Advertisement

ವೀಣೆಯ ಮಹಿಮೆಗೆ ಸಾಕ್ಷಿಯಾದ ಎರಡು ಕಛೇರಿ 

06:00 AM Jul 20, 2018 | |

ಮಣಿಪಾಲದ ಕಲಾಸ್ಪಂದನದ ಇಪ್ಪತ್ತಮೂರನೇ ವಾರ್ಷಿಕೋತ್ಸವ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ವಿಶಿಷ್ಟ ರೀತಿಯಲ್ಲಿ ಸಂಪನ್ನಗೊಂಡಿತು. ಇಲ್ಲಿ ನಡೆದ ಎರಡು ಉತ್ತಮ ಮಟ್ಟದ ವೀಣಾವಾದನ ಕಛೇರಿಗಳು ಗಮನಾರ್ಹವಾಗಿವೆ. 

Advertisement

ಪೂರ್ವಾಹ್ನದ ಮುಖ್ಯ ವೀಣಾವಾದನ ಕಛೇರಿಯನ್ನು ಬೆಂಗಳೂರಿನ ವಿದುಷಿ ಯೋಗವಂದನಾ ಅವರು ನಡೆಸಿದರು. ಸಾವೇರಿ ರಾಗದ “ಸರಸೂಡಾ’ ವರ್ಣವನ್ನು ನುಡಿಸಿ ಕಛೇರಿಗೆ ತಳಹದಿಯನ್ನು ಹಾಕಿದರು. ಅಣ್ಣಮಾಚಾರ್ಯರ ಹಂಸಧ್ವನಿ ರಾಗದ ಖಂಡಛಾಪು ಕೃತಿ “ವಂದೇಹಂ ಜಗದ್ವಲ್ಲಭಂ’ನ್ನು ಚುಟುಕಾದ ಸ್ವರಪ್ರಸ್ತಾರಗಳಿಂದ ಅಲಂಕರಿಸಿ, ಪುರಂದರ ದಾಸರ ಮಲಯ ಮಾರುತ ರಾಗದ “ಸ್ಮರಣೆ ಒಂದೇ ಸಾಲದೇ’ಯನ್ನು ನುಡಿಸಿದರು. ಮುಂದೆ ಕಲ್ಯಾಣಿರಾಗದ ಆಲಾಪನೆಯನ್ನು ನಡೆಸಿ “ಪಂಕಜಲೋಚನಾ’ವನ್ನು ಮಿಶ್ರ ಛಾಪುತಾಳದಲ್ಲಿ ಪ್ರಸ್ತುತ ಪಡಿಸಿದರು. ತ್ಯಾಗರಾಜರ ಅಸಾವೇರಿ ರಾಗದ “ರಾ ರಾ ಮಾಯಿಂಟಿ’ಯನ್ನು ನುಡಿಸಿದರು. “ಮೋಹನ ಮುರಳೀಧರ ಗೋಪಾಲ ಮುರಹರನಗಧರ’ ಎನ್ನುವ ಪಲ್ಲವಿಯನ್ನು ಮೋಹನ, ಗಾನಮೂರ್ತಿ, ಬೇಹಾಗ್‌ನಲ್ಲಿ ರಾಗಮಾಲಿಕವಾಗಿ ಬೆಸೆದು ಕೃಷ್ಣನಿಗೆ ಸಮರ್ಪಿಸಿದರು. ಅನಿರುದ್ಧ ಎಸ್‌. ಭಟ್‌ ಮತ್ತು ರಘುನಂದನ್‌ ಬಿ.ಎಸ್‌ ಅವರ ಮೃದಂಗ ಘಟಗಳನ್ನೊಳಗೊಂಡ ತನಿ ಆವರ್ತನವು ಕಛೇರಿಗೆ ಕಳೆ ಕೊಟ್ಟಿತು. ಸಿಂಧು ಭೈರವಿ ರಾಗದ “ವೆಂಕಟಾಚಲನಿಲಯಂ’, ಕಾಪಿ ರಾಗದ “ಜಗದೋದ್ಧಾರನಾ’ಗಳನ್ನು ಭಕ್ತ ಜನರ ಅಪೇಕ್ಷೆಯ ಮೇರೆಗೆ ನುಡಿಸಿದರು. ಮಧ್ಯಮಾವತಿ ಮತ್ತು ಪಂತುವರಾಳಿ ರಾಗಗಳ ನೇಯ್ಗೆಯಿಂದ “ಭಾಗ್ಯದ ಲಕ್ಷ್ಮೀ ಬಾರಮ್ಮಾ’ ನುಡಿಸಿ ಸೌರಾಷ್ಟ್ರ ರಾಗದ ಪವಮಾನದಿಂದ ವೀಣಾವಾದನವನ್ನು ಮಂಗಳಗೊಳಿಸಿದರು. ಯೋಗವಂದನಾ ಅವರ ನಯವಾದ ಮೀಟುಗಳಿಂದ ಸುಶ್ರಾವ್ಯವಾದ, ಪ್ರಶಾಂತವಾದ ವೀಣಾವಾದನದ ಸೌಖ್ಯವು ಕಲಾರಸಿಕರನ್ನು ರಂಜಿಸಿತು. 

