Advertisement

ನಿರ್ಜಲ ಉಪವಾಸದಲ್ಲಿ ಹನ್ನೆರಡು ಗಂಟೆಗಳ ಸಂಗೀತ ಮ್ಯಾರಥಾನ್‌!

12:39 AM Dec 17, 2019 | Sriram |

ಉಡುಪಿ: ಎಲ್ಲ ದಿನಗಳಲ್ಲೂ ಇವರಿಗೆ ಮಧ್ಯಾಹ್ನ ಮಾತ್ರ ಊಟ. ಆದರೆ ಪ್ರತಿ ಏಕಾದಶಿ ಯಂದು ಇವರದು ಕಟ್ಟುನಿಟ್ಟಿನ ಉಪವಾಸ, ಇದರ ನಡುವೆ ರಾತ್ರಿ ಆರು ಗಂಟೆಗಳ ನಿರಂತರ ಸಂಗೀತದ ಸುಧೆ ಹರಿಸುವ ಕಾಯಕ. ಆದರೆ ಜ. 6ರ ಏಕಾದಶಿಯಂದು ಇವರ ಪಾಲಿಗೆ ವಿಶೇಷ. ಅಂದು ರಾತ್ರಿ 7ರಿಂದ ಮರುದಿನ ಬೆಳಗ್ಗೆ 7 ಗಂಟೆವರೆಗೆ ನಿರಂತರ ಸಂಗೀತ ಸುಧೆ ಹರಿಸಿ ದಾಖಲೆ ಮಾಡಲು ಮೈಸೂರು ರಾಮಚಂದ್ರಾಚಾರ್‌ ಹೊರಟಿದ್ದಾರೆ.

Advertisement

ಶ್ರೀಕೃಷ್ಣ ಮಠದಲ್ಲಿ 2018ರ ಜ. 18ರಂದು ಪಲಿಮಾರು ಮಠದ ಪರ್ಯಾಯ ಆರಂಭವಾದ ಬಳಿಕ ಪ್ರತೀ ಏಕಾದಶಿಯಂದು ರಾತ್ರಿ ಈ ತೆರನಾಗಿ ಜಾಗರಣೆ ನಡೆಯುತ್ತಿದೆ. ಹೋದ ಬಾರಿ ವಿಜಯ ದಶಮಿ ಮರುದಿನ ಬರುವ ಏಕಾದಶಿಯಂದು ರಾತ್ರಿ ಒಟ್ಟು 10.30 ತಾಸು ಜಾಗರಣೆ ನಡೆಸಿದ್ದರು. ಜ. 6ರ ಏಕಾದಶಿ ಪಲಿಮಾರು ಪರ್ಯಾಯದ ಕೊನೆಯ ಏಕಾದಶಿಯಾದ ಕಾರಣ 12 ಗಂಟೆಗಳ ದಾಖಲೆ ಜಾಗರಣೆಗೆ ರಾಮಚಂದ್ರಾಚಾರ್‌ ಸಿದ್ಧರಾಗಿದ್ದಾರೆ.

ಜನವರಿ 6ರಂದು ನಡೆಯಲಿರುವ ಕಾರ್ಯಕ್ರಮ ಈ ಪರ್ಯಾಯ ಅವಧಿಯ 50ನೇ ಏಕಾದಶಿ ಜಾಗರಣೆ.ಇವರು ಹಾಡುವಾಗ ಆಯಾ ಹಾಡುಗಳಿಗೆ ತಕ್ಕ ಚಿತ್ರಪಟವನ್ನೂ ತೋರಿಸುತ್ತಾರೆ. ಇಂತಹ ಚಿತ್ರಗಳ ಸಂಗ್ರಹ ಸುಮಾರು 3 ಸಾವಿರ ಇದೆ. ಪುರಂದರ, ಕನಕ, ವಿಜಯ, ಮಹಿಪತಿ, ಪ್ರಸನ್ನವೆಂಕಟರೇ ಮೊದಲಾದ 15 ದಾಸವರೇಣ್ಯರ ಹಾಡುಗಳಿಗೆ ತಕ್ಕನಾದ ಮಹಾಭಾರತ, ಭಾಗವತಾದಿ ಗ್ರಂಥಗಳಲ್ಲಿ ಬರುವ ಚಿತ್ರಗಳನ್ನು ಇವರು ಉತ್ತರ ಭಾರತ, ಪುಣೆ ಮೊದಲಾದೆಡೆಗಳಿಂದ ತಂದಿರಿಸಿಕೊಂಡಿದ್ದಾರೆ. ಕೃಷ್ಣ ಕಥೆಗೆ ಸಂಬಂಧಿಸಿ 1,800, ಕೃಷ್ಣನ 800 ಚಿತ್ರಗಳಿವೆ. ಇವುಗಳನ್ನು ಲ್ಯಾಮಿನೇಶನ್‌ ಮಾಡಿಸಿ ಇರಿಸಿಕೊಂಡಿದ್ದಾರೆ.

