ಉಡುಪಿ: ಕೋವಿಡ್ -19 ಸೋಂಕಿತರ ಸಂಖ್ಯೆ ಏರುತ್ತಿದ್ದರೂ ಸೋಂಕಿತರ ಸಾವಿನ ಸಂಖ್ಯೆ ಕಡಿಮೆಯಿದ್ದ ಉಡುಪಿ ಜಿಲ್ಲೆಯಲ್ಲಿ ಈಗ ಸಾವಿನ ಸಂಖ್ಯೆಯಲ್ಲೂ ಏರಿಕೆ ಕಾಣುತ್ತಿದೆ. ಕಳೆದ 24 ಗಂಟೆಯಲ್ಲಿ ಜಿಲ್ಲೆಯಲ್ಲಿ ಇಬ್ಬರು ಸೋಂಕಿತರು ಸಾವನ್ನಪ್ಪಿದ್ದಾರೆ. ಇದರಿಂದ ಜಿಲ್ಲೆಯ ಕೋವಿಡ್-19 ಸೋಂಕಿತರ ಸಂಖ್ಯೆ ಏಳಕ್ಕೇರಿದೆ.
ಓರ್ವ ವ್ಯಕ್ತಿ ಉಡುಪಿಯಲ್ಲಿ ಮೃತಪಟ್ಟರೆ ಮತ್ತೋರ್ವ ಕುಂದಾಪುರ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ಉಡುಪಿಯ 49 ವರ್ಷದ ವ್ಯಕ್ತಿ ಮಧುಮೇಹ ಸೇರಿದಂತೆ ಇತರೆ ಖಾಯಿಲೆಯಿಂದ ಬಳಲುತ್ತಿದ್ದರು. ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರಿಗೆ ಕೋವಿಡ್-19 ಸೋಂಕು ದೃಢವಾದ ಕಾರಣ ನಗರದ ಕೋವಿಡ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಮುಂಜಾನೆ ಆಸ್ಪತ್ರೆಯಲ್ಲಿ ಮೃತರಾಗಿದ್ದಾರೆ.
ಇದನ್ನೂ ಓದಿ: ಕೋವಿಡ್ ಮುನ್ನೆಚ್ಚರಿಕೆ ; ಉಡುಪಿ ಜಿಲ್ಲಾಸ್ಪತ್ರೆ ಮೂರು ದಿನ ಸೀಲ್ ಡೌನ್
ಮತ್ತೊಂದು ಸಾವು ಪ್ರಕರಣ ಕುಂದಾಪುರದಲ್ಲಿ ನಡೆದಿದ್ದು, ಮರವಂತೆ ಮೂಲದ 58 ವರ್ಷದ ವ್ಯಕ್ತಿ ಅಸ್ತಮಾ ರೋಗದಿಂದ ನರಳುತ್ತಿದ್ದರು. ಬುಧವಾರ ಸಂಜೆ ಅವರಿಗೆ ಕೋವಿಡ್ ಸೋಂಕು ದೃಢವಾಗಿದ್ದು, ಚಿಕಿತ್ಸೆ ಆರಂಭಿಸುವ ಮುನ್ನವೇ ಅವರು ನಿಧನ ಹೊಂದಿದ್ದಾರೆ ಎಂದು ವರದಿಯಾಗಿದೆ.