ಬೆಂಗಳೂರು: ಕರ್ನಾಟಕದಲ್ಲಿ ಎರಡೂವರೆ ಮುಖ್ಯಮಂತ್ರಿಗಳ ಸರ್ಕಾರವಿದ್ದು, ದೇಶದಲ್ಲಿ ಘಟಬಂಧನ್ ಸರ್ಕಾರದ ಕಾರ್ಯನಿರ್ವಹಣೆಗೆ ಮಾದರಿ ಸರ್ಕಾರವೆನಿಸಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ವ್ಯಂಗ್ಯವಾಡಿದ್ದಾರೆ.
ದೇವನಹಳ್ಳಿಯ ಆವತಿಯಲ್ಲಿ ಗುರುವಾರ ಆಯೋಜಿಸಲಾಗಿದ್ದ ಚಿಕ್ಕಬಳ್ಳಾಪುರ, ಕೋಲಾರ ಹಾಗೂ ತುಮಕೂರು ಲೋಕಸಭಾ ಕ್ಷೇತ್ರಗಳ ಶಕ್ತಿ ಕೇಂದ್ರ ಪ್ರಮುಖ ಸಭೆಯಲ್ಲಿ ಮಾತನಾಡಿದ ಅವರು ಮೈತ್ರಿ ಸರ್ಕಾರದ ವಿರುದ್ಧ ಹರಿಹಾಯ್ದರು.
“”ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ತಾವು ಕ್ಲರ್ಕ್‌ನಂತೆ ಕೆಲಸ ಮಾಡುತ್ತಿದ್ದೇನೆ ಎನ್ನುತ್ತಾರೆ, ಸಿದ್ದರಾಮಯ್ಯ ಅವರು ಸೂಪರ್ ಸಿಎಂನಂತಿದ್ದಾರೆ. ಪರಮೇಶ್ವರ್ ಅರ್ಧ ಸಿಎಂನಂತಿದ್ದಾರೆ. ಹಾಗಾಗಿ ಇದು ಎರಡೂವರೆ ಮುಖ್ಯಮಂತ್ರಿಗಳ ಸರ್ಕಾರ. ಇಂತಹ ಸರ್ಕಾರದಿಂದ ಜನರ ಅಭಿವೃದ್ಧಿ ಸಾಧ್ಯವೇ” ಎಂದು ಅಮಿತ್ ಶಾ ಪ್ರಶ್ನಿಸಿದಾಗ ನೆರೆದಿದ್ದ ಸಭಿಕರು ಇಲ್ಲ ಎಂದು ಅನುಮೋದಿಸಿದರು.
ಮಹಾಘಟಬಂಧನ್ ಹೆಸರಿನಲ್ಲಿ ಯಾರೆಲ್ಲಾ ಒಂದಾಗುತ್ತಿದ್ದಾರೆಯೋ ಅವರೆಲ್ಲರೂ ಪ್ರಧಾನಿ ಹುದ್ದೆ ಆಕಾಂಕ್ಷಿಗಳೇ ಆಗಿದ್ದಾರೆ. ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡರು ಸಹ ಪ್ರಧಾನಿ ಹುದ್ದೆ ಆಕಾಂಕ್ಷಿಯಾಗಿದ್ದಾರೆ ಎಂದು ವ್ಯಂಗ್ಯವಾಡಿದರು.
ಘಟಬಂಧನ್‌ನಿಂದ ಅಭಿವೃದ್ಧಿ ಸಾಧ್ಯವಿಲ್ಲ: ಘಟಬಂಧನ್ ಸರ್ಕಾರದಿಂದ ದೇಶದ ಅಭಿವೃದ್ಧಿಯಾಗುವು ದಿಲ್ಲ, ದೇಶದ ಗೌರವ ಹೆಚ್ಚುವುದಿಲ್ಲ. ಅರ್ಥಿಕತೆ ಶಕ್ತಿಯೂ ವೃದ್ಧಿ ಸುವುದಿಲ್ಲ. ದೇಶದ 50 ಕೋಟಿ ಬಡವರಿಗೆ ನೆರವು ಸಿಗುವುದಿಲ್ಲ ಎಂದು ಹೇಳಿದರು.