130ಕ್ಕೂ ಹೆಚ್ಚು ಹಾಡು ಸಾಧ್ಯತೆ
12 ಗಂಟೆಗಳ ಮ್ಯಾರಥಾನ್‌ ಸಂಗೀತದಲ್ಲಿ 130ಕ್ಕೂಹೆಚ್ಚು ಹಾಡುಗಳನ್ನು ಹಾಡುವ ಸಾಧ್ಯತೆಗಳಿವೆ. ಹಿಂದೆ 10 ಗಂಟೆಗಳ ಹಾಡಿನಲ್ಲಿ 130 ಹಾಡುಗಳು, ಉಗಾಭೋಗಗಳನ್ನು (ಷಟ³ದಿ) ಹಾಡಿದ್ದರು. ಜ. 6ರಂದು ಇದನ್ನೂ ಮೀರಿಸುವ ಸಂಖ್ಯೆಯಾಗಲಿದೆ. ಪ್ರತಿ ಏಕಾದಶಿಗೆ 65ರಿಂದ 70 ಹಾಡುಗಳನ್ನು ಹಾಡುತ್ತಾರೆ. 10 ಗಂಟೆ, 5.30 ತಾಸುಗಳ ಹಾಡಿನ ಸಂದರ್ಭ ಆರಂಭ ಮತ್ತು ಕೊನೆಯ ಹಾಡಿನ ಧ್ವನಿ ಒಂದೇ ತೆರನಾಗಿತ್ತು.

ಭಿನ್ನ ಜಾಗರಣ ಸಂಗೀತ
ಒಂದೊಂದು ಬಾರಿ ಒಂದೊಂದು ರೀತಿಯ ಜಾಗರಣ ಸಂಗೀತಗಳಿರುತ್ತದೆ. ಉದಾಹರಣೆಗೆ, ಗೀತಾಜಯಂತಿಯಂದು ನಡೆದ ಜಾಗರಣೆಯಲ್ಲಿ ಕೇವಲ ಕೃಷ್ಣನಿಗೇ ಸಂಬಂಧಿಸಿದ ಹಾಡುಗಳಿದ್ದವು. ವಿಜಯದಾಸರ ಆರಾಧನೋತ್ಸವದಲ್ಲಿ ವಿಜಯ ದಾಸರ ಹಾಡುಗಳೇ ಇದ್ದವು. ಮುಕುಂದ, ಗೋವಿಂದ, ರಾಮ, ವಿಟuಲ, ನರಸಿಂಹ, ಶ್ರೀನಿವಾಸ ಹೀಗೆ ವಿವಿಧ ಅವತಾರಗಳಿಗೆ ಸಂಬಂಧಿಸಿದ ಹಾಡುಗಳನ್ನೇ ಹಾಡಿ ಜಾಗರಣೆ ಮಾಡುವುದಿದೆ. ಇವರಿಗೆ ಸುಮಾರು 1,700 ಹಾಡುಗಳು ಗೊತ್ತಿವೆ. ಇವುಗಳಲ್ಲಿ 700 ಹಾಡುಗಳನ್ನು ಪುಸ್ತಕ ನೋಡದೆ ಹಾಡುತ್ತಾರೆ.

Advertisement

ಜ. 6ರಂದು ಕೊನೆಯ ಏಕಾದಶಿ ಜಾಗರಣೆಯಾದ ಕಾರಣ ಜ. 7ರ ಬೆಳಗ್ಗೆ ಮಂಗಲೋತ್ಸವವನ್ನೂ ಪಲಿಮಾರು ಸ್ವಾಮೀಜಿಯವರು ಆಯೋಜಿಸಿದ್ದಾರೆ. ಇದಕ್ಕೂ ಮುನ್ನ ಇನ್ನೊಂದು ಏಕಾದಶಿ ಡಿ. 22ರಂದು ಬರಲಿದೆ. ಅಂದು ಐದೂವರೆ ಗಂಟೆಗಳ ಸಂಗೀತ ಜಾಗರಣೆ ನಡೆಯಲಿದೆ.

ಶುದ್ಧ ಉಪವಾಸದಲ್ಲಿದ್ದೂ ನಿರಂತರ ಭಜನ ಸಂಗೀತವನ್ನು ನಡೆಸಿಕೊಡುವಾಗ ಇದುವರೆಗೆ ಯಾವುದೇ ತೊಂದರೆಯಾಗಿಲ್ಲ. ಅದೇ ರೀತಿ ಜ. 6ರ ಏಕಾದಶಿಯಂದು ಸತತ 12 ಗಂಟೆಗಳ ಜಾಗರಣ ಸಂಗೀತ ಸೇವೆಯೂ ನಿರ್ವಿಘ್ನವಾಗಿ ನಡೆಯಲಿದೆ ಎಂಬ ವಿಶ್ವಾಸವಿದೆ.
– ಮೈಸೂರು ರಾಮಚಂದ್ರಾಚಾರ್‌

-ಮಟಪಾಡಿ ಕುಮಾರಸ್ವಾಮಿ

Advertisement

Udayavani is now on Telegram. Click here to join our channel and stay updated with the latest news.

Next