Advertisement

ಒಲಿದು ಬಂದ ಪದ್ಮ ಪ್ರಶಸ್ತಿ: ಪ್ರಾಚೀನ ದ್ರಾವಿಡ ಪಂಗಡ…ಇರುಲಾ ಹಾವಾಡಿಗರು…

05:49 PM Feb 05, 2023 | Team Udayavani |

ತಮಿಳುನಾಡಿನ ಪ್ರಾಚೀನ ದ್ರಾವಿಡ ಸಮುದಾಯದ ಇರುಲಾ ಪಂಗಡಕ್ಕೆ ಸೇರಿದ ಇಬ್ಬರಿಗೆ ಕೇಂದ್ರ ಸರ್ಕಾರದ ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿ ಒಲಿದು ಬಂದಿದೆ. ಇರುಲಾ ಪಂಗಡದ ಇಬ್ಬರು ಹಾವಾಡಿಗರು ಈ ವರ್ಷದ ಗಣರಾಜ್ಯೋತ್ಸವದಂದು ರಾಷ್ಟ್ರಪತಿಗಳ ಕೈಯಿಂದ ಪದ್ಮ ಪ್ರಶಸ್ತಿ ಸ್ವೀಕರಿಸಿ ಸುದ್ದಿಯಾಗಿದ್ದಾರೆ.

Advertisement

ಯಾರು ಈ ಇರುಲಾ ಮಂದಿ.?
ತಮಿಳುನಾಡಿನ ಪ್ರಾಚೀನ ದ್ರಾವಿಡ ಸಮುದಾಯದಲ್ಲಿ ಇರುಲಾ ಪಂಗಡ ಗುರುತಿಸಿಕೊಂಡಿದೆ. ಹೆಚ್ಚಾಗಿ ತಮಿಳುನಾಡಿನ ಉತ್ತರ ಭಾಗದಲ್ಲಿ ಕಾಣಿಸಿಕೊಳ್ಳುವ ಇರುಲರ ಸಣ್ಣ ಸಣ್ಣ ಗುಂಪುಗಳು ಕರ್ನಾಟಕದ ಕೆಲವು ಭಾಗಗಳಲ್ಲೂ, ಕೇರಳದ ಪಾಲಕ್ಕಾಡ್‌ನಲ್ಲೂ ಗುರುತಿಸಲ್ಪಟ್ಟಿದೆ. ಇಂದಿಗೂ ಸಣ್ಣ ಸಣ್ಣ ಗುಡಿಸಲುಗಳಲ್ಲೇ ಬದುಕುತ್ತಿರುವ ಈ ಇರುಲರು ಬಹಳ ಹಿಂದಿನಿಂದಲೂ ಹಾವು ಹಾಗೂ ಇಲಿಗಳನ್ನು ಹಿಡಿಯುವುದರಲ್ಲಿ ನಿಪುಣರೆಂದು ಪ್ರಸಿದ್ಧರಾಗಿದ್ದಾರೆ. ಪಾರಂಪರಿಕವಾಗಿಯೂ, ತಮ್ಮ ಹವ್ಯಾಸದಂತೆಯೂ ಹಾವು ಹಿಡಿಯುವ ಇರುಲಾ ಜನ ಹಾವು ಹಿಡಿಯುವುದನ್ನು ತಮ್ಮ ಪ್ರವೃತ್ತಿಯಂತೆ ಇಂದಿಗೂ ಕಾಣುತ್ತಿದ್ದಾರೆ ಮತ್ತು ಹಾವುಗಳನ್ನು ಹಿಡಿದು ಸಂರಕ್ಷಿಸುವುದೇ ತಮಗೆ ಅತ್ಯಂತ ಖುಷಿ ಕೊಡುವ ಸಂಗತಿ ಅಂತಲೂ ಹೇಳಿಕೊಂಡು ಬಂದಿದ್ಧಾರೆ. ಅತ್ಯಂತ ಸಲೀಸಾಗಿ ಹಾವು ಹಿಡಿಯುವುದರಲ್ಲಿ ಈ ಇರುಲರು ಎತ್ತಿದ ಕೈ. ವಿಶೇಷವೇನೆಂದ್ರೆ ಕೇವಲ ಇರುಲಾ ಪುರುಷರು ಮಾತ್ರವಲ್ಲ ಮಹಿಳೆಯರೂ ಹಾವು ಹಿಡಿಯುವುದನ್ನು ಕರಗತ ಮಾಡಿಕೊಂಡಿದ್ದಾರೆ. ಇಂದು ಈ ಮಾಡರ್ನ್‌ ಯುಗದಲ್ಲೂ ಹಾವು ಹಿಡಿಯುವುದನ್ನು ಕೈಬಿಡದ ಇರುಲರು ತಮ್ಮದೇ ಆದ ಇರುಲಾ ಕೋ-ಆಪರೇಟೀವ್‌ ಸೊಸೈಟಿ ಸ್ಥಾಪಿಸಿಕೊಂಡಿದ್ದಾರೆ. ಆ ಮೂಲಕ ವೈದ್ಯಕೀಯ ಉದ್ದೇಶಕ್ಕಾಗಿ ವಿಷಕಾರಿ ಹಾವುಗಳನ್ನು ಹಿಡಿದು ಅದರ ವಿಷಗಳನ್ನು ಸಂಗ್ರಹಿಸುತ್ತಾರೆ. ಅಂದ್ರೆ ಧೀರ್ಘಕಾಲದ, ಪರಿಹರಿಸಲು ತೀರಾ ಕಷ್ಟವೆನಿಸುವ ಖಾಯಿಲೆಗಳನ್ನು ಗುಣಮುಖಗೊಳಿಸುವಲ್ಲಿ ಇವರ ಪಾತ್ರ ಮಹತ್ವದ್ದು. ವೈದ್ಯಕೀಯ ಲೋಕದಲ್ಲಿ ಹಾವಿನ ವಿಷವಂತೂ ಬಹುಪಯೋಗಿ. ಇಂತಹದರಲ್ಲಿ ಜೀವವನ್ನೇ ಪಣಕ್ಕಿಡುವ ಹಾವಾಡಿಗರ ಸಾಹಸ ಮೆಚ್ಚಬೇಕಾದ್ದೇ. ಇಡೀ ಭಾರತದಲ್ಲಿ ಸಾವಿರಾರು ಹಾವುಗಳನ್ನು ಸಂರಕ್ಷಿಸಿದ ಮತ್ತು ಲಕ್ಷಾಂತರ ಜನರ ಬದುಕಿಗೆ ಪುನರ್ಜನ್ಮ ನೀಡಿದ ಖ್ಯಾತಿಯೂ ಇವರಿಗೆ ಸಲ್ಲುತ್ತದೆ.

