ಚೆನ್ನೈ: ಗೂಳಿ ದಾಳಿಗೆ ಕರ್ತವ್ಯನಿರತ ಪೊಲೀಸ್ ಪೇದೆ ಸೇರಿ ಇಬ್ಬರು ಮೃತಪಟ್ಟಿರುವ ಘಟನೆ ತಮಿಳುನಾಡಿನಲ್ಲಿ ನಡೆದಿರುವುದು ವರದಿಯಾಗಿದೆ.
ಕಲ್ಲೂರು ಗ್ರಾಮದಲ್ಲಿ ಅರಿಯನಾಯಕಿ ಅಮ್ಮನ್ ದೇವಸ್ಥಾನದ ಮಂಜುವಿರಾಟ್ಟು ಉತ್ಸವದಲ್ಲಿ ಈ ದುರಂತ ಘಟನೆ ನಡೆದಿದೆ.
ಗೂಳಿ ದಾಳಿಯಿಂದ ಗಾಯಗೊಂಡಿದ್ದ ಸುಬ್ರಮಣಿಯನ್ ಎಂಬ ವ್ಯಕ್ತಿಯನ್ನು ಪೊಲೀಸ್ ಪೇದೆಯಾದ ನವನೀಧ ಕೃಷ್ಣನ್ ಸಹಾಯ ಮಾಡಲು ತೆರಳಿದ್ದ ವೇಳೆ ಗೂಳಿ ಬಂದು ಅವರ ಮೇಲೆ ದಾಳಿ ಮಾಡಿದೆ.
ಇದನ್ನೂ ಓದಿ: ಬೊಲೆರೋ– ಟ್ರಕ್ ಭೀಕರ ಅಪಘಾತ: ಒಂದೇ ಕುಟುಂಬದ 10 ಮಂದಿ ದುರಂತ ಅಂತ್ಯ
ದಾಳಿಯಿಂದ ಗಂಭೀರ ಗಾಯಗೊಂಡ ಮೀಮಿಸಾಲ್ ಪೊಲೀಸ್ ಠಾಣೆಯ ನವನೀಧ ಕೃಷ್ಣನ್ ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿತ್ತು, ಆದರೆ ಅವರು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಗೂಳಿಯ ದಾಳಿಯಿಂದ ಗಾಯಗೊಂಡಿದ್ದ ಸುಬ್ರಮಣಿಯನ್ ಕೂಡ ಮೃತಪಟ್ಟಿದ್ದಾರೆ.
ಪುದುಕೊಟ್ಟೈ, ಶಿವಗಂಗೈ, ಮಧುರೈ, ದಿಂಡಿಗಲ್ ಮತ್ತು ತಿರುಚ್ಚಿಯ ಸುಮಾರು 400 ಗೂಳಿಗಳು ಮಂಜುವಿರಾಟ್ಟು ಉತ್ಸವದಲ್ಲಿ ಭಾಗಿಯಾಗಿದ್ದವು. ಸುಮಾರು 6 ಸಾವಿರಕ್ಕೂ ಹೆಚ್ಚಿನ ಜನರು ನೆರವೇರಿದ್ದರು.