Advertisement

ಕೋಟಿತೀರ್ಥ ಪುಷ್ಕರಿಣಿಯಲ್ಲಿ  ಮುಳುಗಿ ಇಬ್ಬರ ಸಾವು

12:59 PM Apr 24, 2018 | Harsha Rao |

ಕೋಟೇಶ್ವರ: ಇಲ್ಲಿನ ಶ್ರೀ ಕೋಟಿಲಿಂಗೇಶ್ವರ ದೇವಸ್ಥಾನದ ಕೋಟಿತೀರ್ಥ ಪುಷ್ಕರಿಣಿಯಲ್ಲಿ ಎ. 23ರಂದು ಪೂರ್ವಾಹ್ನ ಇಬ್ಬರು  ಕಾಲೇಜು ವಿದ್ಯಾರ್ಥಿಗಳು ಮುಳುಗಿ ಸಾವನ್ನಪ್ಪಿದ್ದಾರೆ.

Advertisement

ಕೋಟೇಶ್ವರದ ಎಸ್‌.ಕೆ.ವಿ.ಎಂ.ಎಸ್‌. ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಬಿ.ಎ. ಅಂತಿಮ ವರ್ಷದ ವಿದ್ಯಾರ್ಥಿ, ಕೋಟೇಶ್ವರದ ಕಾಳಾವರ ನಿವಾಸಿ ಸಚಿನ್‌ (21)  ಹಾಗೂ ಬಿ.ಕಾಂ. ದ್ವಿತೀಯ ವರ್ಷದ ವಿದ್ಯಾರ್ಥಿ ಸೇನಾಪುರದ ಭಟ್ರಹಿತ್ಲು ನಿವಾಸಿ ಕೀರ್ತನ್‌ (20) ಅವರು ಇನ್ನೋರ್ವ ಸಹಪಾಠಿ ಜತೆ  ಪುಷ್ಕರಿಣಿಯಲ್ಲಿ ಈಜಲು ತೆರಳಿದ್ದರು.

ಸಚಿನ್‌ ಕೆರೆಯ ನಡುವಿನ ನಂದಿ ಮಂಟಪದವರೆಗೆ ಈಜಿ ಅಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು. ಆಗ ಅರ್ಧ ದೂರದವರೆಗೆ ಈಜಿ ಬಂದಿದ್ದ ಕೀರ್ತನ್‌ ಗುರಿ ಮುಟ್ಟಲಾಗದೆ ಸಹಾಯಕ್ಕಾಗಿ  ಕೂಗಿದರು. ಕೂಡಲೇ ಸಚಿನ್‌ ಹಾಗೂ ದಡದಲ್ಲಿದ್ದ ಇನ್ನೋರ್ವ  ಈಜುತ್ತಾ ಆತನ ಸಮೀಪಕ್ಕೆ ತೆರಳಲು ಮುಂದಾದರು. ಆದರೆ ಓರ್ವ ಅರ್ಧದಿಂದಲೇ ವಾಪಸ್‌ ಹೋಗಿ ಸ್ಥಳೀಯರ ನೆರವು ಯಾಚಿಸಿದ. ಸಚಿನ್‌ ಈಜುತ್ತಾ ಕೀರ್ತನ್‌ನನ್ನು ರಕ್ಷಿಸಲು ಮುಂದಾಗುತ್ತಿದ್ದಂತೆ ಇಬ್ಬರೂ ಮುಳುಗಿ ಸಾವನ್ನಪ್ಪಿದರು ಎಂದು ಪ್ರತ್ಯಕ್ಷದರ್ಶಿಗಳು  ತಿಳಿಸಿದ್ದಾರೆ. ಇವರು ಕಾಲೇಜಿನಿಂದ ಪರೀಕ್ಷೆಯ ಹಾಲ್‌ ಟಿಕೆಟ್‌ ಪಡೆದು ಬಂದು ಕೆರೆಯಲ್ಲಿ ಈಜಲು ಆರಂಭಿಸಿದ್ದರು.

ಶೋಧ ಕಾರ್ಯ ಆರಂಭಿಸಿದ ಘಟನೆಯ ಒಂದು ತಾಸಿನ ಅನಂತರ ಕೀರ್ತನ್‌ ಮೃತದೇಹವನ್ನು ಪತ್ತೆಹಚ್ಚಿದರು. ಸಚಿನ್‌ ಅವರ ಮೃತದೇಹ ಸುಮಾರು 3 ಗಂಟೆ ಹೊತ್ತಿಗೆ ಕೆರೆಯ ಒಂದು ಪಾರ್ಶ್ವದಲ್ಲಿ ಲಭಿಸಿದೆ.