ಅಮೇರಿಕವೂ ಬೇಡಿತ್ತು ಇರುಲರ ಸಹಾಯ..!
2017ರಲ್ಲಿ ಅಮೇರಿಕದ ಫ್ಲೋರಿಡಾದಲ್ಲಿರುವ ಸರ್ಕಾರ ಇರುಲಾ ಪಂಗಡದ ಮಾಸಿ ಮತ್ತು ವಡಿವೇಲ್‌ ಎಂಬವರನ್ನು ಅಮೇರಿಕಕ್ಕೆ ಕರೆಸಿಕೊಂಡು ಹೆಬ್ಬಾವುಗಳನ್ನು ಹಿಡಿಯುವುದಕ್ಕೆ ಬಳಸಿಕೊಂಡಿದ್ರು. ಬರ್ಮೀಸ್‌ ಹೆಬ್ಬಾವುಗಳು ಫ್ಲೋರಿಡಾದಲ್ಲಿ ತಮ್ಮ ಮೂಲವನ್ನು ಹೊಂದಿಲ್ಲವಾದ್ರೂ ಭಾರತದ ಈಶಾನ್ಯ ಭಾಗಗಳಲ್ಲಿ, ಚೀನಾ-ಇಂಡೋನೇಷ್ಯಾದ ಕೆಲವು ಭಾಗಗಳಲ್ಲಿ ಸುಮಾರು ಬರ್ಮೀಸ್‌ ಹೆಬ್ಬಾವುಗಳು ಕಾಣಿಸಿಕೊಂಡಿದೆ. ಈದೇ ಬರ್ಮೀಸ್‌ ಹೆಬ್ಬಾವುಗಳು ಫ್ಲೋರಿಡಾದಲ್ಲಿ ಕೋಲಾಹಲ ಸೃಷ್ಟಿಸಿದಾಗ ಫ್ಲೋರಿಡಾ ಸರ್ಕಾರ ಸುಮಾರು 70,000 ಯು.ಎಸ್‌ ಡಾಲರ್‌ಗಳನ್ನು ಖರ್ಚು ಮಾಡಿ ಮಸಿ ಹಾಗೂ ವಡಿವೇಲ್‌ರನ್ನು ಅಮೇರಿಕಾಕ್ಕೆ ಕರೆಸಿಕೊಂಡಿತು. ಅವರು ಫ್ಲೋರಿಡಾ ಸರ್ಕಾರಕ್ಕೆ ಸಹಾಯವನ್ನು ಮಾಡುವುದರೊಂದಿಗೆ ನಿಟ್ಟುಸಿರು ಬಿಡುವಂತೆ ಮಾಡಿದ್ದರು.

ಕೊನೆಗೂ ಸಂದ ಗೌರವ
ಅಷ್ಟೇನೂ ಫಲಾಪೇಕ್ಷೆಯಿಲ್ಲದೆಯೂ ಹಾವು ಹಿಡಿಯುವುದನ್ನೇ ತಮ್ಮ ಕಸುಬನ್ನಾಗಿಸಿಕೊಂಡಿರುವ ಈ ಇರುಲಾ ಜನ ಎಷ್ಟೋ ಜನರ ಪಾಲಿಗೆ ದೇವತಾ ಸಮಾನರು ಎಂದರೂ ಅದು ಅತಿಶಯೋಕ್ತಿಯಲ್ಲ. ಇದೀಗ ಮಾಸಿ ಮತ್ತು ವಡಿವೇಲ್‌ ಇವರ ಕಾರ್ಯಕ್ಕೆ ಪದ್ಮಶ್ರೀ ಪ್ರಶಸ್ತಿ ಒದಗಿಬಂದಿದ್ದು ಕೇವಲ ಅವರಿಬ್ಬರಿಗಷ್ಟೇ ಅಲ್ಲ ಇಡೀ ಇರುಲಾ ಪಂಗಡಕ್ಕೇ ಸಂದ ಗೌರವ

-ಪ್ರಣವ್‌ ಶಂಕರ್‌

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next