Advertisement

Vijayapura ಎರಡು ಪ್ರತ್ಯೇಕ ದುರ್ಘಟನೆ: ರಥೋತ್ಸವದ ವೇಳೆ ಇಬ್ಬರ ಮೃತ್ಯು,

10:12 PM Apr 06, 2023 | Team Udayavani |

ವಿಜಯಪುರ: ಜಿಲ್ಲೆಯಲ್ಲಿ ಗುರುವಾರ ಎರಡು ಪ್ರತ್ಯೇಕ‌ ಘಟನೆಗಳಲ್ಲಿ ರಥೋತ್ಸವಗಳ ಸಂದರ್ಭದಲ್ಲಿ ಅವಘಡ ಸಂಭವಿಸಿ ಇಬ್ಬರು ಮೃತಪಟ್ಟಿದ್ದಾರೆ.

Advertisement

ಜಿಲ್ಲೆಯ ಸಿಂದಗಿ ತಾಲೂಕಿನ ಗೋಲಗೇರಿ ಗ್ರಾಮದಲ್ಲಿ ಗುರುವಾರ ಸಂಜೆ ಗೊಲ್ಲಾಳೇಶ್ವರ ರಥೋತ್ಸವಕ್ಕಾಗಿ ಕಳಸ ಕಟ್ಟುವಾಗ ಆಯತಪ್ಪಿ ಕೆಳಗೆ ಬಿದ್ದು ವ್ಯಕ್ತಿ ಮೃತಪಟ್ಟಿದ್ದಾರೆ.

ಮೃತ ದುರ್ದೈವಿಯನ್ನು ಸಾಹೇಬ ಪಟೇಲ್ ಖಾಜಾ ಪಟೇಲ್ ಕಾಚಾಪೂರ (55) ಎಂದು ಗುರುತಿಸಲಾಗಿದೆ. ಮೃತ ಸಾಹೇಬ ಪಟೇಲ್ ತನ್ನ 18ನೇ ವಯಸ್ಸಿನಿಂದಲೂ ಗೊಲ್ಲಾಳೇಶ್ವರ ರಥೋತ್ಸವಕ್ಕಾಗಿ ರಥದ ಕಳಶ ಕಟ್ಟುತ್ತ ಬರುತ್ತಿದ್ದರು.

ಸಾಹೇಬ ಪಟೇಲ ರಥದ ಮೇಲ್ತುದಿಯಲ್ಲಿ ಕಲಶ ಕಟ್ಟುವಾಗ ಕೈಯಲ್ಲಿದ್ದ ಹಗ್ಗ ಜಾರಿದೆ. ಇದರಿಂದ ಆಯತಪ್ಪಿ ಸಾಹೇಬ ಪಟೇಲ್ ರಥದ ಮೇಲ್ಭಾಗದಿಂದ ಕೆಳಗೆ ಬಿದ್ದಿದ್ದಾರೆ. ರಥದ ಮೇಲಿಂದ ಕೆಳಗೆ ಬಿದ್ದು ತೀವ್ರ ಗಾಯಗೊಂಡ ಸಾಹೇಬ ಪಟೇಲನನ್ನು ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ.

ರಥದ ಮೇಲಿಂದ ಸಾಹೇಬ ಪಟೇಲ್ ಬೀಳುವ ದೃಷ್ಯ ಮೊಬೈಲ್ ನಲ್ಲಿ ಸೆರೆಯಾಗಿದೆ. ದುರಂತ ಘಟನೆ ಹಿನ್ನಲೆಯಲ್ಲಿ ಗ್ರಾಮಸ್ಥರು ರಥೋತ್ಸವ ರದ್ದುಗೊಳಿಸಿದ್ದಾರೆ. ಜಾತ್ರೆಯ ಸಂಭ್ರದಲ್ಲಿದ್ದ ಗ್ರಾಮದಲ್ಲಿ ಏಕಾಏಕಿ ಸಂಭವಿಸಿದ ದುರಂತ ಘಟನೆಯಿಂದ ಶ್ಮಶಾನ ಮೌನ ಆವರಿಸಿದೆ.

Advertisement

ಪವಾಡ ಬಸವೇಶ್ವರ ಜಾತ್ರೆಯಲ್ಲೂ ಅವಘಡ

ಮುದ್ದೇಬಿಹಾಳ ತಾಲೂಕಿನ ಬಸರಕೋಡ ಪವಾಡ ಬಸವೇಶ್ವರ ಜಾತ್ರಾ ಮಹೋತ್ಸವ ಸಂದರ್ಭದಲ್ಲಿ ದುರಂತ ಸಂಭವಿಸಿದ್ದು, ಗುರುವಾರ ಸಂಜೆ ರಥೋತ್ಸವ ಇನ್ನೇನು ರಥ ಪಾದಗಟ್ಟೆ ತಲುಪುವ ಮುಕ್ತಾಯ ಹಂತದಲ್ಲಿದ್ದಾಗ ರಥ ಎಳೆಯುತ್ತಿದ್ದ ಯುವಕನ ಮೇಲೆ ರಥದ ಗಾಲಿ ಹರಿದು ಮೃತಪಟ್ಟಿದ್ದಾನೆ. ಮೃತ ದುರ್ದೈವಿ ಬಸರಕೋಡ ಗ್ರಾಮದ ಯಲ್ಲಪ್ಪ ವಣಿಕ್ಯಾಳ ಇವರ ಪುತ್ರ ನಾಗರಾಜ ಯಲ್ಲಪ್ಪ ವಣಿಕ್ಯಾಳ (25) ಎಂದು ಗುರುತಿಸಲಾಗಿದೆ.

ಭಾರಿ ಭಾರದ ರಥದ ಗಾಲಿಗಳು ಕಾಲಮೇಲೆ ಹರಿದ ಕಾರಣ ಗಂಭೀರವಾಗಿ ಗಾಯಗೊಂಡಿದ್ದ ಆತನನ್ನು ಚಿಕಿತ್ಸೆಗಾಗಿ ಬಾಗಲಕೋಟೆ ಖಾಸಗಿ ಆಸ್ಪತ್ರೆಗೆ ದಾಖಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೆ ಕೊನೆಯುಸಿರೆಳೆದಿದ್ದಾನೆ.

ಬಸರಕೋಡದ ಜಾತ್ರೆಯಲ್ಲಿ ಈ ಹಿಂದೆ ಇದೇ ರೀತಿಯ ಘಟನೆ ನಡೆದು ವ್ಯಕ್ತಿಯೊಬ್ಬ ಸಾವಿಗೀಡಾಗಿದ್ದ, ಇನ್ನೊಬ್ಬ ವ್ಯಕ್ತಿ ತೀವ್ರ ಗಾಯಗೊಂಡಿದ್ದ. ಈಗ ಮತ್ತೆ ಅವಘಡ ಸಂಭವಿಸಿದ್ದು ಭಕ್ತರ ಆತಂಕಕ್ಕೆ ಕಾರಣವಾಗಿದೆ. ಘಟನೆ ಕುರಿತು ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಚುನಾವಣಾಧಿಕಾರಿಗಳು ಸ್ಥಳಕ್ಕೆ ಧಾವಿಸಿ ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next