Advertisement

ರಿವೇಂಜ್‌ ಸ್ಟೋರಿಯಲ್ಲಿ ಟ್ವಿಸ್ಟ್‌ಗಳದ್ದೇ ಕಾರುಬಾರು!

10:23 AM Mar 17, 2020 | Lakshmi GovindaRaj |

“ದಿ ಲಾಸ್ಟ್‌ ರೈಡ್‌…’ ಆ ಡಬ್ಬಾ ವ್ಯಾನ್‌ ಮೇಲಿರುವ ಹೀಗೊಂದು ಬರವಣಿಗೆ ನೋಡುಗರಿಗೆ ರಿಜಿಸ್ಟರ್‌ ಆಗುತ್ತೆ. ಅಲ್ಲಿಗೆ ಅಲ್ಲೊಂದು ಘಟನೆ ನಡೆಯುತ್ತೆ ಎಂಬ ಸಣ್ಣ ಸುಳಿವನ್ನು ಆ ಬರವಣಿಗೆ ಕೊಡುತ್ತೆ. ಅಂದುಕೊಂಡಂತೆಯೇ, ಅಲ್ಲೊಂದು ನಿರೀಕ್ಷಿಸದ ಘಟನೆ ಕೂಡ ನಡೆದು ಹೋಗುತ್ತೆ. ಅದರ ಹಿಂದೆ ಒಂದು ರಹಸ್ಯವಿರುತ್ತೆ. ಆ ರಹಸ್ಯ ಏನೆಂಬುದೇ ಚಿತ್ರದ ತಿರುಳು. ಶೀರ್ಷಿಕೆಗೆ ತಕ್ಕ ಕಥೆ ಇಲ್ಲಿದೆಯಾದರೂ, ಅದನ್ನು ಇನ್ನಷ್ಟು ರೋಚಕವಾಗಿ ತೋರಿಸಲು ಸಾಧ್ಯವಿತ್ತು.

Advertisement

ಆರಂಭದಿಂದ ಅಂತ್ಯದವರೆಗೂ ಸಣ್ಣ ಸಣ್ಣ ಟ್ವಿಸ್ಟ್‌ಗಳ ಮೂಲಕ ನೋಡುಗರಲ್ಲಿ ಕುತೂಹಲ ಕೆರಳಿಸುವ ಚಿತ್ರದಲ್ಲಿ ಒಂದಷ್ಟು ದೋಷಗಳಿವೆ. ಅವನ್ನು ಬದಿಗೊತ್ತಿ ನೋಡುವುದಾದರೆ, ಹೊಸಬರ ಪ್ರಯತ್ನದಲ್ಲೊಂದು ಹೊಸತನವಿದೆ. ಜೊತೆಯಲ್ಲೊಂದು ವಿಶೇಷತೆಯೂ ಇದೆ. ನಿರೂಪಣೆ ಇನ್ನೂ ಬಿಗಿಯಾಗಿದಿದ್ದರೆ ರೋಚಕತೆ ಇರುತ್ತಿತ್ತು. ಕೆಲ ಪಾತ್ರಗಳಲ್ಲಿ ಕೊಂಚ ರಹಸ್ಯ ಉಳಿಸಿದ್ದರೆ, ನೋಡುಗರಲ್ಲಿ ಮತ್ತಷ್ಟು ಕುತೂಹಲ ಮೂಡಿಸಬಹುದಿತ್ತು.

ಮಧ್ಯಂತರಕ್ಕೂ ಮುನ್ನವೇ, ಒಂದು ಘಟನೆಗೆ ಕಾರಣರಾದವರನ್ನು ತೋರಿಸಿರುವುದೇ ಸಿನಿಮಾದ ಸಣ್ಣ ಮೈನಸ್‌ ಎನ್ನಬಹುದು. ಹಾಗೆ ನೋಡಿದರೆ, ಇದೊಂದು ರಿವೇಂಜ್‌ ಸ್ಟೋರಿ. ಹೇಳುವ ಕಥೆಯಲ್ಲಿ ಒಂದಷ್ಟು ಗೌಪ್ಯತೆ ಕಾಪಾಡಿರುವುದೇ ಸಿನಿಮಾದ ಹೆಚ್ಚುಗಾರಿಕೆ. ಅದು ಬಿಟ್ಟರೆ, ಹೆಚ್ಚೇನೂ ಹೇಳುವ ಅಗತ್ಯವಿಲ್ಲ. ಇಲ್ಲೂ ಗೆಳೆತನವಿದೆ, ಪ್ರೀತಿ ಇದೆ, ಅಮ್ಮನ ಮಮತೆ ಇದೆ, ಪೊಲೀಸರ ಹುಡುಕಾಟವಿದೆ, ನಗುವೇ ಬರದ ಹಾಸ್ಯವಿದೆ.

