ಒಪ್ಪೋ ಕಂಪೆನಿ ಭಾರತದಲ್ಲಿ ಇದೀಗ ಎರಡು ಹೊಸ ಮೊಬೈಲ್ ಫೋನ್ ಮತ್ತು ಸ್ಮಾರ್ಟ್ ಬ್ಯಾಂಡನ್ನು ಬಿಡುಗಡೆ ಮಾಡಿದೆ. ಒಪ್ಪೋ ಎಫ್ 19 ಪ್ರೊ ಪ್ಲಸ್ 5ಜಿ ಮತ್ತು ಒಪ್ಪೋ ಎಫ್ 19 ಪ್ರೊ ಮೊಬೈಲ್ ಹಾಗೂ ಒಪ್ಪೋ ಬ್ಯಾಂಡ್ ಸ್ಟೈಲ್ ಹೊಸ ಉತ್ಪನ್ನಗಳಾಗಿವೆ.
ಒಪ್ಪೋ ಎಫ್ 19 ಪ್ರೊ ಪ್ಲಸ್ 5ಜಿ : ಇದು 6.4 ಇಂಚಿನ ಎಫ್ ಎಚ್ ಡಿ ಪ್ಲಸ್ ಅಮೋಲೆಡ್ ಪರದೆ ಹೊಂದಿದೆ. ಇದರಲ್ಲಿ ಮೀಡಿಯಾಟೆಕ್ ಡೈಮೆನ್ ಸಿಟಿ 800ಯು ಪ್ರೊಸೆಸರ್ ಇದೆ. 8 ಜಿಬಿ ರ್ಯಾಮ್ ಮತ್ತು 128 ಜಿಬಿ ಆಂತರಿಕ ಸಂಗ್ರಹ ಹೊಂದಿದ ಒಂದೇ ಆವೃತ್ತಿ ಇದರಲ್ಲಿದೆ. ಬೇಕಾದಲ್ಲಿ 256 ಜಿಬಿವರೆಗೂ ಮೈಕ್ರೋ ಎಸ್ಡಿ ಕಾರ್ಡ್ ಹಾಕಿಕೊಳ್ಳಬಹುದು. ಅಂಡ್ರಾಯ್ಡ್ 11 ಕಾರ್ಯಾಚರಣಾ ವ್ಯವಸ್ಥೆ ಹೊಂದಿದ್ದು, ಇದಕ್ಕೆ ಕಲರ್ ಓಎಸ್ ನ ಹೆಚ್ಚುವರಿ ಬೆಂಬಲ ಇದೆ. 48+8+2+2 ಮೆಗಾಪಿಕ್ಸಲ್ ನ ನಾಲ್ಕು ಲೆನ್ಸ್ ಗಳ ಹಿಂಬದಿ ಕ್ಯಾಮರಾ ಹಾಗೂ 16 ಮೆಗಾಪಿಕ್ಸಲ್ ನ ಮುಂಬದಿ ಕ್ಯಾಮರಾ ಇದೆ. 4310 ಎಂಎಎಚ್ ಬ್ಯಾಟರಿ ಇದ್ದು ಇದಕ್ಕೆ 50 ವ್ಯಾಟ್ಸ್ ವೂಕ್ ಫ್ಲಾಶ್ ಚಾರ್ಜರ್ ನೀಡಲಾಗಿದೆ.
ಈ ಮೊಬೈಲ್ ಸ್ಮಾರ್ಟ್ 5ಜಿ ಸೌಲಭ್ಯ ಹೊಂದಿದೆ. ಇದರಲ್ಲಿ ಎಂಟು ಆಂಟೆನಾಗಳಿದ್ದು, ಇದು 2ಜಿ, 3ಜಿ, 4ಜಿ ಮತ್ತು ಮುಂಬರಲಿರುವ 5ಜಿ ನೆಟ್ ವರ್ಕ್ ನ ಸಿಗ್ನಲ್ ಗಳನ್ನು ಸಮರ್ಥವಾಗಿ ಸಂಪರ್ಕಿಸುತ್ತದೆ. ಇದರಿಂದ ಸಿಗ್ನಲ್ ಕಡಿತವಾಗುವುದಿಲ್ಲ ಎಂದು ಕಂಪೆನಿ ಹೇಳಿಕೊಂಡಿದೆ.
ಈ ಮಾಡೆಲ್ ನ ಬೆಲೆ 25,990 ರೂ. ಆಗಿದೆ. ಇದು ಮಾರ್ಚ್ 25ರಿಂದ ಅಮೆಜಾನ್ ಮತ್ತು ಆಫ್ ಲೈನ್ ಸ್ಟೋರ್ ಗಳಲ್ಲಿ ದೊರಕಲಿದೆ.
ಒಪ್ಪೋ ಎಫ್ 19 ಪ್ರೊ : ಇದರ ಸ್ಪೆಸಿಫಿಕೇಷನ್ ಬಹುತೇಕ ಫ್ 19ಪ್ರೊ ಪ್ಲಸ್ 5 ಜಿ ರೀತಿಯೇ ಇದೆ. ಮುಖ್ಯ ವ್ಯತ್ಯಾಸವೆಂದರೆ ಇದರಲ್ಲಿ ಮೀಡಿಯಾಟೆಕ್ ಹೀಲಿಯೋ ಪಿ95 ಪ್ರೊಸೆಸರ್ ಇದೆ. 5ಜಿ ಸೌಲಭ್ಯ ಲ್ಲ. 30 ವ್ಯಾಟ್ಸ್ ಚಾರ್ಜರ್ ಹೊಂದಿದೆ.
