Advertisement

320 ವಿದ್ಯಾರ್ಥಿಗಳಿರುವ ಶಾಲೆಗೆ ಇಬ್ಬರೇ ಖಾಯಂ ಶಿಕ್ಷಕರು !

11:04 PM Aug 29, 2019 | Sriram |

ಕಾರ್ಕಳ: ಶತಮಾನ ಕಂಡ ಎಸ್‌ವಿಟಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮುನ್ನೂರ ಇಪ್ಪತ್ತು ವಿದ್ಯಾರ್ಥಿಗಳಿಗೆ ಬರೇ ಇಬ್ಬರು ಖಾಯಂ ಶಿಕ್ಷಕರು. ಒಂದನೇ ತರಗತಿಯಿಂದ 7ನೇ ತರಗತಿವರೆಗೆ ಹೊಂದಿರುವ ಈ ಶಾಲೆಗೆ ಕಳೆದ 25 ವರ್ಷಗಳಿಂದ ಶಿಕ್ಷಕರ ನೇಮಕವಾಗಿಲ್ಲ.

Advertisement

1934ರಲ್ಲಿ ಮೇಲ್ದರ್ಜೆಗೆ
1911ರಲ್ಲಿ ಕಾರ್ಕಳ ನಗರದ ಮಹಾಲಕ್ಷ್ಮೀ ದೇವಸ್ಥಾನದ ಸಮೀಪ ಸ್ವಂತ ಕಟ್ಟಡವನ್ನು ಹೊಂದಿ ಹಿಂದೂ ಬಾಲಿಕಾ ಶಾಲೆ ಎಂಬ ಹೆಸರಲ್ಲಿ ಕಾರ್ಯಾರಂಭ ಮಾಡಿದ್ದ ಈ ಶಾಲೆಯನ್ನು 1934ರಲ್ಲಿ ಹಿರಿಯ ಪ್ರಾಥಮಿಕ ಶಾಲೆಯಾಗಿ ಮೇಲ್ದರ್ಜೆಗೇರಿಸುವ ಮೂಲಕ ಎಸ್‌.ವಿ.ಟಿ. ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಎಂದು ಮರು ನಾಮಕರಣ ಮಾಡಲಾಗಿತ್ತು.

ಸಮವಸ್ತ್ರ ವಿತರಣೆ
ಅನುದಾನಿತ ಶಾಲೆಯಾಗಿರುವ ಕಾರಣ ಸರಕಾರದಿಂದ ದೊರೆಯುವ ಸೌಲಭ್ಯವಲ್ಲದೇ ಇಲ್ಲಿನ ವಿದ್ಯಾರ್ಥಿಗಳಿಗೆ ಸಮವಸ್ತ್ರವನ್ನು ಹಾಗೂ ನೋಟ್‌ ಪುಸ್ತಕವನ್ನು ಪ್ರತಿವರ್ಷ ಉಚಿತವಾಗಿ ನೀಡಲಾಗುತ್ತಿದೆ.

ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ದಾನಿಗಳ ಸಹಕಾರದೊಂದಿಗೆ ವಿಶೇಷ ವಿದ್ಯಾರ್ಥಿವೇತನ ಕೊಡಲಾಗುತ್ತಿದೆ. ಯಕ್ಷಗಾನ, ಯೋಗಾಸನ ಮೊದಲಾದ ಪಠ್ಯೇತರ ಚಟುವಟಿಕೆಗಳಿಗೆ ವಿಶೇಷ ಪ್ರೋತ್ಸಾಹ ನೀಡಲಾಗುತ್ತಿದೆ.

ಆದ್ಯತೆ ದೊರೆತಲ್ಲಿ ಅನುಕೂಲ
ತಾಲೂಕಿನ ಅನುದಾನಿತ ಶಾಲೆಗಳಲ್ಲಿ ಎಸ್‌ವಿಟಿಯಲ್ಲಿನ ವಿದ್ಯಾರ್ಥಿಗಳ ಸಂಖ್ಯೆ ಅತಿ ಹೆಚ್ಚು. ಹೀಗಾಗಿ ಹೆಚ್ಚುವರಿ ಶಿಕ್ಷಕರನ್ನು ನಿಯೋಜಿಸುವಾಗ ನಮ್ಮ ಶಾಲೆಗೂ ಆದ್ಯತೆ ದೊರೆತಲ್ಲಿ ಅನುಕೂಲ.
-ಎಂ. ಜಾನಕಿನಾಥ ರಾವ್‌,
ಮುಖ್ಯಶಿಕ್ಷಕರು, ಎಸ್‌ವಿಟಿ ಹಿರಿಯ ಪ್ರಾಥಮಿಕ ಶಾಲೆ