ವಿನಾಕಾರಣ ತೂರಿಬರುವ ಹಾಡೂ ಇದೆ. ಇವೆಲ್ಲವನ್ನೂ ಹದವಾಗಿ ಬೆರೆಸಿದ್ದರೆ, ತಕ್ಕಮಟ್ಟಿಗಾದರೂ ಛಾಪು ಮೂಡಿಸಬಹುದಿತ್ತು. ಆದರೂ ಒಂದಷ್ಟು ಎಡವಟ್ಟುಗಳನ್ನು ಪಕ್ಕಕ್ಕಿಡುವುದಾದರೆ, ಹೊಸಬರ ಚಿತ್ರ ಒಂದಷ್ಟು ನೋಡಿಸಿಕೊಂಡು ಹೋಗುತ್ತೆ ಅನ್ನುವುದು ಸಮಾಧಾನದ ಸಂಗತಿ. ಶೀರ್ಷಿಕೆ ಹೇಳುವಂತೆ, ಇದೊಂದು ಸಸ್ಪೆನ್ಸ್‌ ಥ್ರಿಲ್ಲರ್‌ ಕಥೆ ಹೊಂದಿರುವ ಚಿತ್ರ. ಇಲ್ಲೊಂದು ಸೇಡಿನ ಕಥೆ ಇದೆ.

ಐವರು ಆತ್ಮೀಯ ಗೆಳೆಯರ ನಡುವೆ ಆಗಾಗ ಸಣ್ಣ ಪುಟ್ಟ ಗಂಭೀರ ವಿಷಯಗಳ ಕುರಿತಂತೆ ಪ್ರಾಂಕ್‌ (ಬಕರ) ಮಾಡುವ ಕೆಲಸ ನಡೆಯುತ್ತಿರುತ್ತೆ. ಅದೇ ವಿಷಯ ಮುಂದೆ ನಡೆಯುವ ಘಟನೆಯಲ್ಲಿ ತುಂಬಾ ಗಂಭೀರವಾಗುತ್ತೆ. ಗೆಳೆಯನೊಬ್ಬನನ್ನು ಬ್ಯಾಚ್ಯುಲರ್‌ ಪಾರ್ಟಿ ಕೊಡಿಸು ಅಂತ ದುಂಬಾಲು ಬೀಳುವ ನಾಲ್ವರು ಗೆಳೆಯರು ಸೇರಿ ಮದುವೆಗೆ ಮುನ್ನ ಪಾರ್ಟಿ ಕೊಡಿಸುವ ಗೆಳೆಯನನ್ನೇ ಪೆಟ್ಟಿಗೆಯೊಂದರಲ್ಲಿ ಕೈ ಕಾಲು ಕಟ್ಟಿ ಹಾಕಿ, ಮಣ್ಣಲ್ಲಿ ಹೂತು ಹಾಕುತ್ತಾರೆ.

Advertisement

ನೋಡುಗರಿಗೆ ಅದೊಂದು ಬಕರ ಆಟವೇ ಇರಬೇಕು ಅಂದುಕೊಂಡರೆ, ಅಲ್ಲಿ ನಡೆಯೋದೇ ಬೇರೆ. ಕುಡಿದ ಅಮಲಿನಲ್ಲೇ ಆ ಗೆಳೆಯರು ವ್ಯಾನ್‌ ಓಡಿಸಿಕೊಂಡು ಬರುವಾಗ, ಅಪಘಾತದಲ್ಲಿ ಅಸುನೀಗುತ್ತಾರೆ. ಅತ್ತ, ಜೀವಂತವಾಗಿ ಹೂತು ಹಾಕಿದವನ ಸ್ಥಿತಿ ಏನಾಗುತ್ತೆ, ಅದರ ಹಿಂದೆ ಇರುವ ರಹಸ್ಯವೇನು, ಅದಕ್ಕೆಲ್ಲಾ ಕಾರಣ ಯಾರು ಎಂಬ ಕುತೂಹಲವಿದ್ದರೆ, ಸಿನಿಮಾ ನೋಡಲ್ಲಡ್ಡಿಯಿಲ್ಲ.