ಕುಂದಾಪುರ ಡಿವೈಎಸ್‌ಪಿ ದಿನೇಶ್‌ ಕುಮಾರ್‌, ಸರ್ಕಲ್‌ ಇನ್ಸ್‌ಪೆಕ್ಟರ್‌ ಮಂಜಪ್ಪ, ಎಸ್‌.ಐ. ಹರೀಶ್‌ ಸಹಿತ  ಪೊಲೀಸ್‌ ಸಿಬಂದಿ ಸ್ಥಳಕ್ಕೆ ಆಗಮಿಸಿ ಸಹಕರಿಸಿದರು. ಸ್ಥಳಕ್ಕಾಗಮಿಸಿದ ಕಾಲೇಜಿನ ವಿದ್ಯಾರ್ಥಿಗಳು  ಅಳುತ್ತಿದ್ದುದು ಕಂಡುಬಂತು.

Advertisement

ಕೆರೆಗೆ ತಡೆ ಬೇಲಿ ಅಗತ್ಯ 
ನಾಲ್ಕೂವರೆ ಎಕರೆ ವಿಸ್ತೀರ್ಣದ  ಬೃಹತ್‌ ಕೆರೆಗೆ ತಡೆಬೇಲಿ ಇಲ್ಲದಿರುವುದು ಇಂತಹ ದುರಂತಗಳಿಗೆ ಕಾರಣವಾಗಿದ್ದು, ಅಲ್ಲಿ ತಡೆಬೇಲಿ ನಿರ್ಮಿಸಿ ಕಾವಲುಗಾರನನ್ನು ನೇಮಿಸುವ ಅಗತ್ಯ ಇದೆ ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ. ಇತ್ತೀಚೆಗೆ ಈ ಕೆರೆಯಲ್ಲಿ ಅಮಾಯಕರು ಸಾವನ್ನಪ್ಪುತ್ತಿರುವುದು ಸಾರ್ವಜನಿಕ ವಲಯದಲ್ಲಿ ಟೀಕೆಗೆ ಕಾರಣವಾಗಿದೆ.

ಬಡ ಕುಟುಂಬದ ಮಕ್ಕಳು
ಕಾಳಾವರದ ಬಡ ಕುಟುಂಬದವರಾದ ಲಾರಿ ಚಾಲಕ ಸುಬ್ಬ ಪೂಜಾರಿ ಅವರ ಏಕೈಕ ಪುತ್ರನಾಗಿದ್ದ ಸಚಿನ್‌ ತಂದೆ, ತಾಯಿ ಹಾಗೂ ಇಬ್ಬರು ಸಹೋದರಿಯರನ್ನು ಅಗಲಿದ್ದಾರೆ. ಕೀರ್ತನ್‌ ಅವರು ಸೇನಾಪುರದ ಭಟ್ರಹಿತ್ಲು ನಿವಾಸಿ ರಾಜು ಮರಕಾಲ ಅವರ ಪುತ್ರ. ರಾಜು ಅವರು ಬಾಗಲಕೋಟೆಯಲ್ಲಿ ಹೊಟೇಲ್‌ ಕಾರ್ಮಿಕರಾಗಿದ್ದಾರೆ. ಇನ್ನೋರ್ವ ಪುತ್ರ ಕಿರಣ ಮಂಗಳೂರಿನಲ್ಲಿ ಉದ್ಯೋಗ ದಲ್ಲಿದ್ದಾರೆ. ತಾಯಿಯ ಆರೋಗ್ಯ ಉತ್ತಮವಾಗಿಲ್ಲ.

ಸಚಿನ್‌ ವಾಲಿಬಾಲ್‌ ಪಟು
ಸಚಿನ್‌ ಉತ್ತಮ ಕ್ರೀಡಾಪಟುವಾಗಿದ್ದು, ಕಾಲೇಜಿನ ವಾಲಿಬಾಲ್‌ ತಂಡದ ಆಟಗಾರ ರಾಗಿ ವಿಶ್ವವಿದ್ಯಾನಿಲಯ ಮಟ್ಟದಲ್ಲಿ ಗುರುತಿಸಿ ಕೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next