Advertisement

ಸರಕಾರ ಶಿಕ್ಷಕರನ್ನು ನೇಮಿಸಲಿ
ಸರಕಾರ ಅನುದಾನಿತ ಶಾಲೆಗಳಿಗೆ ಬೇಕಾಗಿರುವ ಶಿಕ್ಷಕರನ್ನು ಒದಗಿಸಬೇಕು. ಅನುದಾನಿತ ಶಾಲೆಗಳ ಶಿಕ್ಷಕರು ನಿವೃತ್ತಿಗೊಂಡಲ್ಲಿ ಮರುನೇಮಕವಾಗುತ್ತಿಲ್ಲ. ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಇಂತಹ ಶಾಲೆಗಳಿಗೂ ಶಿಕ್ಷಕರನ್ನು ನೇಮಕ ಮಾಡಬೇಕು ಎನ್ನುವುದು ಶಿಕ್ಷಣ ತಜ್ಞರ ಅಭಿಮತ.

ಮನವಿಗೆ ಸ್ಪಂದಿಸಿಲ್ಲ
ನೂರು ವರುಷ ಇತಿಹಾಸ ಹೊಂದಿರುವ ಎಸ್‌ವಿಟಿ ಕನ್ನಡ ಮಾಧ್ಯಮ ಶಾಲೆಯನ್ನು ಉತ್ತಮ ರೀತಿಯಲ್ಲಿ ಮುಂದುವರಿಸಿಕೊಂಡು ಹೋಗುವ ನಿಟ್ಟಿನಲ್ಲಿ ಸಾಕಷ್ಟು ಶ್ರಮವಹಿಸಲಾಗುತ್ತಿದೆ. ಶಿಕ್ಷಕರ ನೇಮಕಗೊಳಿಸುವಂತೆ ಸಾಕಷ್ಟು ಬಾರಿ ಸರಕಾರದ ಗಮನ ಸೆಳೆದರೂ ಯಾವುದೇ ಪ್ರಯೋಜನವಾಗಿಲ್ಲ. ಸರಕಾರ ಖಾಲಿ ಹುದ್ದೆ ತುಂಬಿಸುವಲ್ಲಿ ಅಥವಾ ಹೆಚ್ಚುವರಿ ಶಿಕ್ಷಕರನ್ನು ಅನುದಾನಿತ ಶಾಲೆಗಳಿಗೆ ನೀಡುವತ್ತ ಮುತುವರ್ಜಿ ವಹಿಸಬೇಕು.
-ಕೆ.ಪಿ. ಶೆಣೈ,
ಕಾರ್ಯದರ್ಶಿ, ಎಸ್‌ವಿಟಿ ಎಜುಕೇಶನ್‌ ಟ್ರಸ್ಟ್‌

24 ಲಕ್ಷ ರೂ. ಧನ ಸಹಾಯ
ಶಿಕ್ಷಕರ ಕೊರತೆ ನಿಭಾಯಿಸುವ ನಿಟ್ಟಿನಲ್ಲಿ ಶಾಲಾಡಳಿತ ನಿರ್ವಹಿಸುವ ಶ್ರೀ ವೆಂಕಟರಮಣ ಎಜುಕೇಶನ್‌ ಟ್ರಸ್ಟ್‌ ಹಾಗೂ ಶ್ರೀ ವೆಂಕಟರಮಣ ದೇವಸ್ಥಾನದ ಆಡಳಿತ ಮಂಡಳಿ 8 ಮಂದಿ ಗೌರವ ಶಿಕ್ಷಕರನ್ನು ನೇಮಿಸಿದೆ. ಗೌರವ ಶಿಕ್ಷಕರ ವೇತನ, ಮಕ್ಕಳ ಸಾರಿಗೆ ವೆಚ್ಚ, ಶಾಲಾ ಅಭಿವೃದ್ಧಿ ಚಟುವಟಿಕೆಗಳಿಗಾಗಿ ಪ್ರತಿವರ್ಷ ಸುಮಾರು 24 ಲಕ್ಷ ರೂ. ಧನ ಸಹಾಯವನ್ನು ಟ್ರಸ್ಟ್‌ ಭರಿಸುತ್ತಿದೆ.

-ರಾಮಚಂದ್ರ ಬರೆಪ್ಪಾಡಿ

Advertisement

Udayavani is now on Telegram. Click here to join our channel and stay updated with the latest news.

Next