ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಮಂಡಿಸಿರುವ ಬಜೆಟ್‌ನಲ್ಲಿ ಆಹಾರ ಇಲಾಖೆಯ ಸಹಾಯಧನದಲ್ಲಿ 1,209 ಕೋಟಿ ರೂ. ಕಡಿತ ಗೊಳಿ ಸಲಾಗಿದ್ದು, ಇದರ ಪರಿಣಾಮವಾಗಿ ಸಿದ್ದರಾಮಯ್ಯ ಸರ್ಕಾರದ “ಅನ್ನಭಾಗ್ಯ’ ಯೋಜನೆಯಡಿ ನೀಡಲಾಗುತ್ತಿದ್ದ 2 ಕೆ.ಜಿ ಹೆಚ್ಚುವರಿ ಅಕ್ಕಿಗೆ ಕತ್ತರಿ ಬೀಳಲಿದೆ ಎಂಬ ಅನುಮಾನ ಮೂಡಿದೆ.
ಹೊಸ ಬಜೆಟ್ ಜಾರಿಗೆ ಬರುವ ದಿನದಿಂದ ಅಂದರೆ, ಏಪ್ರಿಲ್ ತಿಂಗಳಿಂದ ಅನ್ನಭಾಗ್ಯ ಯೋಜನೆಯ ಪ್ರತಿ ಫಲಾನು ಭವಿಗೆ ತಲಾ ಏಳು ಕೆ.ಜಿ. ಅಕ್ಕಿ ಬದಲು 5 ಕೆ.ಜಿ ಅಕ್ಕಿ ಸಿಗಲಿದೆ. ಇದನ್ನು ಸರಿದೂಗಿಸಲು ಪ್ರತಿ ಕುಟುಂಬಕ್ಕೆ 2 ಕೆ.ಜಿ ಗೋಧಿ ನೀಡುವ ಪ್ರಸ್ತಾವನೆಯನ್ನು ಬಜೆಟ್‌ನಲ್ಲಿ ಮಾಡಲಾಗಿದೆ.
2019-20ನೇ ಸಾಲಿನಲ್ಲಿ ಆಹಾರ ಇಲಾಖೆಗೆ 3,755 ಕೋಟಿ ಸಹಾಯಧನ ನೀಡಲಾಗಿತ್ತು. 2020-21ನೇ ಸಾಲಿನ ಬಜೆಟ್‌ನಲ್ಲಿ 2,546 ಕೋಟಿ ರೂ. ಸಹಾಯಧನ ಪ್ರಸ್ತಾಪಿಸಲಾಗಿದೆ. ಹೀಗಾಗಿ ಕಳೆದ ಬಾರಿಗಿಂತ 1,209 ಕೋಟಿ ಸಹಾಯಧನ ಕಡಿತಗೊಳಿಸಲಾಗಿದೆ.
ಇದರ ನೇರ ಪರಿಣಾಮ ಅನ್ನಭಾಗ್ಯ ಅಕ್ಕಿಯ ಮೇಲೆ ಬೀಳಲಿದೆ ಎಂದು ಹೇಳ ಲಾಗುತ್ತಿದೆ. ಈಗ ಕೇಂದ್ರ ಸರ್ಕಾರದ ನಿಯಮದಂತೆ 5 ಕೆ.ಜಿ. ಅಕ್ಕಿ ನೀಡಲು ತೀರ್ಮಾನಿಸಿರುವುದರಿಂದ ಹೆಚ್ಚುವರಿ ವೆಚ್ಚದ ಅವಶ್ಯಕತೆಯಿಲ್ಲ. ಆದ್ದರಿಂದ ಸಹಾಯಧನ ಸಹಜವಾಗಿ ಕಡಿಮೆಯಾಗಲಿದೆ ಎಂದು ಆಹಾರ ಇಲಾಖೆಯ ಅಧಿಕಾರಿಗಳು ಸಮಜಾಯಿಷಿ ನೀಡುತ್ತಾರೆ.
2 ಕೆ.ಜಿ. ಗೋಧಿ: ಅನ್ನಭಾಗ್ಯ ಯೋಜನೆಯಡಿ ಬಿಪಿಎಲ್ ಕುಟುಂಬದ ಪ್ರತಿ ಸದಸ್ಯನಿಗೆ ಈವರೆಗೆ ನೀಡಲಾಗುತ್ತಿದ್ದ 7 ಕೆ.ಜಿ. ಅಕ್ಕಿಯಲ್ಲಿ 2 ಕೆ.ಜಿ. ಅಕ್ಕಿಯನ್ನು ಕಡಿತಗೊಳಿಸಲಾಗಿದೆ. ಅದರ ಬದಲಿಗೆ ಪ್ರತಿ ಕುಟುಂಬಕ್ಕೆ 2 ಕೆ.ಜಿ. ಅಕ್ಕಿ ನೀಡಲಾಗುತ್ತದೆ. ಇದಕ್ಕಾಗಿ ವರ್ಷಕ್ಕೆ ಸುಮಾರು 880 ಕೋಟಿ ರೂ. ವೆಚ್ಚವಾಗಲಿದೆ. 2 ಕೆ.ಜಿ. ಅಕ್ಕಿಯನ್ನು ಬಿಪಿಎಲ್ ಕುಟುಂಬದ ಪ್ರತಿ ವ್ಯಕ್ತಿಗೆ ನೀಡಲಾಗುತ್ತಿದ್ದರೆ, 2 ಕೆ.ಜಿ ಗೋದಿಯನ್ನು ಪ್ರತಿ ಕುಟುಂಬಕ್ಕೆ ಸಿಗಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಬೋಗಸ್ ಕಾರ್ಡ್: ಅಕ್ಕಿಯ ಪ್ರಮಾಣ ಎರಡು ಕೆ.ಜಿ. ಕಡಿತ ಮಾಡಿ ಪ್ರತಿ ಕುಟುಂಬಕ್ಕೆ ಎರಡು ಕೆ.ಜಿ. ಗೋಧಿ ಹಾಗೂ ಒಂದು ಕೆ.ಜಿ. ತೊಗರಿಬೇಳೆ ನೀಡುವುದರಿಂದ ವಾರ್ಷಿಕ 480 ಕೋಟಿ ರೂ.ವರೆಗೆ ಉಳಿತಾಯವಾಗುತ್ತದೆ. ಜತೆಗೆ 10 ಲಕ್ಷದಷ್ಟು ಬೋಗಸ್ ಕಾರ್ಡ್‌ಗಳಿರುವ ಅಂದಾಜು ಮಾಡಲಾಗಿದ್ದು ಈಗಾಗಲೇ ಒಂದು ಲಕ್ಷ ಕಾರ್ಡ್ ಪತ್ತೆ ಹಚ್ಚಲಾಗಿದ್ದು ಐದು ಲಕ್ಷ ಕಾರ್ಡ್‌ಗಳು ಪತ್ತೆಯಾದರೂ 1000 ಕೋಟಿ ರೂ.ವರೆಗೆ ಉಳಿತಾಯವಾಗುತ್ತದೆ ಎಂಬ ಅಂದಾಜಿದೆ.