ವಾಡಿ: ಪಟ್ಟಣದಲ್ಲಿ ನ್ಯೂ ಟೌನ್ ನಿರ್ಮಾಣ ಹಾಗೂ ಶೈಕ್ಷಣಿಕ ಸಂಕೀರ್ಣ ನಿರ್ಮಿಸಲು 100ಕೋಟಿ ರೂ. ಮಂಜೂರು ಮಾಡುವ ಮೂಲಕ ಪ್ರಗತಿಗೆ ಚಾಲನೆ ನೀಡಿರುವ ಶಾಸಕ ಪ್ರಿಯಾಂಕ್ ಖರ್ಗೆ, ಈಗ ನಗರದ ಮುಖ್ಯ ರಸ್ತೆಯನ್ನು ದ್ವೀಪಥ ರಸ್ತೆಯನ್ನಾಗಿ ಪರಿವರ್ತಿಸಿ ಪುಟ್‌ಪಾತ್ ಹಾಗೂ ರಸ್ತೆ ಮಧ್ಯದಲ್ಲಿ ಬೀದಿ ದೀಪ ಅಳವಡಿಸುವ ಕಾಮಗಾರಿಗೆ ಹಸಿರು ನಿಶಾನೆ ತೋರಿದ್ದರಿಂದ ಬೀದಿ ವ್ಯಾಪಾರಿಗಳು ಕಂಗಾಲಾಗಿದ್ದಾರೆ.
ಪಟ್ಟಣದ ಪ್ರಮುಖ ರಸ್ತೆಯಾಗಿ ಗುರುತಿಸಿಕೊಂಡಿರುವ ಶ್ರೀನಿವಾಸ ಗುಡಿ ವೃತ್ತದಿಂದ ರೈಲ್ವೆ ಮೇಲ್ಸೇತುವೆ ವರೆಗಿನ ಒಂದು ಕಿ.ಮೀ ರಸ್ತೆ ಸೌಂದರ್ಯೀಕರಣಕ್ಕೆ ಐದು ಕೋಟಿ ರೂ. ಅನುದಾನ ಮೀಸಲಿಡಲಾಗಿದೆ. ರಸ್ತೆಯ ಎರಡೂ ಬದಿಯಲ್ಲಿ ಪುಟ್ ಪಾತ್ ನಿರ್ಮಾಣಕ್ಕೆ ಪಿಡಬ್ಲ್ಯೂಡಿ ಇಲಾಖೆಯ ಎಇಇ ಮರೆಪ್ಪಾ ಬಳಿಚಕ್ರ ಮುಂದಾಗಿದ್ದಾರೆ.
ರಸ್ತೆಯುದ್ದಕ್ಕೂ ಮರಳು, ಜಲ್ಲಿಕಲ್ಲು ಗಳ ರಾಶಿ ಹಾಕಿಸಿ ಸೋಮವಾರ ಸ್ಥಳ ಪರಿಶೀಲಿಸಿದ್ದಾರೆ. ಅಧಿಕಾರಿಗಳ ಈ ಪ್ರಗತಿ ಕಾರ್ಯ ಬೀದಿ ವ್ಯಾಪಾರಿಗಳ ಆತಂಕಕ್ಕೆ ಕಾರಣವಾಗಿದೆ. ಕಳೆದ ಹಲವು ವರ್ಷಗಳಿಂದ ಪಟ್ಟಣದ ಪ್ರಮುಖ ವೃತ್ತಗಳಲ್ಲಿ ಗೂಡಂಗಡಿ ನಿರ್ಮಿಸಿಕೊಂಡು ಬದುಕು ಕಟ್ಟಿಕೊಂಡಿರುವ ನೂರಾರು ಜನ ಬೀದಿ ವ್ಯಾಪಾರಿಗಳ ಪಾಲಿಗೆ ಅಭಿವೃದ್ಧಿಯೇ ಮಾರಕವಾಗಿ ಪರಿಣಮಿಸಿದ್ದು, ನುಂಗ ಲಾರದ ತುತ್ತಾಗಿ ಕಾಡುತ್ತಿದೆ. ಪುಟ್‌ಪಾತ್ ಕಾಮಗಾರಿ ಆರಂಭಿಸಲಾಗುತ್ತಿದ್ದು, ರಸ್ತೆ ಬದಿಯ ಗೂಡಂಗಡಿಗಳನ್ನು ತೆರವು ಮಾಡಬೇಕು ಎಂದು ಸೂಚಿಸಿರುವ ಪುರಸಭೆ ಅಧ್ಯಕ್ಷೆ ಝರೀನಾಬೇಗಂ, ಮುಖ್ಯಾಧಿಕಾರಿ ಡಾ| ಚಿದಾನಂದ ಸ್ವಾಮಿ ವಾರದ ಗಡವು ನೀಡಿದ್ದಾರೆ.
