ಬದಿಯಡ್ಕ/ಕುಂಬಳೆ: ಜ್ವರ ಬಾಧಿತರಾಗಿ ಕೆಲವು ದಿನಗಳಿಂದ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಹೋದರರಾದ ಇಬ್ಬರು ಮಕ್ಕಳು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ.
ಕನ್ಯಪ್ಪಾಡಿ ನಿವಾಸಿ ಸಿದ್ದಿಕ್ ಅವರ ಮಕ್ಕಳಾದ ಮೊದೀನ್ ಸಿನಾಸ್ (ನಾಲ್ಕೂವರೆ ವರ್ಷ) ಮತ್ತು ಫಿದರುತ್ತುಲ್ ಮುನ್ತಾಹ್ (8 ತಿಂಗಳು) ಮೃತಪಟ್ಟ ಮಕ್ಕಳು. ಫಿದರುತ್ತುಲ್ ಮುನ್ತಾಹ್‌ಜು. 23ರಂದು ಸಂಜೆ ಸಾವಿಗೀಡಾದರೆ, ಮೊದೀನ್ ಸಿನಾಸ್ ಬುಧವಾರ ಬೆಳಗ್ಗೆ ಕೊನೆಯುಸಿರೆಳೆದಿದ್ದಾನೆ.
ಮಕ್ಕಳ ಸಾವಿಗೆ ಸ್ಪಷ್ಟ ಕಾರಣ ತಿಳಿದುಬಂದಿಲ್ಲ. ಕೆಲವು ದಿನಗಳ ಹಿಂದೆ ತಾಯಿಯ ತವರು ಮನೆಯಾದ ಮುಗುರೋಡ್‌ಗೆ ಮಕ್ಕಳು ಹೋಗಿದ್ದರು. ಅಲ್ಲಿಂದ ಬರುವಾಗ ಜ್ವರ ತಗಲಿರುವುದಾಗಿ ಹೇಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮಕ್ಕಳ ಹೆತ್ತವರ ರಕ್ತದ ಮಾದರಿಯನ್ನು ಸಂಗ್ರಹಿಸಿ ಪುಣೆಯ ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿದೆ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.
ಇದೇ ವೇಳೆ ಮಕ್ಕಳ ನಿಗೂಢ ಸಾವಿನ ಬಗ್ಗೆ ಸಮಗ್ರ ತನಿಖೆಗಾಗಿ ವೈದ್ಯರ ತಂಡ ಕನ್ಯಪ್ಪಾಡಿಯ ತಂದೆಯ ಮನೆ ಮತ್ತು ಮುಗುರೋಡ್‌ನ ತಾಯಿ ಮನೆ ಹಾಗೂ ಪರಿಸರದಲ್ಲಿ ತಪಾಸಣೆ ನಡೆಸಿದೆ. ಯಾವುದಾದರೂ ನಿಗೂಢ ರೋಗ ಹರಡಿರುವ ಸಾಧ್ಯತೆಯ ಬಗ್ಗೆ ತನಿಖೆ ನಡೆಯುತ್ತಿದೆ. ಎಳೆಯ ಮಕ್ಕಳಿಬ್ಬರು ನಿಗೂಢ ಜ್ವರಕ್ಕೆ ಬಲಿಯಾಗಿರುವುದು ಭೀತಿಗೆ ಕಾರಣವಾಗಿದೆ.
ತಾಯಿಗೂ ಜ್ವರ
ಮಕ್ಕಳ ತಾಯಿಗೂ ಜ್ವರಬಾಧೆಯಿದೆ. ಅಗತ್ಯವಿದ್ದಲ್ಲಿ ಅವರನ್ನು ಪರಿಣತ ಚಿಕಿತ್ಸೆಗಾಗಿ ಪರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಅಥವಾ ಕಲ್ಲಿಕೋಟೆ ಮೆಡಿಕಲ್ ಕಾಲೇಜಿಗೆ ಕರೆದೊಯ್ಯಲಾಗುವುದು ಎಂದು ಜಿಲ್ಲಾ ವೈದ್ಯಾಧಿಕಾರಿ ತಿಳಿಸಿದ್ದಾರೆ.