ಮೈಸೂರು: ಮದುವೆಯಾಗುವುದಾಗಿ ನಂಬಿಸಿ ಯುವತಿಯನ್ನು ಬರ್ಬರವಾಗಿ ಕೊಲೆ ಮಾಡಿ ಯುವತಿಯ ನಗದು ಹಾಗೂ ಚಿನ್ನಾಭರಣವನ್ನು ದೋಚಿ ಪರಾರಿಯಾಗಿದ್ದ ಇಬ್ಬರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿ ಮೈಸೂರು ನ್ಯಾಯಾಲಯ ತೀರ್ಪು ನೀಡಿದೆ.
ಗುಂಡ್ಲುಪೇಟೆ ತಾಲೂಕು, ಬೇಗೂರು ಹೋಬಳಿ ರಂಗನಾಥಪುರ ನಿವಾಸಿಗಳಾದ ಸ್ವಾಮಿ ಮತ್ತು ಶಂಕರ, ಜೀವಾವಧಿ ಶಿಕ್ಷೆಗೊಳಗಾದ ಆರೋಪಿಗಳು. ರಂಗನಾಥಪುರದ ಪುಟ್ಟಮ್ಮಣ್ಣಿ ಎಂಬಾಕೆಯನ್ನು ಪ್ರೀತಿಸುವ ನಾಟಕವಾಡಿದ್ದ ಸ್ವಾಮಿ, ಆಕೆಯನ್ನು ಮದುವೆಯಾಗುವುದಾಗಿ ನಂಬಿಸಿದ್ದ.
ಆದರೆ ಇದಕ್ಕೆ ಪುಟ್ಟಮ್ಮಣ್ಣಿ ಅವರ ತಾಯಿ ಹಾಗೂ ಅಣ್ಣ ವಿರೋಧ ವ್ಯಕ್ತಪಡಿಸಿದ್ದರು. ಅಲ್ಲದೆ ತಂಗಿಗೆ ಒಳ್ಳೆಯ ಸಂಬಂಧ ಹುಡುಕುವ ಆಸೆ ಹೊತ್ತಿದ್ದ ಅಣ್ಣ ಮಂಜುನಾಥ್, ತಂಗಿ ಪುಟ್ಟಮ್ಮಣ್ಣಿಗಾಗಿ ಆಭರಣಗಳನ್ನು ಮಾಡಿಸಿ, 50 ಸಾವಿರ ರೂ. ಹಣವನ್ನು ಮನೆಯಲ್ಲಿಟ್ಟಿದ್ದ.
ಈ ವಿಷಯ ತಿಳಿದ ಆರೋಪಿ ಸ್ವಾಮಿ, ಮದುವೆಯಾಗುವುದಾಗಿ ನಂಬಿಸಿ, ಹಣ ಮತ್ತು ಆಭರಣದೊಂದಿಗೆ ಬರುವಂತೆ ಹೇಳಿ 2014ರ ಜನವರಿ 6ರಂದು ಪುಟ್ಟಮ್ಮಣ್ಣಿಯನ್ನು ಕರೆಸಿಕೊಂಡಿದ್ದಾನೆ. ನಂತರ ತನ್ನ ಸಹಚರರಾದ ಶಂಕರ ಹಾಗೂ ಮತ್ತೋರ್ವ ಅಪ್ರಾಪ್ತನ ನೆರವಿನಿಂದ ಆಕೆಯನ್ನು ನಂಜನಗೂಡಿನ ಸಮೀಪ ಆಕೆಯನ್ನು ಹತ್ಯೆ ಮಾಡಿ, 50 ಸಾವಿರ ರೂ. ನಗದು ಹಾಗೂ ಚಿನ್ನಾಭರಣದೊಂದಿಗೆ ಪರಾರಿಯಾಗಿದ್ದರು.
ಈ ನಡುವೆ ತಂಗಿ ಪುಟ್ಟಮ್ಮಣ್ಣಿ¡ ನಾಪತ್ತೆಯಾದ ಬಗ್ಗೆ ಗುಂಡ್ಲುಪೇಟೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ನಂತರ ಕೊಳೆತ ಸ್ಥಿತಿಯಲ್ಲಿ ನಂಜನಗೂಡಿನ ಸಮೀಪ ದೊರೆತ ದೇಹ ಪುಟ್ಟಮ್ಮಣ್ಣಿಯದು ಎಂದು ಗುರುತು ಪತ್ತೆ ಮಾಡಿ ಪೊಲೀಸರು ಮೃತದೇಹವನ್ನು ಕುಟುಂಬಸ್ಥರಿಗೆ ಒಪ್ಪಿಸಿದ್ದರು.
ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದ ನಂಜನಗೂಡು ಪಟ್ಟಣ ಠಾಣೆ ಪೊಲೀಸರು ಸೂಕ್ತ ತನಿಖೆ ನಡೆಸಿ ಆರೋಪಿಗಳಾದ ಸ್ವಾಮಿ, ಶಂಕರ ಹಾಗೂ ಮತ್ತೋರ್ವನನ್ನು ಬಂಧಿಸಿ, ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿಯನ್ನು ಸಲ್ಲಿಸಿದ್ದರು.
ಈ ಹಿನ್ನೆಲೆಯಲ್ಲಿ ಪ್ರಕರಣದ ವಿಚಾರಣೆ ನಡೆಸಿದ ಮೈಸೂರಿನ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ವಿಜಯ ಕುಮಾರ್ ಎಂ. ಆನಂದ ಶೆಟ್ಟಿ ಅವರು, ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಇಬ್ಬರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ಆನಂದಕುಮಾರ್ ವಾದ ಮಂಡಿಸಿದ್ದರು.