ಬೆಂಗಳೂರು: ಪ್ರಯಾಣಿಕನ ಸೋಗಿನಲ್ಲಿ ಕ್ಯಾಬ್ ಚಾಲಕನ ಬೆನ್ನಿಗೆ 32 ಬಾರಿ ಇರಿದು ಪರಾರಿಯಾಗಿದ್ದ ಇಬ್ಬರು ಅಂತಾರಾಜ್ಯ ಸುಲಿಗೆಕೋರರನ್ನು ಮಡಿವಾಳ ಪೊಲೀಸರು ಬಂಧಿಸಿದ್ದಾರೆ.
ಉತ್ತರಪ್ರದೇಶ ಮೂಲದ ಇಬ್ಬರು ಕಾನೂನು ಸಂಘರ್ಷಕ್ಕೊಳಗಾದವರಾಗಿದ್ದಾರೆ. ಅವರಿಂದ 2100 ರೂ. ನಗದು, ಮಾರಕಾಸ್ತ್ರ ಜಪ್ತಿ ಮಾಡಲಾಗಿದೆ.
ಆರೋಪಿಗಳು ಏ.17ರಂದು ಮುಂಜಾನೆ 3 ಗಂಟೆ ಸುಮಾರಿಗೆ ಮಡಿವಾಳದ ಅಯ್ಯಪ್ಪಸ್ವಾಮಿ ದೇವಸ್ಥಾನದ ಬಳಿ ಹಾಸನ ಮೂಲದ ಕ್ಯಾಬ್ ಚಾಲಕ ದಿಲೀಪ್(28)ಗೆ ಚಾಕುವಿನಿಂದ ಇರಿದು ಸುಲಿಗೆ ಮಾಡಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಗುಜರಾತ್‌ನಲ್ಲಿ ಬಂಧಿಸಲಾಗಿದೆ.
ಇದನ್ನೂ ಓದಿ:ವೆಬ್‌ಡಿಸೈನರ್ ಅಪಹರಿಸಿ, ಹಣ ದೋಚಿದ ಮೂವರ ಸೆರೆ
ಏ.17ರಂದು ಬೊಮ್ಮನಹಳ್ಳಿಯಲ್ಲಿ ಆ್ಯಪ್ ಮೂಲಕ ಕ್ಯಾಬ್ ಬುಕ್ ಮಾಡಿದ್ದ ಆರೋಪಿಗಳು, ದಿಲೀಪ್ ಅವರ ಕ್ಯಾಬ್ ಹತ್ತಿದ್ದರು. ಕ್ಯಾಬ್ ಮಡಿವಾಳದ ಅಯ್ಯಪ್ಪಸ್ವಾಮಿ ದೇವಸ್ಥಾನದ ಬಳಿ ಬಂದಾಗ, ಚಾಕು ತೆಗೆದು ಹಣ ಕೊಡುವಂತೆ ದಿಲೀಪ್‌ಗೆ ಬೆದರಿಸಿದ್ದಾರೆ. ದಿಲೀಪ್ ಹಣ ಕೊಡಲು ನಿರಾಕರಿಸಿದಾಗ, ಆಕ್ರೋಶಗೊಂಡ ಆರೋಪಿಗಳು ಚಾಕುವಿನಿಂದ ದಿಲೀಪ್ ಬೆನ್ನಿಗೆ 32 ಬಾರಿ ಇರಿದು ಹಣ ಕಸಿದುಕೊಂಡು ಪರಾರಿಯಾಗಿದ್ದರು.
ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಪೊಲೀಸರು, ಕ್ಯಾಬ್ ಬುಕ್ ಮಾಡಿದ್ದ ಮೊಬೈಲ್ ಸಂಖ್ಯೆ ಆಧರಿಸಿ ಆರೋಪಿಗಳ ಜಾಡು ಹಿಡಿದ ಪೊಲೀಸರು, ಗುಜರಾತ್‌ನಲ್ಲಿ ಆರೋಪಿಗಳನ್ನು ಬಂಧಿಸಿದ್ದಾರೆ.