ಇನ್ನುಳಿದಂತೆ, 6.4 ಇಂಚಿನ ಎಫ್ ಎಚ್ ಡಿ ಪ್ಲಸ್ ಅಮೋಲೆಡ್ ಪರದೆ, 4,310 ಎಂಎಎಚ್ ಬ್ಯಾಟರಿ, 48+8+2+2 ನಾಲ್ಕು ಲೆನ್ಸಿನ ಹಿಂಬದಿ ಕ್ಯಾಮರಾ, 16ಮೆಪಿ. ಮುಂಬದಿ ಕ್ಯಾಮರಾ ಎಲ್ಲ ಅದರ ರೀತಿಯೇ. ಇದರ ಬೆಲೆ: 8ಜಿಬಿ+128 ಜಿಬಿ 21,490 ರೂ. 8ಜಿಬಿ+256 ಜಿಬಿ 23,490 ರೂ.
ಈಗ ಬಂದಿರುವ ಫೋನ್‍ಗಳಲ್ಲಿ 256 ಜಿಬಿ ಆಂತರಿಕ ಸಂಗ್ರಹ ಹೊಂದಿ 25 ಸಾವಿರದೊಳಗೆ ಇರುವ ಫೋನ್ ಸದ್ಯಕ್ಕೆ ಭಾರತದಲ್ಲಿ ಇದೊಂದೇ ಎನ್ನಲಡ್ಡಿಯಿಲ್ಲ. ಇದು ಮಾರ್ಚ್ 17ರಿಂದ ಫ್ಲಿಪ್ ಕಾರ್ಟ್ ಮತ್ತು ಮೊಬೈಲ್ ಅಂಗಡಿಗಳಲ್ಲಿ ದೊರಕುತ್ತದೆ.
ಒಪ್ಪೋ ಬ್ಯಾಂಡ್ ಸ್ಟೈಲ್: ಇದು 1.1 ಇಂಚಿನ ಅಮೋಲೆಡ್ ಡಿಸ್‍ಪ್ಲೇ ಹೊಂದಿದೆ. 100 ಎಂಎಎಚ್ ಬ್ಯಾಟರಿ, 5 ಎಟಿಎಂ ವಾಟರ್ ರೆಸಿಸ್ಟೆಂಟ್ ಹೊಂದಿದೆ.
ಎಸ್‌ಪಿಓ2 ನಿಗಾ ವ್ಯವಸ್ಥೆಯು ಬ್ಯಾಂಡ್‌ನಲ್ಲಿ ಅಂತರ್ಗತವಾಗಿರುವ ರಕ್ತದ ಆಮ್ಲಜನಕದ ಸಂವೇದಕದ ನೆರವಿನಿಂದ ಕಾರ್ಯನಿರ್ವಹಿಸಲಿದೆ. ಇದರ ನೆರವಿನಿಂದ ಮಲಗಿದಾಗ ನಿರಂತರವಾಗಿ ರಕ್ತದಲ್ಲಿನ ಆಮ್ಲಜನಕದ ಮಟ್ಟದ ಮೇಲೆ ನಿಗಾ ಇರಿಸಲಿದೆ. ಎಂಟು ಗಂಟೆಗಳ ನಿದ್ದೆಯ ಆವರ್ತನದಲ್ಲಿ ಇದು ತಡೆರಹಿತವಾಗಿ 28,800 ಬಾರಿ ಎಸ್‌ಪಿಒ2 ನಿಗಾ ವಹಿಸಲಿದೆ. ಈ ಮೂಲಕ ಬಳಕೆದಾರ ಸಂಪೂರ್ಣ ದೇಹದಲ್ಲಿನ ಆಮ್ಲಜನಕದ ಮಾಹಿತಿ ನೀಡಲಿದೆ.
ಒಪ್ಪೊ ಬ್ಯಾಂಡ್ ಸ್ಟೈಲ್, ವರ್ಕ್ ಔಟ್ ಅನ್ನು ಸುಲಭಗೊಳಿಸಲಿದೆ. ಇದು, ಓಟ, ನಡಿಗೆ, ಸೈಕಲ್ ಸವಾರಿ, ಈಜು, ಬ್ಯಾಡ್ಮಿಂಟನ್, ಕ್ರಿಕೆಟ್, ಯೋಗ ಸೇರಿದಂತೆ ಯುವ ಜನರಲ್ಲಿ ಜನಪ್ರಿಯವಾಗಿರುವ ಕ್ರೀಡೆಗಳಿಗೆ ಸಂಬಂಧಿಸಿದ 12 ಅಂತರ್ಗತ ವರ್ಕ್‌ಔಟ್ ಮೋಡ್‌ಗಳನ್ನು ಒಳಗೊಂಡಿದೆ.
ಇದರ ದರ 2,999 ರೂ. ಅಮೆಜಾನ್ ಫ್ಲಿಪ್‍ಕಾರ್ಟ್ ಮತ್ತು ಆಫ್‍ಲೈನ್ ಸ್ಟೋರ್ ಗಳಲ್ಲಿ ದೊರಕುತ್ತಿದ್ದು, ಮಾ. 23 ರವರೆಗೆ 2,799 ರೂ. ರಿಯಾಯಿತಿ ದರ ಇರುತ್ತದೆ.
-ಕೆ.ಎಸ್. ಬನಶಂಕರ ಆರಾಧ್ಯ