ಮಂಡ್ಯ: ಅಭಿಷೇಕ್ ಹಾಗೂ ನನ್ನನ್ನು ರಾಜ್ಯ ರಾಜಕೀಯಕ್ಕೆ ಬನ್ನಿ ಎಂದು ಕಾರ್ಯಕರ್ತರು ಮತ್ತು ಬೆಂಬಲಿಗರು ಕರೆಯುತ್ತಿದ್ದಾರೆ. ಆದರೆ ನಾನು ಇನ್ನೂ ಯಾವುದೇ ನಿರ್ಧಾರ ಮಾಡಿಲ್ಲ ಎಂದು ಸಂಸದೆ ಸುಮಲತಾ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವ ಪಕ್ಷ ಸೇರಬೇಕು ಎಂದು ನಾನಿನ್ನೂ ನಿರ್ಧರಿಸಿಲ್ಲ. ಈ ಬಗ್ಗೆ ಏಕಾಏಕಿ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಿಲ್ಲ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ತೀರ್ಮಾನಿಸುತ್ತೇನೆ ಎಂದರು.
ಪಕ್ಷ ಸೇರ್ಪಡೆ ಗೊಂದಲವಿಲ್ಲ
ನನ್ನ ಪಕ್ಷ ಸೇರ್ಪಡೆ ವಿಚಾರದಲ್ಲಿ ಯಾರಿಗೂ ಗೊಂದಲವಿಲ್ಲ. ನಾನು ಲೋಕಸಭೆ ಚುನಾವಣೆಗೆ ನಿಂತಾಗ ಎಲ್ಲರೂ ಸಹಕಾರ ನೀಡಿದ್ದಾರೆ. ದೇಶದಲ್ಲಿ ಕಾಂಗ್ರೆಸ್, ಬಿಜೆಪಿ ಬಾವುಟ ಒಂದಾಗಿರಲಿಲ್ಲ. ಆದರೆ ನನ್ನ ಚುನಾವಣೆಯಲ್ಲಿ ಎರಡೂ ಪಕ್ಷಗಳ ಬಾವುಟ ಒಂದಾಗಿದ್ದವು ಎಂದರು.
ನಿಖೀಲ್ ಅಪ್ರಬುದ್ಧ
ಸುಮಲತಾ ಮಂಡ್ಯದಲ್ಲೆ ನಿಲ್ಲುತ್ತಾರಾ ಅಥವಾ ಬೆಂಗಳೂರಲ್ಲಿ ಸ್ಪರ್ಧಿಸುತ್ತಾರಾ ಎಂಬುದನ್ನು ನೋಡಬೇಕೆಂಬ ನಿಖೀಲ್ ಹೇಳಿಕೆಗೆ ಪ್ರತಿಕ್ರಿಯಿಸಿದ ಸುಮಲತಾ, ನಿಖೀಲ್ ಅಪ್ರಬುದ್ಧ. ಮೊನ್ನೆಯಷ್ಟೇ ಮಂಡ್ಯ ದಲ್ಲಿ ಚುನಾವಣೆ ಎದುರಿಸಿ ಇಲ್ಲೇ ಇರ್ತಿನಿ ಅಂತ ಹೇಳಿ, ಈಗ ರಾಮನಗರದಲ್ಲಿ ಚುನಾವಣೆಗೆ ನಿಲ್ಲುತ್ತಿರುವವರು ಯಾರು ಎಂದು ಪ್ರಶ್ನಿಸಿದರು.