ವರದಿ: ಹೇಮರಡ್ಡಿ ಸೈದಾಪುರ
ಹುಬ್ಬಳ್ಳಿ: ಕೊರೊನಾ ಸೋಂಕಿತ ಪ್ರಕರಣಗಳು ಹೆಚ್ಚಾಗುತ್ತಿದ್ದಂತೆ ಕೋವಿಡ್ ಬಯೋ ಮೆಡಿಕಲ್ ತ್ಯಾಜ್ಯವೂ ಗಣನೀಯವಾಗಿ ಹೆಚ್ಚಾಗುತ್ತಿದೆ. ಜಿಲ್ಲೆಯಲ್ಲಿ ಆಸ್ಪತ್ರೆ, ಕೋವಿಡ್ ಕೇರ್ ಕೇಂದ್ರ, ಹೋಂ ಐಸೋಲೇಶನ್ ಸೇರಿ ಪ್ರತಿನಿತ್ಯ 1.7ರಿಂದ 2 ಟನ್ ತ್ಯಾಜ್ಯ ಉತ್ಪತ್ತಿಯಾಗಿದ್ದು, ಈ ತ್ಯಾಜ್ಯವನ್ನು ಖಾಸಗಿ ಸಂಸ್ಥೆಯ ಮೂಲಕ ಜಿಲ್ಲಾಡಳಿತ ಹಾಗೂ ಪಾಲಿಕೆ ವೈಜ್ಞಾನಿಕವಾಗಿ ವಿಲೇವಾರಿ ಹಾಗೂ ನಿರ್ವಹಣೆ ಮಾಡುತ್ತಿದೆ.
ಸೋಂಕಿತ ಮುಟ್ಟಿದ, ಬಳಸಿದ ವಸ್ತುವಿನಿಂದ ಹಿಡಿದು ಚಿಕಿತ್ಸೆಗೆ ಬಳಸಿದ ತ್ಯಾಜ್ಯವನ್ನು ಕೋವಿಡ್ ವೈದ್ಯಕೀಯ ತ್ಯಾಜ್ಯ ಎಂದು ಪರಿಗಣಿಸಲಾಗಿದೆ. ಇದರೊಂದಿಗೆ ಹೋಂ ಐಸೋಲೇಶನ್, ಕೋವಿಡ್ ಕೇರ್ ಕೇಂದ್ರಗಳ ತ್ಯಾಜ್ಯವೂ ಸೇರಿಕೊಂಡಿದೆ. ಸೋಂಕು ನಿಯಂತ್ರಣದಷ್ಟೇ ಈ ತ್ಯಾಜ್ಯದ ವಿಲೇವಾರಿ ಪ್ರಮುಖವಾಗಿದ್ದು, ಜಿಲ್ಲೆಯಲ್ಲಿ ಉತ್ತಮವಾಗಿ ನಿರ್ವಹಿಸಲಾಗುತ್ತಿದೆ. ಇಲ್ಲಿನ ತಾರಿಹಾಳದಲ್ಲಿರುವ ರಿಯೋ ಗ್ರೀನ್ ಎನ್ವಿರಾನ್ ಇಂಡಿಯಾ ಸಂಸ್ಥೆ ಈ ತ್ಯಾಜ್ಯ ನಿರ್ವಹಣೆ ಹೊಣೆ ಹೊತ್ತಿದೆ. ಇದಕ್ಕಾಗಿ ಸಿಬ್ಬಂದಿ, ವಾಹನ ಸೇರಿದಂತೆ ಎಲ್ಲವನ್ನೂ ಪ್ರತ್ಯೇಕವಾಗಿ ಮೀಸಲಿರಿಸಲಾಗಿದೆ.
ಮಹಾನಗರ ಸೇರಿದಂತೆ ಜಿಲ್ಲೆಯ ಎಲ್ಲಾ ಆಸ್ಪತ್ರೆಗಳ ತ್ಯಾಜ್ಯವನ್ನು ವಿಲೇವಾರಿ ಹೊಣೆ ಹೊತ್ತಿದ್ದು, ಜಿಲ್ಲೆಯಲ್ಲಿ ಕೋವಿಡ್ ಸೋಂಕು ಕಾಣಿಸಿಕೊಂಡಾಗಿನಿಂದಲೂ ಇಲ್ಲಿಯವರೆಗೆ ಸುಮಾರು 350 ಟನ್‌ಗೂ ಹೆಚ್ಚು ಕೋವಿಡ್ ತ್ಯಾಜ್ಯ ನಿರ್ವಹಣೆ ಮಾಡಲಾಗಿದೆ. ಕಳೆದ ವರ್ಷ ಮಾರ್ಚ್ 25 ರಿಂದಲೇ ಕೋವಿಡ್ ತ್ಯಾಜ್ಯ ವಿಲೇವಾರಿ ಕಾರ್ಯ ಆರಂಭವಾಗಿ ಅಕ್ಟೋಬರ್‌ವರೆಗೂ ಹೆಚ್ಚನ ಪ್ರಮಾಣದಲ್ಲಿ ತ್ಯಾಜ್ಯ ಉತ್ಪಾದನೆಯಾಗುತ್ತಿತ್ತು. ನಂತರ ಸೋಂಕಿತ ಪ್ರಕರಣಗಳು ಕಡಿಮೆಯಾದ ಹಿನ್ನೆಲೆಯಲ್ಲಿ ತ್ಯಾಜ್ಯ ಕಡಿಮೆಯಾಗಿ ಇತರೆ ಬಯೋ ತ್ಯಾಜ್ಯ ಹೆಚ್ಚಾಗಿತ್ತು. ಆದರೆ 2021 ಮಾರ್ಚ್ 20 ರ ನಂತರದ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಎರಡು ತಿಂಗಳಲ್ಲಿ ಐದು ಸಾವಿರ ಗಡಿ ದಾಟಿದೆ. ಹೀಗಾಗಿ ಕೋವಿಡ್ ತ್ಯಾಜ್ಯ ಹೆಚ್ಚಾಗಿ ಇತರೆ ವೈದ್ಯಕೀಯ ತ್ಯಾಜ 0.5 ಟನ್‌ಗೆ ಸೀಮಿತವಾಗಿದೆ. ಕೋವಿಡ್ ತ್ಯಾಜ್ಯ 2 ಟನ್ ವರೆಗೂ ತಲುಪಿದೆ. ಸೋಂಕಿತರ ಪ್ರಮಾಣ ಹೆಚ್ಚಳವಾಗುತ್ತಿರುವುದನ್ನು ಗಮನಿಸಿದರೆ ಈ ತ್ಯಾಜ್ಯ ಮತ್ತಷ್ಟು ಹೆಚ್ಚಳವಾಗುವ ಸಾಧ್ಯತೆ ತಳ್ಳಿ ಹಾಕುವಂತಿಲ್ಲ.