ಮುಂಬೈ: ಕೋವಿಡ್ 19 ಸೋಂಕು ಹರಡುವ ಭೀತಿಯ ಕಾರಣದಿಂದ ಈ ಬಾರಿಯ ಐಪಿಎಲ್ ಕೂಟವು ಒಂದೇ ನಗರದಲ್ಲಿ ನಡೆಯುತ್ತಿದೆ. ಸೋಂಕು ಹರಡಬಾರದು ಎಂದು ಬಿಸಿಸಿಐ ಭಾರೀ ಸಿದ್ದತೆಗಳನ್ನು ಮಾಡಿಯೇ ಕೂಟ ಆರಂಭಿಸಿತ್ತು. ಆದರೆ ಇದೀಗ ಮತ್ತೆ ಐಪಿಎಲ್ ಮೇಲೆ ಕೋವಿಡ್ ಕರಿಛಾಯೆ ಬೀರಿದೆ.
ಡೆಲ್ಲಿ ಕ್ಯಾಪಿಟಲ್ಸ್ ತಂಡದ ಫಿಸಿಯೋ ಪ್ಯಾಟ್ರಿಕ್ ಫರ್ಹಾರ್ಟ್ ಗೆ ಕಳೆದ ಶುಕ್ರವಾರ ಕೋವಿಡ್ 19 ಸೋಂಕು ದೃಢವಾಗಿತ್ತು. ಇದೀಗ ತಂಡದಲ್ಲಿ ಮತ್ತಿಬ್ಬರಿಗೆ ಸೋಂಕು ದೃಢವಾಗಿದೆ ಎಂದು ವರದಿಯಾಗಿದೆ. ಓರ್ವ ವಿದೇಶಿ ಆಟಗಾರ ಮತ್ತು ಓರ್ವ ಸಹಾಯಕ ಸಿಬ್ಬಂದಿಗೆ ಸೋಂಕು ದೃಢವಾಗಿದೆ ಎಂದು ವರದಿ ತಿಳಿಸಿದೆ.
ಶನಿವಾರದಂದು ವಾಂಖೆಡೆ ಸ್ಟೇಡಿಯಂನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯದ ನಂತರ, ಡೆಲ್ಲಿ ಕ್ಯಾಪಿಟಲ್ಸ್ ಆಟಗಾರರು ಮತ್ತು ಸಿಬ್ಬಂದಿಗಳು ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಐಪಿಎಲ್ ಮಂಡಳಿ ಸೂಚಿಸಿತ್ತು. ಹೀಗಾಗಿ ಪಂದ್ಯದ ಬಳಿಕ ಆರ್ ಸಿಬಿ ತಂಡದ ಆಟಗಾರರ ಜೊತೆ ಶೇಕ್ ಹ್ಯಾಂಡ್ ಕೂಡಾ ಮಾಡಿರಲಿಲ್ಲ.
ಇದನ್ನೂ ಓದಿ:ಬಾಲಕಿಯರೊಂದಿಗೆ ಅಶ್ಲೀಲವಾಗಿ ವರ್ತಿಸಿ ಲೈಂಗಿಕ ಕ್ರಿಯೆಗೆ ಪ್ರಚೋದನೆ ನೀಡುತ್ತಿದ್ದವ ಜೈಲಿಗೆ
ಡೆಲ್ಲಿ ಕ್ಯಾಪಿಟಲ್ಸ್ ತಂಡ ಬುಧವಾರ ಪುಣೆಯಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಪಂದ್ಯವಾಡಲಿದೆ. ಹೀಗಾಗಿ ತಂಡ ಇಂದು (ಸೋಮವಾರ) ಪುಣೆಗೆ ಪ್ರಯಾಣ ಬೆಳೆಸಬೇಕಿತ್ತು. ಆದರೆ ಎರಡು ಹೊಸ ಕೋವಿಡ್ ಪ್ರಕರಣಗಳು ಪತ್ತೆಯಾದ ಕಾರಣ ಪ್ರಯಾಣ ಮುಂದೂಡಲಾಗಿದೆ.
ಕಳೆದ ಬಾರಿಯ ಕೂಟವು ಕೋವಿಡ್ ಕಾರಣದಿಂದ ಅರ್ಧದಲ್ಲಿಯೇ ಮುಂದೂಡಿಕೆ ಮಾಡಲಾಗಿತ್ತು. ನಂತರ ಯುಎಇ ನಲ್ಲಿ ಕೂಟ ಮುಂದುವರಿದಿತ್ತು.