ಕಲಬುರಗಿ: ಜಿಲ್ಲೆಯಲ್ಲಿ ರವಿವಾರ ಮತ್ತೆ ಎರಡು ಹೊಸ ಕೋವಿಡ್-19 ಸೋಂಕು ಪ್ರಕರಣಗಳು ಪತ್ತೆಯಾಗಿದ್ದು, ಇದರೊಂದಿಗೆ ಜಿಲ್ಲೆಯ ಸೋಂಕಿತರ ಸಂಖ್ಯೆ 38ಕ್ಕೆ ಏರಿಕೆಯಾಗಿದೆ.
ಕಳೆದ ಎರಡು ದಿನಗಳಿಂದ ಕೋವಿಡ್-19 ಅಬ್ಬರ ತಗ್ಗಿತ್ತು. ಹೊಸ ಪ್ರಕರಣಗಳು ವರದಿಯಾಗದ ಪರಿಣಾಮ ಜನತೆಯೂ ನಿರಾಳರಾಗಿದ್ದರು. ರವಿವಾರ ಸಂಜೆ 65 ವರ್ಷದ ವೃದ್ಧೆ (ಪಿ-502) ಮತ್ತು ಏಳು ವರ್ಷದ ಬಾಲಕ (ಪಿ-503) ನಿಗೆ ಮಹಾಮಾರಿ ಸೋಂಕು ದೃಢಪಟ್ಟಿದ್ದು, ಮತ್ತೆ ಆತಂಕ ಹೆಚ್ಚಿಸಿದೆ.
ಆಳಂದ ಪಟ್ಟಣದ 57 ವರ್ಷದ ಕೋವಿಡ್-19 ಸೋಂಕಿತ ವ್ಯಕ್ತಿ (ಪಿ-422) ಸಂಪರ್ಕಕ್ಕೆ ಬಂದಿದ್ದ ಅಜ್ಜಿಗೆ ಸೋಂಕು ಕಾಣಿಸಿಕೊಂಡಿದೆ. ಈ ವ್ಯಕ್ತಿ ಮಹಾರಾಷ್ಟ್ರದ ಸೊಲ್ಲಾಪುರದಿಂದ ಮರಳಿದ್ದ ಹಾಗೂ ಉಸಿರಾಟದ ಸಮಸ್ಯೆಯಿಂದಲೂ ಬಳಲುತ್ತಿದ್ದ.
ಇನ್ನೊಂದು ಪ್ರಕರಣದಲ್ಲಿ 26 ವರ್ಷದ ಮಹಿಳೆ (425) ಯ ಸಂಪರ್ಕದಿಂದ ಬಾಲಕನಿಗೆ ಸೋಂಕು ಹರಡಿದೆ. ಈ ಮಹಿಳೆಗೆ ಕೋವಿಡ್-19 ಸೋಂಕಿನಿಂದ ಮೃತಪಟ್ಟ ಬಟ್ಟೆ ವ್ಯಾಪಾರಿ (ಪಿ-205) ಸಂಪರ್ಕದಲ್ಲಿದ್ದ 19 ವರ್ಷದ ಯುವಕ (ಪಿ-395) ನಿಂದ ಸೋಂಕು ಹಬ್ಬಿತ್ತು. ಮಹಿಳೆಯ ನಾಲ್ಕು ತಿಂಗಳ ಮಗು ಸಹ ಕೋವಿಡ್-19 ಸೋಂಕಿನಿಂದ ಬಳಲುತ್ತಿದೆ.
ಇನ್ನು, ಒಟ್ಟಾರೆ 38 ಜನ ಕೋವಿಡ್-19 ಸೋಂಕಿತರಲ್ಲಿ ಏಳು ಜನ ಈಗಾಗಲೇ ಗುಣಮುಖರಾಗಿದ್ದಾರೆ. ನಾಲ್ವರು ಸೋಂಕಿಗೆ ತುತ್ತಾಗಿದ್ದಾರೆ. ಉಳಿದಂತೆ 37 ಜನ ಸೋಂಕಿತರಿಗೆ ಐಸೋಲೇಷನ್ ವಾರ್ಡ್ ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