ಡೆಹ್ರಾಡೂನ್: ಭಾರತ ಮತ್ತು ಚೀನ ಗಡಿಯ ಸಮೀಪವಿರುವ, ಅರುಣಾಚಲ ರಾಜ್ಯದ ವ್ಯಾಪ್ತಿಗೆ ಬರುವ ಥಾಕ್ಲಾ ಪೋಸ್ಟ್‌ನಲ್ಲಿ ಗಡಿ ಕಾಯುತ್ತಿದ್ದ ಪ್ರಕಾಶ್ ಸಿಂಗ್ ರಾಣಾ ಎಂಬ ಯೋಧ 15 ದಿನಗಳಿಂದ ನಾಪತ್ತೆಯಾಗಿದ್ದಾರೆಂಬ ವಿಚಾರ ತಡವಾಗಿ ಬೆಳಕಿಗೆ ಬಂದಿದೆ.
ಉತ್ತರಾಖಂಡ ಜಿಲ್ಲೆಯ ರುದ್ರಪ್ರಯಾಗ ಜಿಲ್ಲೆಯ ಉಖೀಮತ್ ಎಂಬ ಊರಿನವರಾದ ಅವರು, 7ನೇ ಗರ್ವಾ ರೈಫಲ್ ಪಡೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ಅವರನ್ನು ಅರುಣಾಚಲ ಪ್ರದೇಶದ ಮೂಲಕ ಹಾದು ಹೋಗುವ ಭಾರತ- ಚೀನ ಗಡಿಯ ಸಮೀಪವಿರುವ ಥಾಕ್ಲಾ ಪೋಸ್ಟ್‌ನಲ್ಲಿ ಕಾವಲಿಗೆ ನಿಯೋಜಿಸಲಾಗಿತ್ತು. ಮೇ 29ರಿಂದ ಅವರು ಹಾಗೂ ಅವರ ಜೊತೆಯಲ್ಲಿದ್ದ ಮತ್ತೊಬ್ಬ ಸೇನಾ ಸಿಬ್ಬಂದಿ ನಾಪತ್ತೆಯಾಗಿದ್ದಾರೆಂದು ಹೇಳಲಾಗಿದೆ.
ಈ ನಡುವೆ, ಉತ್ತರಾಖಾಂಡದ ಸಾಹಸ್‌ಪುರ್ ಶಾಸಕ ಸಹದೇವ್ ಸಿಂಗ್ ಪುಂದಿರ್ ಅವರು, ಯೋಧ ಪ್ರಕಾಶ್ ಅವರ ಮನೆಗೆ ತೆರಳಿ ಧೈರ್ಯ ಹೇಳಿದ್ದಾರೆ.