ಅಧಿಕಾರಿಗಳ ಆದೇಶದಿಂದ ಕಂಗಾಲಾಗಿರುವ ಬೀದಿ ವ್ಯಾಪಾರಿಗಳು ದಿಕ್ಕೆಟ್ಟಿದ್ದಾರೆ. ಬದುಕಿನ ಆಧಾರ ಸ್ತಂಭವಾಗಿರುವ ಬೀದಿ ವ್ಯಾಪಾರವೇ ಈಗ ಬೀದಿಗೆ ತಂದು ನಿಲ್ಲಿಸಿದ್ದು, ಮುಂದೇನು ಎಂಬ ಚಿಂತೆ ಎದುರಾಗಿದೆ. ನಮಗೆ ಪಯಾರ್ಯ ವ್ಯವಸ್ಥೆ ಕಲ್ಪಿಸಬೇಕು ಎಂದು ವ್ಯಾಪಾರಿಗಳು ಪುರಸಭೆ ಅಧಿಕಾರಿಗಳಲ್ಲಿ ಮನವಿ ಮಾಡಿದ್ದಾರೆ.
ಜನಸಂಖ್ಯೆಯಲ್ಲಿ ಮತ್ತು ವಾಹನ ದಟ್ಟಣೆಯಲ್ಲಿ ಹೆಚ್ಚಳ ಕಾಣುತ್ತಿರುವ ವಾಡಿ ನಗರಕ್ಕೆ ರಸ್ತೆ ಸುರಕ್ಷತೆ ಮುಖ್ಯವಾಗಿದೆ. ದ್ವೀಪಥ ರಸ್ತೆ ಪರಿವರ್ತನೆಯಿಂದ ಅಪಘಾತಗಳನ್ನು ತಗ್ಗಿಸಬಹುದಾಗಿದೆ. ನಗರ ಸೌಂದರ್ಯವೂ ಹೆಚ್ಚುತ್ತದೆ. ಪಾದಚಾರಿಗಳಿಗೆ ಮತ್ತು ವಿದ್ಯಾರ್ಥಿಗಳಿಗೆ ಪುಟ್‌ಪಾತ್ ಅನುಕೂಲವಾಗಲಿದೆ. ಇದರಿಂದ ಬೀದಿ ವ್ಯಾಪಾರಿಗಳಿಗೆ ತೊಂದರೆಯಾಗುತ್ತದೆ. ಏನಾದರೂ ಪರ್ಯಾಯ ವ್ಯವಸ್ಥೆ ಮಾಡೋಣ. ಸಾರ್ವಜನಿಕರು ಮತ್ತು ಬೀದಿ ವ್ಯಾಪಾರಿಗಳ ಸಹಕಾರ ಅಗತ್ಯವಾಗಿದೆ.
-ಝರೀನಾಬೇಗಂ, ಪುರಸಭೆ ಅಧ್ಯಕ್ಷ