Advertisement

ಮ.ಪ್ರ.: ರಿವರ್ಸ್‌ ಆಪರೇಷನ್‌?

01:52 AM Jul 25, 2019 | Team Udayavani |

ಭೋಪಾಲ್: ಕರ್ನಾಟಕದ ಬಳಿಕ ಮಧ್ಯಪ್ರದೇಶದ ಕಾಂಗ್ರೆಸ್‌ ಸರಕಾರದ ಮೇಲೆ ಬಿಜೆಪಿ ಕಣ್ಣಿಟ್ಟಿದೆ ಎಂಬ ಸುದ್ದಿ ಹರಿದಾಡುತ್ತಿರುವ ನಡುವೆಯೇ, ಮಧ್ಯಪ್ರದೇಶದಲ್ಲೊಂದು ಅಚ್ಚರಿಯ ಘಟನೆ ನಡೆದಿದೆ.

Advertisement

ಮಧ್ಯಪ್ರದೇಶ ಅಸೆಂಬ್ಲಿಯಲ್ಲಿ ವಕೀಲರಿಗೆ ಸಂಬಂಧಿಸಿದ ಮಸೂದೆಯೊಂದರ ಅಂಗೀಕಾರದ ವೇಳೆ ಇಬ್ಬರು ಬಿಜೆಪಿ ಶಾಸಕರು ಏಕಾಏಕಿ ಕಾಂಗ್ರೆಸ್‌ ಸರಕಾರದ ಪರ ಮತ ಚಲಾಯಿಸುವ ಮೂಲಕ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ. ಈ ಬೆಳವಣಿಗೆಯು ಬಿಜೆಪಿಗೆ ತೀವ್ರ ಮುಖಭಂಗ ಉಂಟುಮಾಡಿದೆ.

ಕ್ರಿಮಿನಲ್ ಕಾನೂನು (ಮಧ್ಯಪ್ರದೇಶ ತಿದ್ದುಪಡಿ) ಮಸೂದೆ 2019 ಅನ್ನು ಮತಕ್ಕೆ ಹಾಕಿದಾಗ ಒಟ್ಟು 122 ಮಂದಿ ಸರಕಾರದ ಪರ ಮತ ಚಲಾಯಿಸಿದ್ದಾರೆ. 230 ಸದಸ್ಯಬಲದ ಅಸೆಂಬ್ಲಿಯಲ್ಲಿ ಸ್ಪೀಕರ್‌ ಸೇರಿದಂತೆ 121 ಶಾಸಕರು ಸರಕಾರದ ಪರವಿದ್ದಾರೆ. ಬುಧವಾರದ ಮತದಾನದಿಂದ ಸ್ಪೀಕರ್‌ ದೂರ ಉಳಿದಿದ್ದರು. ಆದರೂ, ಕಾಂಗ್ರೆಸ್‌ಗೆ 122 ಮತಗಳು ಬಿದ್ದಿವೆ. ಕಾಂಗ್ರೆಸ್‌ನಿಂದ ಬಿಜೆಪಿಗೆ ಬಂದು ಗೆದ್ದಿರುವಂಥ ನಾರಾಯಣ ತ್ರಿಪಾಠಿ ಮತ್ತು ಶರದ್‌ ಕೋಲ್ ಅವರೂ ಸರಕಾರದ ಪರ ಮತ ಚಲಾಯಿಸಿದ್ದಾರೆ.

ಕಮಲ್‌ನಾಥ್‌ ಖುಷ್‌
ಈ ಕುರಿತು ಪ್ರತಿಕ್ರಿಯಿಸಿದ ಸಿಎಂ ಕಮಲ್‌ನಾಥ್‌, ‘ನಮ್ಮದು ಅಲ್ಪಮತದ ಸರಕಾರ. ಒಂದಲ್ಲ ಒಂದು ದಿನ ಪತನಗೊಳ್ಳುತ್ತದೆ ಎಂದು ಬಿಜೆಪಿ ಪ್ರತಿ ದಿನ ಹೇಳುತ್ತಾ ಬರುತ್ತಿದೆ. ಆದರೆ ನಮ್ಮದು ಅಲ್ಪಮತದ ಸರಕಾರವಲ್ಲ ಎಂಬುದು ಇಂದು ಸಾಬೀತಾಯಿತು’ ಎಂದಿದ್ದಾರೆ.

24 ಗಂಟೆಗಳೊಳಗೆ ಪತನ
ಈ ಎಲ್ಲ ಬೆಳವಣಿಗೆಗಳಿಗೂ ಮುನ್ನ ಮಾತನಾಡಿದ್ದ ವಿಪಕ್ಷ ಬಿಜೆಪಿ ನಾಯಕ ಗೋಪಾಲ್ ಭಾರ್ಗವ್‌, ನಮ್ಮ ಪಕ್ಷದ ನಂ.1 ಮತ್ತು ನಂ.2 ಆದೇಶ ಕೊಟ್ಟರೆ ಸಾಕು, 24 ಗಂಟೆಗಳೊಳಗೆ ನಿಮ್ಮ ಸರಕಾರವನ್ನು ಪತನಗೊಳಿಸುತ್ತೇವೆ’ ಎಂದು ಹೇಳಿದ್ದರು. ಅದಕ್ಕೆ ತಿರುಗೇಟು ನೀಡಿದ್ದ ಸಿಎಂ ಕಮಲ್‌ನಾಥ್‌, ‘ಅಷ್ಟೊಂದು ಧೈರ್ಯವಿದ್ದರೆ ಇಂದೇ ವಿಧಾನಸಭೆಯಲ್ಲಿ ಅವಿಶ್ವಾಸ ಗೊತ್ತುವಳಿ ಮಂಡಿಸಿ’ ಎಂದು ಸವಾಲನ್ನೂ ಹಾಕಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next