ಮೊದಲರ್ಧ ಕೊಂಚ ಮಂದಗತಿಯಲ್ಲಿ ಸಾಗುವ ಸಿನಿಮಾ ದ್ವಿತಿಯಾರ್ಧ ವೇಗ ಪಡೆದುಕೊಳ್ಳುತ್ತೆ. ಎಲ್ಲೂ ಹೊಡಿ, ಬಡಿ ದೃಶ್ಯಗಳಿಲ್ಲದೆ, ಅಬ್ಬರವಿಲ್ಲದೆ ಅಲ್ಲಲ್ಲಿ ತಿರುವುಗಳೊಂದಿಗೆ ಸಾಗುತ್ತದೆ. ಕೆಲವು ಕಡೆ ಕಂಟಿನ್ಯುಟಿ ಸಮಸ್ಯೆ ಕಂಡರೆ, ಇನ್ನು ಕೆಲವೆಡೆ ಪಾತ್ರಗಳ ಮಾತುಗಳಲ್ಲೂ ಸಣ್ಣಪುಟ್ಟ ತಪ್ಪುಗಳಿವೆ. “5 ಅಡಿ 7 ಅಂಗುಲ’ ಶೀರ್ಷಿಕೆ ಯಾಕೆ ಅನ್ನೋರಿಗೆ ಸಿನಿಮಾ ನೋಡಿದಾಗ ಉತ್ತರ ಸಿಗಲಿದೆ.

ರಾಸಿಕುಮಾರ್‌ ಐದು ಅಡಿ ಆಳದಲ್ಲೇ ಒದ್ದಾಡುವ ಮೂಲಕ ಒಂದಷ್ಟು ಗಮನಸೆಳೆಯುವ ಪ್ರಯತ್ನ ಮಾಡಿದ್ದಾರೆ. ಅದಿತಿ ಸಿಕ್ಕ ಪಾತ್ರವನ್ನು ಚೆನ್ನಾಗಿ ನಿರ್ವಹಿದ್ದಾರಾದರೂ ಬಾಡಿ ಲಾಂಗ್ವೇಜ್‌ ಇನ್ನಷ್ಟು ಅರಿಯಬೇಕಿದೆ. ಭುವನ್‌ ವಿಲನ್‌ ಆಗಿ ತಕ್ಕಮಟ್ಟಿಗೆ ಸೈ ಎನಿಸಿಕೊಂಡಿದ್ದಾರೆ. ಅಮ್ಮನಾಗಿ ವೀಣಾಸುಂದರ್‌ ಇರುವಷ್ಟು ಸಮಯ ಇಷ್ಟವಾಗುತ್ತಾರೆ. ಇತರೆ ಕಲಾವಿದರು ತಮ್ಮ ಪಾತ್ರಗಳಿಗೆ ಮೋಸ ಮಾಡಿಲ್ಲ.

ಚಿತ್ರ: 5 ಅಡಿ 7 ಅಂಗುಲ
ನಿರ್ಮಾಣ, ನಿರ್ದೇಶನ: ನಂದಳಿಕೆ ನಿತ್ಯಾನಂದ ಪ್ರಭು
ತಾರಾಗಣ: ರಾಸಿಕುಮಾರ್‌, ಅದಿತಿ, ಭುವನ್‌, ಮಹೇಂದರ್‌ ಪ್ರಸಾದ್‌, ವೀಣಾ ಸುಂದರ್‌, ಚಕ್ರವರ್ತಿ ಸತ್ಯನಾಥ್‌, ಪವನ್‌ ಇತರರು.

* ವಿಭ

Advertisement

Udayavani is now on Telegram. Click here to join our channel and stay updated with the latest news.

Next