ಹೈದರಾಬಾದ್ : ತೆಲಂಗಾಣ ಮತ್ತು ಇತರ ರಾಜ್ಯಗಳಲ್ಲಿ ನಕಲಿ ಭಾರತೀಯ ಕರೆನ್ಸಿ ನೋಟುಗಳ (ಎಫ್‌ಐಸಿಎನ್) ಮುದ್ರಣ ಮತ್ತು ಚಲಾವಣೆಯಲ್ಲಿ ತೊಡಗಿಸಿಕೊಂಡಿದ್ದ ಮಹಿಳೆ ಸೇರಿ ಇಬ್ಬರನ್ನು ಬಂಧಿಸಲಾಗಿದ್ದು, ಅವರಿಂದ 27 ಲಕ್ಷ ರೂಪಾಯಿ ಮುಖಬೆಲೆಯ ನಕಲಿ ಕರೆನ್ಸಿಯನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.
ಮಾಹಿತಿ ಆಧರಿಸಿ, ಪೊಲೀಸ್ ತಂಡಗಳು ಇಲ್ಲಿನ ಚಂದ್ರಾಯನಗುಟ್ಟದಿಂದ ಆರೋಪಿಗಳನ್ನು ಬಂಧಿಸಿ ಅವರಿಂದ ನಕಲಿ ಕರೆನ್ಸಿ ಮತ್ತು ಇತರ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಹೈದರಾಬಾದ್ ಪೊಲೀಸರ ಪ್ರಕಟಣೆ ತಿಳಿಸಿದೆ.
ಈ ಪ್ರಕರಣದ ಪ್ರಮುಖ ಶಂಕಿತ ಆರೋಪಿ ಮಹಿಳೆಯ ಸಹೋದರ, ತನ್ನ ಸಹೋದರಿಯೊಂದಿಗೆ ನೋಟುಗಳನ್ನು ತಯಾರಿಸಲು ಕಚ್ಚಾ ವಸ್ತುಗಳನ್ನು ಖರೀದಿಸಿದ ನಂತರ 500 ರೂ. ಮುಖಬೆಲೆಯ ನಕಲಿ ಕರೆನ್ಸಿಯನ್ನು ಮುದ್ರಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಗುಜರಾತ್‌ನಲ್ಲಿ ನಕಲಿ ನೋಟುಗಳನ್ನು ಚಲಾವಣೆ ಮಾಡಿದ್ದ ಈತನನ್ನು ಅಲ್ಲಿನ ರಾಜ್ಯ ಪೊಲೀಸರು ಜನವರಿಯಲ್ಲಿ ಬಂಧಿಸಿದ್ದರು. ನಂತರ, ಪ್ರಮುಖ ಶಂಕಿತನ ಸಹೋದರಿ ಇನ್ನೊಬ್ಬ ಆರೋಪಿ, ಆಟೋ-ರಿಕ್ಷಾ ಚಾಲಕನನ್ನು ಸಂಪರ್ಕಿಸಿ ಮತ್ತು ಹೆಚ್ಚಿನ ಚಲಾವಣೆಗಾಗಿ ಎಫ್‌ಐಸಿಎನ್ ಸೇರಿದಂತೆ ಎಲ್ಲಾ ವಸ್ತುಗಳನ್ನು ಚಂದ್ರಾಯನಗುಟ್ಟಕ್ಕೆ ವರ್ಗಾಯಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.