ಹುಣಸೂರು: ತಾಲೂಕಿನ ಕಾಳೇನಹಳ್ಳಿ ಕೆರೆಯಲ್ಲಿ ಎರಡು ಮೊಸಳೆಗಳು ಕಾಣಿಸಿಕೊಂಡಿದ್ದು, ರೈತರು ಭಯಭೀತರಾಗಿದ್ದಾರೆ. ಗುರುಪುರ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕಾಳೇನಹಳ್ಳಿಕೆರೆಯಲ್ಲಿ ಕಳೆದ ನಾಲ್ಕು ದಿನಗಳ ಹಿಂದೆ ದೊಡ್ಡದಾದ ಎರಡು ಮೊಸಳೆಗಳು ಕೆರೆ ಹಾಗೂ ದಡದಲ್ಲಿ ರೈತರು ಹಾಗೂ ಬಟ್ಟೆ ಒಗೆಯಲು ತೆರಳಿದ್ದ ಮಹಿಳೆಯರಿಗೆ ಕಾಣಿಸಿಕೊಂಡಿವೆ.
ಸ್ಥಳೀಯರು ಕೆರೆ ಬಳಿಗೆ ಬಂದು ವೀಕ್ಷಿಸುತ್ತಿದ್ದು, ಅನೇಕರಿಗೆ ಕಾಣಿಸಿಕೊಂಡಿವೆ. ಮೊಸಳೆ ಇರುವಿಕೆ ಬಗ್ಗೆ ಅರಣ್ಯ ಇಲಾಖೆಗೆ ಗ್ರಾಮಸ್ಥರು ಮಾಹಿತಿ ನೀಡಿದ ಮೇರೆಗೆ ಸ್ಥಳಕ್ಕೆ ಅರಣ್ಯಾಧಿಕಾರಿ ರಿಜ್ವಾನ್, ಹರೀಶ್ ಅರಣ್ಯ ರಕ್ಷಕರಾದ ದೇವಯ್ಯ, ಪ್ಯಾರೇಜಾನ್ ಹಾಗೂ ಸಿಬ್ಬಂದಿ ಭೇಟಿ ನೀಡಿದ ಸಂದರ್ಭದಲ್ಲೂ ಮೊಸಳೆಗಳು ಕಾಣಿಸಿಕೊಂಡಿವೆ.
ಮೊಸಳೆ ಸೆರೆಗೆ ಆಗ್ರಹ: ಈಗಾಗಲೇ ಹನಗೋಡು ಅಣೆಕಟ್ಟೆಯ ಮುಖ್ಯನಾಲೆಯಲ್ಲಿ ನೀರು ಹರಿಸುತ್ತಿದ್ದು, ಅಚ್ಚುಕಟ್ಟು ರೈತರು ಕೃಷಿ ಚಟುವಟಿಕೆ ನಡೆಸಲು ಸಿದ್ಧªರಾಗಿದ್ದು, ಈ ಮೊಸಳೆಗಳಿಂದ ಹೆದರಿ ಜಮೀನಿನ ಕಡೆಗೆ ಹೋಗಲು ಹಿಂಜರಿಯುತ್ತಿದ್ದಾರೆ. ಅರಣ್ಯ ಇಲಾಖೆ ತಕ್ಷಣವೇ ಮೊಸಳೆಗಳನ್ನು ಹಿಡಿದು ಗ್ರಾಮಸ್ಥರು ಹಾಗೂ ರೈತರಲ್ಲಿ ಮೊಸಳೆ ಭಯವನ್ನು ದೂರಮಾಡಬೇಕೆಂದು ಕಾಳೇನಹಳ್ಳಿಯ ರಾಜಗೋಪಾಲ್, ನಟೇಶ್ ಮತ್ತಿತರರು ಆಗ್ರಹಿಸಿದ್ದಾರೆ.
ಎಚ್ಚರಿಕೆ ಫಲಕ: ಇದೀಗ ಕೆರೆ ಬಳಿ ಗುರುಪುರ ಗ್ರಾಮ ಪಂಚಾಯ್ತಿ ವತಿಯಿಂದ ಇಲ್ಲಿ ಮೊಸಳೆಗಳಿದ್ದು, ಕೆರೆ ಬಳಿಗೆ ಸಾರ್ವಜನಿಕರು ತೆರಳಬಾರದೆಂದು ಎಚ್ಚರಿಕೆಯ ಫಲಕ ಅಳವಡಿಸಲಾಗಿದೆ.
ಈ ಮೊಸಳೆಗಳು ಲಕ್ಷ್ಮಣತೀರ್ಥ ನದಿಯ ಪ್ರವಾಹದಿಂದ ಹನಗೋಡು ಮುಖ್ಯನಾಲೆ ಮೂಲಕ ಈ ಕೆರೆಗೆ ಬಂದಿರುವ ಸಾಧ್ಯತೆ ಇದೆ. ಕೆರೆಯಲ್ಲಿ ಮೊಸಳೆಗಳು ಕಾಣಿಸಿಕೊಂಡಿದ್ದು, ನೀರಿನೊಳಗಿರುವಾಗ ರಕ್ಷಿಸುವುದು ಕಷ್ಟವಾಗಿದೆ. ಈ ಮೊಸಳೆಗಳನ್ನು ಹಿಡಿಯುವ ಸಂಬಂಧ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮವಹಿಸಲಾಗುವುದು. ಅಲ್ಲಿಯವರೆಗೆ ಗ್ರಾಮಸ್ಥರು ಎಚ್ಚರಿಕೆಯಿಂದ ಇರಬೇಕು.
-ಸಂದೀಪ್, ವಲಯ ಅರಣ್ಯಾಧಿಕಾರಿ