Advertisement

ಅಸಿಟೈಲಿನ್‌ ಅನಿಲದಿಂದ ದ್ವಿಚಕ್ರ ವಾಹನ ಚಾಲನೆ ಆವಿಷ್ಕಾರ

04:22 PM Feb 14, 2021 | Team Udayavani |

ಸಾಗರ: ಪರ್ಯಾಯ ಇಂಧನಗಳ ಕ್ಷೇತ್ರದಲ್ಲಿ ಹೊಸ ಆವಿಷ್ಕಾರಗಳು ನಡೆಯುತ್ತಿರುವ ಕಾಲಘಟ್ಟದಲ್ಲಿ ಇಂಜಿನಿಯರಿಂಗ್‌ ವಿದ್ಯಾರ್ಥಿಯೊಬ್ಬ ಸಹಪಾಠಿಗಳ ಜತೆ ಸೇರಿ ಅಸಿಟೈಲಿನ್‌ ಅನಿಲದಿಂದ ದ್ವಿಚಕ್ರ ವಾಹನ ಚಲಾಯಿಸುವ ಆವಿಷ್ಕಾರ ಮಾಡಿದ್ದು, ಹೊಸ ಚಿಂತನೆಗೆ ದಾರಿ ಮಾಡಿಕೊಟ್ಟಿದೆ. ಮಂಗಳೂರು ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿಯ ಇಂಜಿನಿಯರಿಂಗ್‌ ವಿದ್ಯಾರ್ಥಿ, ಮೂಲತಃ ಸಾಗರ ತಾಲೂಕಿನ ಹಂದಿಗೋಡಿನ ಎಚ್‌. ಎಸ್‌. ಗೌತಮ ಅವರು ಕ್ಯಾಲ್ಸಿಯಂ ಕಾಬೈìಡ್‌ ಬಳಸಿ ನೀರಿನ ವೇಪರೈಸರ್‌ ಮೂಲಕ ರಾಸಾಯನಿಕ ಕ್ರಿಯೆ ಘಟಿಸಿದಾಗ ಉತ್ಪತ್ತಿಯಾಗುವ ಅಸಿಟೈಲಿನ್‌ ಅನಿಲದಿಂದ ದ್ವಿಚಕ್ರ ವಾಹನ ಚಲಾಯಿಸುವ ಆವಿಷ್ಕಾರ ಮಾಡಿದ್ದಾರೆ. ಸಹ ವಿದ್ಯಾರ್ಥಿಗಳ ಜೊತೆ ಸೇರಿ ಇದರ ಪ್ರಾಜೆಕ್ಟ್ ಸಿದ್ಧಪಡಿಸಿ, ರಾಷ್ಟ್ರೀಯ ಸ್ಪರ್ಧೆಗೆ ಸಲ್ಲಿಸಿದ್ದಾರೆ. ಮೊದಲ ಮತ್ತು ಎರಡನೇ ಸುತ್ತಿನಲ್ಲಿ ಆಯ್ಕೆಯಾದ ಪ್ರಾಜೆಕ್ಟ್ ಈಗ ಗ್ರ್ಯಾಂಡ್ ಫಿನಾಲೆ ಹಂತದಲ್ಲಿದೆ.

Advertisement

ಈ ತಂತ್ರಜ್ಞಾನದಿಂದ ಪೆಟ್ರೋಲ್‌ ಬಳಸಿ ಚಲಿಸಿದ್ದಕ್ಕಿಂತ ಹೆಚ್ಚಿನ ಕಿಮೀ ಕ್ಷಮತೆಯನ್ನು ಪಡೆಯಬಹುದು. ಒಂದು ಲೀ. ಪೆಟ್ರೋಲ್‌ ನಲ್ಲಿ ಹಳ್ಳಿಗಾಡಿನ ರಸ್ತೆಯಲ್ಲಿ ಗರಿಷ್ಠ 59 ಕಿಮೀ ಮೈಲೇಜ್‌ ಸಿಕ್ಕರೆ ಅಸಿಟೈಲಿನ್‌ ಅನಿಲದಿಂದ 66 ಕಿಮೀವರೆಗೆ ಮೈಲೇಜ್‌ ಪಡೆಯಬಹುದು ಎಂದು ಪ್ರತಿಪಾದಿಸಲಾಗುತ್ತಿದೆ.

