ಬೆಂಗಳೂರು: ಭಾರತೀಯ ವಾಯುಪಡೆ ಪಾಕಿಸ್ತಾನದ ಬಾಲಕೋಟ್‌ನ ಉಗ್ರರ ಶಿಬಿರಗಳ ಮೇಲೆ ನಡೆಸಿದ ದಾಳಿಗೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧಿಕೃತ ಟ್ವಿಟರ್ ಖಾತೆಯ ಹೆಸರಿನಲ್ಲಿ ತಿರುಚಿದ ನಕಲಿ ಮಾಹಿತಿ ಹಬ್ಬಿಸಿದ ಸಂಗತಿ ಬೆಳಕಿಗೆ ಬಂದಿದೆ.
ಈ ಕುರಿತು ಮಾಜಿ ಸಿಎಂ ಸಿದ್ದರಾಮಯ್ಯ ತಮ್ಮ ಟ್ವಿಟರ್ ಖಾತೆಯಲ್ಲಿ ಬುಧವಾರ ಈ ಮಾಹಿತಿ ಹಂಚಿಕೊಂಡಿದ್ದು, ತಿರುಚಿದ ಟ್ವೀಟ್‌ಗೆ ಸಂಬಂಧಿಸಿದಂತೆ ಸ್ಪಷ್ಟೀಕರಣ ನೀಡಿದ್ದಾರೆ.
ತಮ್ಮ ಟ್ವಿಟರ್ ಖಾತೆಯಿಂದ ಕೆಲ ದುಷ್ಕರ್ಮಿಗಳು ತಿರುಚಿದ ಮಾಹಿತಿ ಟ್ವೀಟ್ ಮಾಡಿ, ಸಾಮಾಜಿಕ ಜಾಲ ತಾಣಗಳಲ್ಲಿ ಹರಿಬಿಟ್ಟಿದ್ದಾರೆ. “ಟ್ರೋಲ್ ಸಿಸ್ಯಂದಿರು’ ಹೆಸರಿನ ಲೋಗೋ ಟ್ವೀಟ್‌ನಲ್ಲಿದೆ. ಕೂಡಲೇ ದುಷ್ಕರ್ಮಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಕೋರಿ ಬೆಂಗಳೂರು ನಗರ ಪೊಲೀಸರು ಹಾಗೂ ಗೃಹ ಸಚಿವ ಎಂ.ಬಿ. ಪಾಟೀಲರಿಗೆ ಟ್ಯಾಗ್ ಮಾಡಿದ್ದಾರೆ.
ಈ ಟ್ವೀಟ್‌ನ್ನು ಗಂಭೀರವಾಗಿ ಪರಿಗಣಿಸಿರುವ ಗೃಹಸಚಿವರು, ದುಷ್ಕರ್ಮಿಗಳನ್ನು ಕೂಡಲೇ ಬಂಧಿಸುವಂತೆ ಹಿರಿಯ ಅಧಿಕಾರಿಗಳಿಗೆ ಖುದ್ದು ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಫೆ.26ರಂದು ಭಾರತೀಯ ವಾಯುಪಡೆ ಪಾಕಿಸ್ತಾನದ ಬಾಲ್ ಕೋಟ್‌ನಲ್ಲಿರುವ ಜೈಶ್ ಎ ಮೊಹಮದ್ ಉಗ್ರರ ನೆಲೆ ಮೇಲೆ
ದಾಳಿ ನಡೆಸಿತ್ತು. ಅದೇ ದಿನ ಸಂಜೆ 5.15ಕ್ಕೆ ಸಿದ್ದರಾಮಯ್ಯ ಅವರ ಟ್ವೀಟರ್ ಖಾತೆಯಲ್ಲಿ ” ಇಂದು ಭಾರತದ ವಾಯುಪಡೆ ಬಾಗಲಕೋಟ್‌ನಲ್ಲಿ ದಾಳಿ ನಡೆಸಿದೆ. ದಾಳಿಯಲ್ಲಿ ಮೃತಪಟ್ಟ ಉಗ್ರರ ಆತ್ಮಕ್ಕೆ ಶಾಂತಿ ಸಿಗಲಿ, ಅವರ ಕುಟುಂಬಕ್ಕೆ ಸಾಂತ್ವಾನ’ ಎಂಬ ಬರಹವುಳ್ಳ ಟ್ವೀಟ್ ಪ್ರಕಟಗೊಂಡಿತ್ತು. ಈ ವಿಚಾರಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶವ್ಯಕ್ತವಾಗಿತ್ತು. ಜತೆಗೆ ಸಾಕಷ್ಟು ಟ್ರೋಲ್‌ಗೆ ಒಳಗಾಗಿತ್ತು.