ಶ್ರೀನಗರ: ಜಮ್ಮು ಕಾಶ್ಮೀರ ಪೊಲೀಸರು ಶನಿವಾರ ಉಪ ಪೊಲೀಸ್ ವರಿಷ್ಠಾಧಿಕಾರಿ ಸೇರಿದಂತೆ ಇಬ್ಬರು ಉಗ್ರರನ್ನು ಕುಲ್ಗಾಂ ಜಿಲ್ಲೆಯಲ್ಲಿ ಬಂಧಿಸಿದ್ದಾರೆ.
ಪೊಲೀಸ್ ಮತ್ತು ಸೇನೆಯ ಜಂಟಿ ಕಾರ್ಯಾಚರಣೆ ವೇಳೆ ಮೀರ್ ಬಜಾರ್ ರಾಷ್ಟ್ರೀಯ ಹೆದ್ದಾರಿಯ ಬಳಿ ವಾಹನವೊಂದರಲ್ಲಿದ್ದ ಉಪ ಪೊಲೀಸ್ ವರಿಷ್ಠಾಧಿಕಾರಿ ಸೇರಿದಂತೆ ಇಬ್ಬರು ಉಗ್ರರರನ್ನು ಬಂಧಿಸಲಾಗಿದೆ. ಬಂಧಿತರಿಂದ 5 ಗ್ರೆನೇಡ್ ಅನ್ನು ವಶಪಡಿಸಿಕೊಳ್ಳಲಾಗಿದೆ. ಬಂಧಿತ ಡಿಎಸ್ ಪಿ ಮನೆಯ ಬಳಿ ಎರಡು ಎಕೆ 47 ರೈಫಲ್ ಗಳನ್ನು ಸ್ವಾಧಿನಪಡಿಸಿಕೊಳ್ಳಲಾಗಿದೆ.
ದೇಶದಲ್ಲಿ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಉಗ್ರರೊಂದಿಗೆ ಬಂಧಿತರಾದ ಮೊದಲ ಪ್ರಕರಣವಾಗಿದೆ. ಮಾತ್ರವಲ್ಲದೆ ಶ್ರೀನಗರದ ಬಳಿಯಿರುವ ಪೊಲೀಸ್ ಅಧಿಕಾರಿಯ ಮನೆ ಮೇಲೆ ದಾಳಿ ಮಾಡಿ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಪೊಲೀಸ್ ಅಧಿಕಾರಿ ಕಳೆದ ಬಾರಿ ರಾಷ್ಟ್ರಪತಿ ಪದಕ ವಿಜೇತರಾಗಿದ್ದರು ಎಂದು ವರದಿಯಾಗಿದೆ.
ಬಂಧಿತ ಹಿಜ್ಬುಲ್ ಮುಜಾಹಿದ್ದೀನ್ ಕಮಾಂಡರ್ ಸೈಯದ್ ನವೀದ್ ಬಾಬಾ ದಕ್ಷಿಣ ಕಾಶ್ಮೀರದ ಮೋಸ್ಟ್ ವಾಂಟೆಡ್ ಉಗ್ರರಲ್ಲಿ ಒಬ್ಬನಾಗಿದ್ದ. ಮಾತ್ರವಲ್ಲದೆ ಪೊಲೀಸರ ಪ್ರಕಾರ ಟ್ರಕ್ ಚಾಲಕರ ಮತ್ತು ಸ್ಥಳೀಯರ ಮೇಲೆ ದಾಳಿ ಮತ್ತು ಹತ್ಯೆ ಪ್ರಕರಣದಲ್ಲಿ ಈತ ಭಾಗಿಯಾಗಿದ್ದ.
2017 ರಲ್ಲಿ ಉಗ್ರಗಾಮಿಯಾಗಿ ಬದಲಾಗಿದ್ದ ಈತನ ಹೆಸರು ದಕ್ಷಿಣ ಕಾಶ್ಮೀರದ ಮೇಲಾಗುತ್ತಿದ್ದ ದಾಳಿಯಲ್ಲಿ ಪ್ರುಮುಖವಾಗಿ ಕೇಳಿಬಂದಿತ್ತು. ಮಾತ್ರವಲ್ಲದೆ ಎಲ್ಲೆಡೆ ಈತನ ಪೋಸ್ಟರ್ ಗಳು ರಾರಾಜಿಸುತ್ತಿದ್ದವು. ಈತ ಎಲ್ ಇಡಿ ಸ್ಪೋಟಕ ತಯಾರಿಕೆಯಲ್ಲಿ ಪರಿಣಿತನಾಗಿದ್ದ. ಬಂಧಿತ ಮತ್ತೊಬ್ಬ ಉಗ್ರನನ್ನು ಆಸಿಫ್ ರಥರ್ ಎಂದು ಗುರುತಿಸಲಾಗಿದೆ.