ಬೆಳಗಾವಿ: ದೀಪಾವಳಿ ಹಬ್ಬದ ಲಕ್ಷ್ಮೀ ಪೂಜಾ ಸಾಮಗ್ರಿಗಳನ್ನು ತಾಲೂಕಿನ ಸಾಂಬ್ರಾ ಗ್ರಾಮದ ಕೆರೆಯಲ್ಲಿ ರವಿವಾರ ವಿಸರ್ಜನೆ ಮಾಡಲು ಹೋಗಿದ್ದ ಮೂವರು ಸಹೋದರಿಯರ ಪೈಕಿ ಇಬ್ಬರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದು, ಅಕ್ಕನನ್ನು ರಕ್ಷಿಸಲಾಗಿದೆ.
ಸಾಂಬ್ರಾ ಗ್ರಾಮದ ನೇತ್ರಾ ಕೊಳವಿ(8) ಹಾಗೂ ಪ್ರಿಯಾ ಕೊಳವಿ(6) ಎಂಬ ಸಹೋದರಿಯರು ಮೃತಪಟ್ಟಿದ್ದು, ಅಕ್ಕ ಸಂಧ್ಯಾ ಕೊಳವಿ(10)ಯನ್ನು ರಕ್ಷಿಸಲಾಗಿದೆ.
ಕೆರೆಯಲ್ಲಿ ಪೂಜಾ ಸಾಮಗ್ರಿಗಳನ್ನು ವಿಸರ್ಜನೆ ಮಾಡುವಾಗಿ ಈ ಮೂವರೂ ಸಹೋದರಿಯರು ಕಾಲು ಜಾರಿ ನೀರಿನಲ್ಲಿ ಬಿದ್ದಿದ್ದಾರೆ. ಇದನ್ನು ನೋಡಿದ ಗ್ರಾಮಸ್ಥರು ಕೂಡಲೇ ನೀರಿಗೆ ಇಳಿದು ಬಾಲಕಿಯರನ್ನು ಹೊರಗೆ ತಂದಿದ್ದಾರೆ. ಇದರಲ್ಲಿ ನೇತ್ರಾ ಮೃತಪಟ್ಟಿದ್ದಳು. ಪ್ರಿಯಾ ಕೊಳವಿಯನ್ನು ಆಸ್ಪತ್ರೆಗೆ ದಾಖಲಿಸುವಾಗ ಮೃತಪಟ್ಟಿದ್ದಾಳೆ. ಅಕ್ಕ ಸಂಧ್ಯಾಳನ್ನು ರಕ್ಷಿಸಲಾಗಿದೆ.
ಈ ಬಾಲಕಿಯರ ತಂದೆ ಈರಣ್ಣ ಕೊಳವಿ ಮೂಲತಃ ಗೋಕಾಕ ತಾಲೂಕಿನ ಯದ್ದಲಗುಡ್ಡ ಗ್ರಾಮದವರು. ಸಾಂಬ್ರಾದಲ್ಲಿ ಬಾಡಿಗೆ ಮನೆಯಲ್ಲಿದ್ದು. ಕಾರವಾರರದಲ್ಲಿ ಭಾರತೀಯ ಸೇನೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಈರಣ್ಣ ರಜೆ ಮುಗಿಸಿ ವಾಪಸ್ ಹೋಗಿದ್ದರು. ಪತ್ನಿ ತನ್ನ ತವರು ಮನೆ ಕೊಣ್ಣೂರಕ್ಕೆ ಹೋಗಿ ರವಿವಾರ ಮಧ್ಯಾಹ್ನ ಸಾಂಬ್ರಾಕ್ಕೆ ವಾಪಸ್ ಬಂದಿದ್ದರು. ಮಧ್ಯಾಹ್ನ 3 ಗಂಟೆ ಸುಮಾರಿಗೆ ಈ ಅವಘಡ ಸಂಭವಿಸಿದೆ.
ಅಕ್ಕ ಪ್ರಾಣಾಪಾಯದಿಂದ ಪಾರು
ಮೂವರು ಸಹೋದರಿಯರು ಕೆರೆಯಲ್ಲಿ ಬಿದ್ದ ವಿಷಯ ತಿಳಿಯುತ್ತಿದ್ದಂತೆ ಗ್ರಾಪಂ ಸದಸ್ಯ ಭುಜಂಗ ಗಿರಮಲ್ ಹಾಗೂ ಜಿಪಂ ಮಾಜಿ ಸದಸ್ಯ ನಾಗೇಶ ದೇಸಾಯಿ ನೀರಿಗಿಳಿದಿದ್ದಾರೆ. ಕೂಡಲೇ ಮೂವರನ್ನು ಹೊರ ತೆಗೆದಿದ್ದಾರೆ. ಆದರೆ ನೇತ್ರಾ ಮತ್ತು ಪ್ರಿಯಾ ಕೊಳವಿಯ ಪ್ರಾಣ ಪಕ್ಷಿ ಹಾರಿ ಹೋಗಿತ್ತು. ಹಿರಿಯಕ್ಕ ಸಂಧ್ಯಾ ಪ್ರಾಣಾಪಾಯದಿಂದ ಪಾರಾಗಿದ್ದಾಳೆ. ಈ ಇಬ್ಬರೂ ಬಾಲಕಿಯರ ಸಾವಿನಿಂದ ಗ್ರಾಮದಲ್ಲಿ ಶೋಕ ಮಡುಗಟ್ಟಿದೆ.
ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದರು. ಮಾರಿಹಾಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.