ಬೆಂಗಳೂರು: ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಇಬ್ಬರು ನೈಜೀರಿಯಾ ಪ್ರಜೆಗಳನ್ನು ಕೇಂದ್ರ ಅಪರಾಧ ವಿಭಾಗ(ಸಿಸಿಬಿ) ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಂದ 1.25 ಲಕ್ಷ ಮೌಲ್ಯದ 6.10 ಗ್ರಾಂ ಕೋಕೇನ್, 1.5 ಗ್ರಾಂ ಎಂಡಿಎಂಲ್, 4 ಗ್ರಾಂ ಎಲ್‌ಎಸ್‌ಡಿ ಪೇಪರ್ ವಶಪಡಿಸಿಕೊಳ್ಳಲಾಗಿದೆ.
ಯಲಹಂಕದ ಕೋಗಿಲು ಸಮೀಪದ ಮಾರುತಿನಗರದಲ್ಲಿ ನೆಲೆಸಿದ್ದ ಚುಕುÌನೊನ್ಸೊ ಅಲಿಯಾಸ್ ಒಗೊನೊಗೊ (41) ಮತ್ತು ಫ್ರಾಂಕ್ ಒನ್ಯೆಡಿಕಚಿ (34) ಬಂಧಿತರು. ಆರೋಪಿಗಳು ವಾಣಿಜ್ಯ ವೀಸಾದಡಿ ಬೆಂಗಳೂರಿಗೆ ಬಂದಿದ್ದು, ವೀಸಾ ಅವಧಿ ಮುಗಿದಿದ್ದರೂ ಅಕ್ರಮವಾಗಿ ಇಲ್ಲಿಯೇ ನೆಲೆಸಿದ್ದರು.
ಜೀವನ ನಿರ್ವಾಹಣೆಗಾಗಿ ಮಾದಕ ವಸ್ತುಗಳನ್ನು ಮಾರಾಟ ಮಾಡುವುದನ್ನೆ ವೃತ್ತಿಯನ್ನಾಗಿಸಿಕೊಂಡಿದ್ದರು. ಮುಂಬೈ, ಹೈದರಾಬಾದ್ ಕಡೆಯಿಂದ ಕೊಕೇನ್, ಎಂಡಿಎಂಎ ಮತ್ತು ಎಲ್‌ಎಸ್‌ಡಿ ಪೇಪರ್‌ಗಳನ್ನು ತರಿಸಿಕೊಳ್ಳುತ್ತಿದ್ದ ಇವರು, ಮನೆಯಲ್ಲಿ 5 ಮತ್ತು 10 ಗ್ರಾಂ ತೂಕದ ಸಣ್ಣ ಪ್ಯಾಕೇಟ್‌ಗಳನ್ನು ಮಾಡಿಕೊಂಡು ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿದ್ದರು.
ಮಾಹಿತಿ ಪಡೆದ ಪೊಲೀಸರು ಮನೆ ಮೇಲೆ ದಾಳಿ ಮಾಡಿ ಆರೋಪಿಗಳನ್ನು ಬಂಧಿಸಿದ್ದಾರೆ. ಇಬ್ಬರು ಆರೋಪಿಗಳು ನಕಲಿ ದಾಖಲೆಗಳನ್ನು ಸೃಷ್ಟಿಸಿ ಸಿಮ್ ಕಾರ್ಡ್ ಖರೀದಿಸಿ ಮಾದಕ ವ್ಯಸನಿಗಳನ್ನು ಸಂಪರ್ಕಿಸುತ್ತಿದ್ದರು. ಅಲ್ಲದೇ ಆನ್‌ಲೈನ್ ಮೂಲಕವೂ ಮಾರಾಟ ಮಾಡುತ್ತಿದ್ದರು.
ನಾಪತ್ತೆಯಾಗಿದ್ದ ಆರೋಪಿ: ಬಂಧಿತರು ಈ ಹಿಂದೆ ಕೆ.ಆರ್.ಪುರದಲ್ಲಿ ಮಾದಕ ವಸ್ತು ಮಾರಾಟ ಮಾಡುವಾಗ ಸಿಸಿಬಿ ಬಲೆಗೆ ಬಿದಿದ್ದರು. ಆಗ ಚುಕುನೊನ್ಸೊ ನಾಪತ್ತೆಯಾಗಿದ್ದ. ಮತ್ತೂಬ್ಬ ಷರತ್ತು ಬದ್ಧ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ ಎಂದು ಸಿಸಿಬಿ ಪೊಲೀಸರು ತಿಳಿಸಿದ್ದಾರೆ.