ರಾಮನಗರ/ಕನಕಪುರ: ಜಿಲ್ಲೆಯಲ್ಲಿ ಮಂಗಳವಾರ ಮತ್ತೆ ಎರಡು ಕೋವಿಡ್ -19 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 7ಕ್ಕೆ ಏರಿದೆ. ಕನಕಪುರ ನಗರದಲ್ಲಿ 17 ವರ್ಷದ ಯುವಕ ಮತ್ತು ಮಾಗಡಿಯ ತಾಲೂಕಿನಲ್ಲಿ 24 ವರ್ಷದ ಮಹಿಳೆಯೊಬ್ಬರಲ್ಲಿ ಪಾಸಿಟಿವ್ ಫಲಿತಾಂಶ ಬಂದಿದೆ.
ಹೀಗಾಗಿ ಅವರಿಬ್ಬರನ್ನು ರಾಮನಗರದ ಕೋವಿಡ್-19 ರೆಫರಲ್ ಆಸ್ಪತ್ರೆಯಲಿ ಚಿಕಿತ್ಸೆಗೆ ದಾಖಲಿಸಲಾಗಿದೆ. 2 ವರ್ಷದ ಮಗುವೊಂದಕ್ಕೆ ಸೋಂಕು ತಗುಲಿದ್ದ ಪ್ರಥಮ ಪ್ರಕರಣದಲಿ, ಮಗು ಗುಣಮು ಖವಾಗಿ ಆಸ್ಪತ್ರೆಯಿಂದ ಬಿಡುಗಡೆಯಾ ಗಿದೆ. ಹೀಗಾಗಿ ಜಿಲ್ಲೆಯಲ್ಲಿ ಸೋಂಕಿನ ಸಕ್ರಿಯ ಪ್ರಕರಣಗಳು 6 ಮಾತ್ರ ಇವೆ.
ಯುವಕನಿಗೆ ಸೋಂಕು, ಕುಟುಂಬದವರ ಕ್ವಾರಂಟೈನ್: ಕನಕಪುರದ ಬಟ್ಟೆ ಅಂಗಡಿಯೊಂದರಲ್ಲಿ ಕೆಲಸ ಮಾಡಿ ಕೊಂಡಿದ್ದ ಯುವಕನಿಗೆ ಕೋವಿಡ್ 19 ಸೋಂಕು ದೃಢಪಟ್ಟಿದ್ದು, ತಾಲೂಕು ಆಡಳಿತ ಬಟ್ಟೆ ಅಂಗಡಿ ಸುತ್ತಮುತ್ತಲು 100 ಮೀ. ವ್ಯಾಪ್ತಿಯನ್ನು ನಿರ್ಬಂಧಿತ ಪ್ರದೇಶ ಎಂದು ಘೋಷಿಸಿ ಸೀಲ್‌ಡೌನ್ ಮಾಡಿದೆ.
ತಮಿಳುನಾಡು ಗಡಿಭಾಗದ ಕಾಡು ಶಿವನಹಳ್ಳಿ ಯುವಕ, ನಗರದ ಬೂದಿಗೆರೆ ರಸ್ತೆಯ ನಿರ್ಮಲಾ ಫ್ಯಾಷನ್ ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿ ಕೊಂಡು, ಅಂಗಡಿ ಮಾಲೀಕರ ಮನೆ ಮಹಡಿ ಮೇಲೆ ವಾಸವಾಗಿದ್ದ. ಯುವಕ ಸ್ವಗ್ರಾಮದಲ್ಲಿ ನಡೆದ ಮದುವೆಗೆ ಹೋಗಿದ್ದು, ಅಲ್ಲಿಂದಲೇ ಸೋಂಕು ಹರಡಿರಬಹುದು ಎಂಬ ಶಂಕೆಯಿದೆ.
ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಅಂಗಡಿ ಮಾಲಿಕರ ಕುಟುಂಬದ 6 ಮಂದಿ ಮತ್ತು ತಂದೆ-ತಾಯಿ, ಅಕ್ಕ ಸೇರಿದಂತೆ 9 ಮಂದಿಯನ್ನು ನಗರದ ಹೊಸಕೋಟೆಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಕ್ಯಾರಂಟೈನ್ ಮಾಡ ಲಾಗಿದೆ. ಅವರ ಗಂಟಲು ದ್ರವ ಮತ್ತು ರಕ್ತ ಮಾದರಿ ಪರೀಕ್ಷೆಗೆ ಕಳುಹಿಸಲಾಗಿದೆ. ಯುವಕನ ಪ್ರಯಾಣದ ವಿವರ ಮತ್ತು 2ನೇ ಹಂತದ ಸಂಪರ್ಕದಲ್ಲಿದ್ದವರ ಮಾಹಿತಿ ಸಂಗ್ರಹಿಸಲು ಆರೋಗ್ಯ ಅಧಿಕಾರಿಗಳು ನಿರತರಾಗಿದ್ದಾರೆ.
ಸಿಪಿಐ ಪ್ರಕಾಶ್, ನಗರ ಠಾಣೆ ಎಸ್‌ಐ ಲಕ್ಷ್ಮಣ್‌ಗೌಡ ಅವರ ತಂಡ ಕಟ್ಟೆಚ್ಚರ ವಹಿಸಿದ್ದಾರೆ. ನಗರಸಭೆ ಪೌರಾಯುಕ್ತ ಮಾಯಣ್ಣ ಗೌಡರ ನೇತೃತ್ವದ ತಂಡ ಬಟ್ಟೆ ಅಂಗಡಿ ಸುತ್ತಮುತ್ತಲು ಮತ್ತು ಬಸವೇಶ್ವರ ನಗರದ ಅಂಗಡಿ ಮಾಲಿಕರ ಮನೆ ಸುತ್ತಲೂ ಔಷಧ ಸಿಂಪರಣೆ ಮಾಡಿ ಸ್ಯಾನಿಟೈಸ್ ಮಾಡಿದ್ದಾರೆ.