ಸಂಧ್ಯಾಕಾಲದ ವೀಣಾವಾದನವನ್ನು ಮಣಿಪಾಲದ ಅಂಧ ಕಲಾವಿದೆ ವಿದುಷಿ ಅರುಣಾಕುಮಾರಿ ನಡೆಸಿಕೊಟ್ಟರು. ತ್ರಿಶೂರು ಅನಂತಪದ್ಮನಾಭನ್‌ ವಿರಚಿತ “ಕುಮರ ಸಹೋದರ’ ಚಾರುಕೇಶಿ ರಾಗದ ಆದಿತಾಳ ವರ್ಣದಿಂದ ಕಛೇರಿಯನ್ನು ಪ್ರಾರಂಭಿಸಿದ ಕಲಾವಿದೆ, ಸರಸ್ವತಿ ರಾಗದ “ಸರಸ್ವತಿ ನಮೋಸ್ತುತೇ’ಯನ್ನು ಆಯ್ದುಕೊಂಡು “ಕರಧೃತ ವೀಣಾ ಪುಸ್ತಕ’ ಅನ್ನುವಲ್ಲಿ ನೆರವಲ್‌ನಿಂದ ಅಲಂಕರಿಸಿದರು. ಮುಂದೆ ಗಂಭೀರವಾಣಿ ರಾಗದ ಆಲಾಪನೆಯನ್ನು ಮಾಡಿ ತ್ಯಾಗರಾಜರ “ಸುಧಾಮದಿಂ’ನ್ನು ಪ್ರಸ್ತುತ ಪಡಿಸಿದರು. ಸ್ವಾತಿ ತಿರುನಾಳರ ಸರಸಾಂಗಿ ರಾಗದ ಕೃತಿ “ಜಯ ಜಯ ಪದ್ಮನಾಭ ಮುರಾರೇ’ಯನ್ನು ಸವಿವರ ಸ್ವರ ಸಂಚಾರಗಳಿಂದ ನುಡಿಸಿದರು. ಹರಿಕಾಂಬೋಜಿ ರಾಗದ ಅವರ ವಿಶಿಷ್ಟ ಸ್ವಂತ ರಚನೆಯನ್ನು ನುಡಿಸಿ, ಪ್ರಸಿದ್ಧ ಭಜನೆಗಳು ಮತ್ತು ರಚನೆಗಳನ್ನು ಮೆಡ್ಲೆà ರೂಪದಲ್ಲಿ ಪ್ರಸ್ತುತ ಪಡಿಸಿದರು. ವೇದಘೋಷದೊಂದಿಗೆ ಅವರ ಪ್ರಸ್ತುತಿಯನ್ನು ಸಮಾಪ್ತಿಗೊಳಿಸಿದರು. ಗುರು ತ್ರಿಶೂರು ಅನಂತಪದ್ಮನಾಭನ್‌ ಶೈಲಿಯನ್ನು ಅರುಣಾಕುಮಾರಿಯವರು ಈ ಭಾಗದಲ್ಲಿ ಪ್ರಚುರಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮೃದಂಗದಲ್ಲಿ ಡಾ| ಬಾಲಚಂದ್ರ ಆಚಾರ್‌ ಮತ್ತು ತಾಳದಲ್ಲಿ ಡಾ| ರಾಮಕೃಷ್ಣನ್‌ ಸಹಕರಿಸಿದರು. 

ಕಲಾಸ್ಪಂದನದ ವಿದ್ಯಾರ್ಥಿಗಳಿಂದ ವೀಣಾ-ವೇಣು-ವಯೋಲಿನ್‌ ಪ್ರಯೋಗವೂ, ವಿಪಂಚಿ ಬಳಗದಿಂದ ಪಂಚ ವೀಣಾವಾದನವೂ ಮತ್ತು ವೈಭವ್‌ ಪೈ ನಿರ್ದೇಶಿತ “ಶ್ರೀ ರಾಘವೇಂದ್ರ ಮಹಿಮೆ’ ಎನ್ನುವ ವೀಣಾ ನಾಟಕವನ್ನು ಈ ಸಂದರ್ಭದಲ್ಲಿ ಪ್ರದರ್ಶಿಸಲಾಯಿತು. ಶಿಲ್ಪಾಜೋಶಿ ಮತ್ತು ಡಾ| ಚೈತ್ರರಾವ್‌ ಅವರ ಉತ್ತಮ ನಿರ್ವಹಣೆಯು ಕಾರ್ಯಕ್ರಮದ ಅಂದವನ್ನು ಹೆಚ್ಚಿಸಿತು. 

ಪ್ರಾಚೀನ ಸಾರ್ವಭೌಮ ವಾದ್ಯವಾದ ವೀಣೆಯ ಮಹಿಮೆಯನ್ನು ಹಾಗೂ ಅದರ ವಿವಿಧ ಆಯಾಮಗಳನ್ನು ಸಮಾಜಕ್ಕೆ “ಕಲಾಸ್ಪಂದನ’ದ ಮೂಲಕ ಡಾ| ಪಳ್ಳತ್ತಡ್ಕ ಕೇಶವ ಭಟ್‌ ಮೆಮೋರಿಯಲ್‌ ಟ್ರಸ್ಟ್‌ ಪರಿಚಯಿಸಿರುವುದು ಸ್ತುತ್ಯರ್ಹ. 

Advertisement

ಪವನ ಬಿ. ಆಚಾರ್‌

Advertisement

Udayavani is now on Telegram. Click here to join our channel and stay updated with the latest news.

Next