್ಲಿ ಬೈಕ್‌ವೊಂದನ್ನು ಕದ್ದಿದ್ದರು. ಈ ಸಂಬಂಧ ನೀಡಿದ ದೂರಿನ ಮೇರೆಗೆ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು. ಈ ಸಂಬಂಧ ಜೆ.ಪಿ.ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
4 ಲಕ್ಷ ರೂ. ಮೌಲ್ಯದ ಬೈಕ್‌ಗಳು ಜಪ್ತಿ: ಹೋಟೆಲ್ ಮಂದೆ ನಿಲುಗಡೆ ಮಾಡಿದ್ದ ಬೈಕ್‌ಗಳ ಕಳವು ಮಾಡುತ್ತಿದ್ದ ಇಲಿಯಾಜ್ ನಗರದ ನಿವಾಸಿ ಸಾದೀಕ್ (23) ಎಂಬಾತನನ್ನು ಕುಮಾರಸ್ವಾಮಿ ಲೇಔಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಈತನಿಂದ 4 ಲಕ್ಷ ರೂ. ಮೌಲ್ಯದ 7 ಬೈಕ್‌ಗಳನ್ನು ವಶಕ್ಕೆ ಪಡೆಯಲಾಗಿದೆ. ಇತ್ತೀಚೆಗೆ ಠಾಣೆ ವ್ಯಾಪ್ತಿಯ ಹೋಟೆಲ್ ಮುಂಭಾಗ ನಿಲುಗಡೆ ಮಾಡಿದ್ದ ಬೈಕ್ ಕಳವು ಮಾಡಿದ್ದ. ಇನ್ನೊಂದು ಪ್ರಕರಣದಲ್ಲಿ ಮನೆ ಮುಂದೆ ನಿಲ್ಲಿಸಿದ್ದ ಬೈಕ್‌ಗಳ ಕಳವು ಮಾಡಿ, ಗುಜರಿ ವಸ್ತುಗಳ ಕಳವು ಮಾಡುತ್ತಿದ್ದ ಆರೋಪಿಯನ್ನು ಸೋಲದೇವನಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ತುಮಕೂರು ಮೂಲದ ತಿಲಕ್(30) ಬಂಧಿತ. ಈತನಿಂದ 8 ಲಕ್ಷ ರೂ. ಮೌಲ್ಯದ 7 ಬೈಕ್‌ಗಳನ್ನು ವಶಕ್ಕೆ ಪಡೆಯಲಾಗಿದೆ.