ಗದಗ: ಈಗಾಗಲೇ ನೂರಾರು ವನ್ಯಜೀವಿಗಳು ಹಾಗೂ ಪಕ್ಷಿಪಥದ ಮೂಲಕ ವನ್ಯಜೀವಿ ಪ್ರಿಯರು, ಪ್ರವಾಸಿಗರ ಆಕರ್ಷಣೀಯ ತಾಣವಾಗಿರುವ ಇಲ್ಲಿನ ಬಿಂಕದಕಟ್ಟಿ ಸಣ್ಣ ಮೃಗಾಲಯಕ್ಕೆ ಹೊಸ ಅತಿಥಿಗಳು ಆಗಮಿಸಿವೆ. ಮೃಗಾಲಯದಲ್ಲಿ ಸಿಂಹಗಳ ಘರ್ಜನೆ ಶುರುವಾಗಿದ್ದು, ಕೆಲವೇ ದಿನಗಳಲ್ಲಿ ಸಾರ್ವಜನಿಕರ ವೀಕ್ಷಣೆಗೆ ಅವಕಾಶ ಸಿಗಲಿದೆ.
ಬಿಂಕದಕಟ್ಟಿ ಮೃಗಾಲಯದಲ್ಲಿರುವ ನೂರಾರು ಪ್ರಾಣಿ, ಪಕ್ಷಗಳ ಸಾಲಿಗೆ ಇದೀಗ ಹೊಸದಾಗಿ ಸಿಂಹಗಳು ಸೇರ್ಪಡೆಯಾಗಿವೆ. ಬೆಂಗಳೂರಿನ ಬನ್ನೇರುಘಟ್ಟ ಜೈವಿಕ ಉದ್ಯಾನದಿಂದ ಶುಕ್ರವಾರ ಬೆಳಗಿನಜಾವ 1 ಗಂಟೆ ಸುಮಾರಿಗೆ ಬಿಂಕದಕಟ್ಟಿ ಸಣ್ಣ ಮೃಗಾಲಯಕ್ಕೆ ಎರಡು ಸಿಂಹಗಳನ್ನು ತರಲಾಗಿದೆ. 11 ವರ್ಷದ ಧರ್ಮ ಮತ್ತು ಅರ್ಜುನ ಎಂಬ ಹೆಸರಿನ ಎರಡು ಸಿಂಹಗಳನ್ನು ಬಿಗಿ ಭದ್ರತೆಯೊಂದಿಗೆ ಸ್ಥಳಾಂತರಿಸಲಾಗಿದೆ.
ಇದನ್ನೂ ಓದಿ:ಬಹಿರ್ದೆಸೆಗೆ ನಿಂತಿದ್ದ ವ್ಯಾಪಾರಿ ಮೇಲೆ ಹಲ್ಲೆ ನಡೆಸಿ ಕೋಟಿ ರೂ. ದರೋಡೆ
ಬನ್ನೇರುಘಟ್ಟ ಜೈವಿಕ ಉದ್ಯಾನದಿಂದ ಬಿಂಕದಕಟ್ಟಿ ಮೃಗಾಲಯಕ್ಕೆ ಎರಡು ಸಿಂಹಗಳ ಹಸ್ತಾಂತರಕ್ಕೆ ಕೇಂದ್ರ ಮೃಗಾಲಯ ಪ್ರಾಧಿಕಾರ ಕಳೆದ ವರ್ಷವೇ ಪ್ರಸ್ತಾವನೆ ಕಳುಹಿಸಲಾಗಿತ್ತು. ಪ್ರಾಧಿಕಾರದಿಂದ ಮಾ.15 ರಂದು ಸಿಂಹಗಳ ಹಸ್ತಾಂತರಕ್ಕೆ ಒಪ್ಪಿಗೆ ಸಿಗುತ್ತಿದ್ದಂತೆ ತಕ್ಷಣ ಕಾರ್ಯಪ್ರವೃತ್ತರಾದ ಜಿಲ್ಲಾ ಉಪ ಅರಣ್ಯ ಸಂರಕ್ಷಣಾಧಿಕಾರಿ ಸೂರ್ಯಸೇನ್ ನೇತೃತ್ವದ ಅಧಿಕಾರಿಗಳ ತಂಡ ಮೂರೇ ದಿನಗಳಲ್ಲಿ ಸಿಂಹಗಳನ್ನು ತರುವಲ್ಲಿ ಯಶಸ್ವಿಯಾಗಿದೆ.
ಸಿಂಹಗಳ ಜೀವನ ಶೈಲಿಗೆ ಅನುಕೂಲವಾಗುವಂತೆ ಕಲ್ಲುಮಣ್ಣಿನಿಂದ ಕೂಡಿದ ಗುಡ್ಡ, ಕೃತಕ ಕೆರೆ ನಿರ್ಮಿಸಲಾಗಿದೆ. ಜೊತೆಗೆ ಪ್ರವಾಸಿಗರ ವೀಕ್ಷಣೆಗಾಗಿ ಅತ್ಯಾಧುನಿಕವಾಗಿ ಗಾಜಿನ ಪಂಜರ ನಿರ್ಮಿಸಿರುವುದು ವಿಶೇಷ.
ಉಭಯ ಸಿಂಹಗಳು ಸ್ಥಳೀಯ ವಾತಾವರಣಕ್ಕೆ ಹೊಂದಿಕೊಳ್ಳಲು ಕೆಲ ದಿನಗಳು ಬೇಕಾಗುತ್ತದೆ. ಅದಕ್ಕಾಗಿ ಮೂರು ವಾರಗಳ ಕಾಲ ಪ್ರತ್ಯೇಕವಾಗಿ ಇರಿಸಲಾಗುತ್ತದೆ. ಆನಂತರ ಅವುಗಳ ಚಲವಲನ ಆಧರಿಸಿ ಸಾರ್ವಜನಿಕರ ವೀಕ್ಷಣೆಗೆ ಅವಕಾಶ ಕಲ್ಪಿಸ ಲಾಗುತ್ತದೆ ಎನ್ನುತ್ತಾರೆ ಬಿಂಕದಕಟ್ಟಿ ಸಣ್ಣ ಮೃಗಾಲಯದ ಕ್ಯೂರೇಟರ್ ಚೈತ್ರಾ ಮೆಣಸಿನಕಾಯಿ.