ಬೆಂಗಳೂರು: ಪದೇ ಪದೆ ಸಾರ್ವಜನಿಕರ ಶಾಂತಿಗೆ ಭಂಗ ಉಂಟು ಮಾಡುತ್ತಿದ್ದ ಇಬ್ಬರು ರೌಡಿಶೀಟರ್‌ಗಳನ್ನು ಉತ್ತರ ವಿಭಾಗ ಪೊಲೀಸರು ಗೂಂಡಾ ಕಾಯ್ದೆ ಅಡಿ ಬಂಧಿಸಿದ್ದಾರೆ.
ಮಹಾಲಕ್ಷ್ಮೀ ಲೇಔಟ್ ಠಾಣೆ ಪೊಲೀಸರು ಬಸವೇಶ್ವರನಗರ ನಿವಾಸಿ ಸಂಪತ್‌ರಾವ್ ಅಲಿಯಾಸ್ ಅಶೋಕ ಅಲಿಯಾಸ್ ಮತ್ತಿ (28) ಎಂಬಾತನನ್ನು ಬಂಧಿಸಿದ್ದಾರೆ.
ಆರೋಪಿ ಮಹಾಲಕ್ಷ್ಮೀ ಲೇಔಟ್ ಠಾಣೆ ರೌಡಿಶೀಟರ್ ಆಗಿದ್ದು, 2008ರಿಂದ(ಅಪ್ರಾಪ್ತ ವಯಸ್ಸಿನಿಂದಲೇ) ಅಪರಾಧ ಕೃತ್ಯಗಳಲ್ಲಿ ತೊಡಗುತ್ತಿದ್ದಾನೆ. ಇದುವರೆಗೂ ಈತನ ವಿರುದ್ಧ 31 ಅಪರಾಧ ಪ್ರಕರಣಗಳು ದಾಖಲಾಗಿವೆ. ಈತನ ವಿರುದ್ಧ ಕೊಲೆ, ಸುಲಿಗೆ, ದರೋಡೆ, ಅಪಹರಣ, ಕೊಲೆ ಯತ್ನ, ಕಳ್ಳತನ ಸೇರಿ ಹಲವಾರು ಅಪರಾಧ ಪ್ರಕರಣಗಳು ದಾಖಲಾಗಿವೆ.
2022ರಲ್ಲಿ ಮಹಾಲಕ್ಷ್ಮೀ ಲೇಔಟ್ ಠಾಣೆಯಲ್ಲಿ ದಾಖಲಾಗಿದ್ದ ಅಪಹರಣ, ಅಕ್ರಮ ಬಂಧನ ಆರೋಪದಲ್ಲಿ ಬಂಧನಕ್ಕೊಳಗಾಗಿದ್ದ. ಜಾಮೀನು ಪಡೆದು ಹೊರಬಂದು ಮತ್ತೆ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗುತ್ತಿದ್ದನು. ಜತೆಗೆ ಕೋರ್ಟ್‌ಗೆ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಎಂದು ಪೊಲೀಸರು ಹೇಳಿದರು.
ಮತ್ತೂಂದು ಪ್ರಕರಣದಲ್ಲಿ ಪೀಣ್ಯ ಪೊಲೀಸರು ದೊಡ್ಡಬಿದರಕಲ್ಲು ನಿವಾಸಿ ಮಂಜುನಾಥ್ ಅಲಿಯಾಸ್ ಕೋಳಿ ಮಂಜ (31) ಎಂಬಾತನನ್ನು ಬಂಧಿಸಲಾಗಿದೆ. ಈತನ ವಿರುದ್ಧ ನಗರದ 12 ಪೊಲೀಸ್ ಠಾಣೆಗಳಲ್ಲಿ ಕೊಲೆ ಯತ್ನ, ಮಹಿಳೆಯರ ಸರ ಕಳವು, ದರೋಡೆ, ಸುಲಿಗೆ ಪ್ರಕರಣಗಳು ದಾಖಲಾಗಿವೆ. 2017ರಿಂದ 2022ರವರೆಗೆ ಈತನ ವಿರುದ್ಧ 32 ಪ್ರಕರಣಗಳು ದಾಖಲಾಗಿವೆ. ಪೀಣ್ಯ ಠಾಣೆಯಲ್ಲಿ ದಾಖಲಾಗಿದ್ದ ಮನೆಗೆ ನುಗ್ಗಿ ಮಹಿಳೆಯರ ಮೇಲಿನ ಹಲ್ಲೆಗೆ ಸಂಬಂಧಿಸಿದಂತೆ ಬಂಧಿಸಲಾಗಿತ್ತು. ಜಾಮೀನು ಪಡೆದು ಹೊರಬಂದು ಮತ್ತೆ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗುತ್ತಿದ್ದನು ಎಂದು ಪೊಲೀಸರು ಹೇಳಿದರು.
ಈಹಿನ್ನೆಲೆಯಲ್ಲಿ ಇಬ್ಬರು ರೌಡಿಗಳನ್ನು ಗೂಂಡಾ ಕಾಯ್ದೆ ಅಡಿ ಬಂಧಿಸಿದ್ದು, ಒಂದು ವರ್ಷದ ಅವಧಿಯವರೆಗೆ ಬಂಧನದಲ್ಲಿರುತ್ತಾರೆ.