ಐಸಿ ಇಂಜಿನ್‌ ವಾಹನಗಳಿಗೆ ಪೆಟ್ರೋಲ್‌ ಬದಲು ಅಸಿಟೈಲಿನ್‌ ಅನಿಲ ಬಳಸುವ ಮೂಲಕ ಕಡಿಮೆ ಪರಿಸರ ಮಾಲಿನ್ಯ, ಕಡಿಮೆ ಖರ್ಚು ಮತ್ತು ಉತ್ತಮ ನಿರ್ವಹಣೆ ಸಾಧಿ ಸಲು ಸಾಧ್ಯ. ಅಸಿಟೈಲಿನ್‌ ಅನಿಲ ಅವಲಂಬಿತ ವಾಹನಗಳಿಗೆ ಭವಿಷ್ಯದಲ್ಲಿ ಸ್ಟೇಷನ್‌ ಗಳ ಮೂಲಕ ಕ್ಯಾಲ್ಸಿಯಂ ಕಾಬೈìಡ್‌ ಪೂರೈಕೆ ಸಾಧ್ಯ ಎನ್ನುವುದನ್ನು ಗೌತಮ ಪ್ರತಿಪಾದಿಸುತ್ತಾರೆ. ಈಗಾಗಲೇ ಗೌತಮ ತನ್ನ ತಂದೆಯ ದ್ವಿಚಕ್ರ ವಾಹನಕ್ಕೆ ಪ್ರತ್ಯೇಕ ಟ್ಯಾಂಕ್‌ ಅಳವಡಿಸಿ, ಅಸಿಟೈಲಿನ್‌ ಅನಿಲವನ್ನು ಇಂಧನವಾಗಿ ಬಳಸಿ ಸಾಧಕ-ಬಾಧಕಗಳನ್ನು ಪರೀಕ್ಷಿಸಿದ್ದಾರೆ. ಪ್ರತ್ಯೇಕ ಟ್ಯಾಂಕ್‌ನೊಳಗಿಡಲಾದ ಕ್ಯಾಲ್ಸಿಯಂ ಕಾರ್ಬೈಡ್, ನೀರು ಇತ್ಯಾದಿಗಳ ಪ್ರಮಾಣದ ಬಗ್ಗೆ ಅಗತ್ಯ ಸೂಚನೆ, ಅಪಘಾತದ ಸಂದರ್ಭ ಆಗಬಹುದಾದ ಪರಿಣಾಮ ಇನ್ನಿತರ ಸಂಗತಿಗಳನ್ನು ಪರೀಕ್ಷಿಸಿದ್ದಾರೆ. ಫಲಿತಾಂಶ ಆಶಾದಾಯಕವಾಗಿದೆ.

ಪ್ರಯೋಗಕ್ಕೆ ಅಗತ್ಯವಾಗಿದ್ದ ಕಾಲ್ಸಿಯಂ ಕಾಬೈìಡ್‌ ನ್ನು ಆನ್‌ಲೈನ್‌ ಮೂಲಕ ಕೆಜಿಗೆ 49 ರೂ. ದರದಲ್ಲಿ ತರಿಸಿಕೊಂಡಿದ್ದಾರೆ. ಈಗ ಕೋವಿಡ್ ಪ್ರಭಾವದಿಂದ ಅದು ತುಸು ದುಬಾರಿಯಾಗಿದ್ದು, ಕೆಜಿಗೆ 58-59 ರೂ. ದರದಲ್ಲಿ ದೊರಕುತ್ತದೆ. ಮನೆಯಲ್ಲಿಯೇ ಈ ಸಂಬಂಧ ಅಗತ್ಯ ಕಾರ್ಯಗಳನ್ನು ಗೌತಮ ನಿರ್ವಹಿಸಿದ್ದಾರೆ. ಐದು ಸಾವಿರ ರೂ. ವೆಚ್ಚದಲ್ಲಿ ಪ್ರತ್ಯೇಕ ಟ್ಯಾಂಕ್‌ ಅಳವಡಿಸಲು ಸಾಧ್ಯವಾಗಿದೆ. ನೂತನ ಆವಿಷ್ಕಾರದ ಉದ್ಯಮಶೀಲರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕೆಪಿಟಿಟಿ ಸ್ಪಾರ್‌ಕಲ್‌ ರಾಷ್ಟ್ರಮಟ್ಟದ ಸ್ಪರ್ಧೆ ಆಯೋಜಿಸುತ್ತಿದೆ. ಗೌತಮ ಅವರು ಸಲ್ಲಿಸಿದ ಪ್ರಾಜೆಕ್ಟ್ ಟಾಪ್‌ 100ರ ಮನ್ನಣೆ ಸಹ ಗಳಿಸಿದೆ. ಮುಂದಿನ ಹಂತದ ಫಲಿತಾಂಶಕ್ಕಾಗಿ ಗೌತಮ ಕಾಯುತ್ತಿದ್ದಾರೆ.

ಇದನ್ನೂ ಓದಿ:19 ರಂದು ಚಿಕೇನಕೊಪ್ಪ ಶರಣರ ಪುಣ್ಯಸ್ಮರಣೆ -ಜಾತ್ರೋತ್ಸವ

Advertisement

ಹಿರಿಯ ವಿದ್ಯಾರ್ಥಿಗಳು ಕೆಪಿಟಿಟಿ ಸ್ಪಾರ್‌ ಕಲ್‌ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ನವೀನ ಆವಿಷ್ಕಾರದ ಉದ್ಯಮಶೀಲರನ್ನು ಉತ್ತೇಜಿಸುವ ಸ್ಪರ್ಧೆ ಇದು. ರಿಸರ್ಚ್‌ ಪೇಪರ್‌ನಲ್ಲಿ ಈ ಬಗ್ಗೆ ಓದಿದ್ದರಿಂದ ಅಸಿಟೈಲಿನ್‌ ಬಳಕೆಯ ಸಾಧ್ಯತೆ ಹೊಳೆಯಿತು. ಮಾಲಿನ್ಯದ ಅಪಾಯಗಳಿಂದ ವಿದೇಶಗಳಲ್ಲಿ 2030ರಲ್ಲಿ ಪೆಟ್ರೋಲ್‌ ವಾಹನಗಳನ್ನು ನಿಷೇಧಿಸುವ ಸಾಧ್ಯತೆಯಿದೆ. ಭಾರತದಲ್ಲಿ ಪೆಟ್ರೋಲ್‌ ಬಳಕೆ ಇಲ್ಲದ ವಾಹನ ಚಾಲನೆಗೆ ಪೂರಕ ಆವಿಷ್ಕಾರಗಳಿಗೆ ಅವಕಾಶವಿದೆ.

ಎಚ್‌.ಎಸ್‌.ಗೌತಮ

Advertisement

Udayavani is now on Telegram. Click here to join our channel and stay updated with the latest news.

Next