Advertisement
ಮಂಗಳವಾರ ನಗರದಲ್ಲಿ ಸುರಿದ ಭಾರೀ ಮಳೆಯಿಂದ ಉಂಟಾಗಿದ್ದ ಕೃತಕ ನೆರೆಗೆ ಅತಿಹೆಚ್ಚು ಹಾನಿಗೊಳಗಾಗಿರುವ ಪ್ರದೇಶಗಳ ಪೈಕಿ ಪಂಪ್‌ವೆಲ್, ಪಡೀಲ್, ಅಳಪೆ, ಗೋರಿಗುಡ್ಡ ಮತ್ತಿತರ ಜಾಗವೂ ಸೇರಿವೆ. ಈ ಭಾಗದಲ್ಲಿ ಜನರಿಗೆ ಏನೆಲ್ಲ ತೊಂದರೆಯಾಗಿದೆ? ಸದ್ಯ ಜಲಾವೃತಗೊಂಡಿದ್ದ ಮನೆಗಳ ಸ್ಥಿತಿ-ಗತಿ ಅವುಗಳಲ್ಲಿ ವಾಸ ಮಾಡುತ್ತಿರುವ ಜನರ ಪಾಡೇನು ಎಂಬಿತ್ಯಾದಿ ವಿಚಾರಗಳ ವಾಸ್ತವಾಂಶ ಅರಿಯುವ ಉದ್ದೇಶದಿಂದ ಬುಧವಾರ ‘ಸುದಿನ’ವು ಪಂಪ್‌ವೆಲ್ ಹಾಗೂ ಸುತ್ತಲಿನ ಪ್ರದೇಶಕ್ಕೆ ಹೋಗಿ ಅಲ್ಲಿನ ಸಮಸ್ಯೆಗಳ ಪ್ರತ್ಯಕ್ಷ ದರ್ಶನ ಮಾಡಿದಾಗ ಕಂಡುಬಂದ ಸನ್ನಿವೇಶವಿದು.
Related Articles
Advertisement
ಇಡೀ ದಿನ ಊಟವಿಲ್ಲ; ನಿದ್ದೆಯಿಲ್ಲಇಲ್ಲಿನ ಬಹುತೇಕ ಮನೆಗಳಲ್ಲಿಯೂ ಸುಮಾರು ಎರಡರಿಂದ ಎರಡೂವರೆ ಅಡಿಯಷ್ಟು ಎತ್ತರಕ್ಕೆ ನೀರು ನಿಂತಿತ್ತು. ಇಲ್ಲಿನ ಕೆಲವು ಮನೆಮಂದಿ ಮಂಗಳವಾರ ಮಧ್ಯಾಹ್ನದ ಬಳಿಕ ಊಟವೇ ಮಾಡಿಲ್ಲ. ಅಕ್ಕಿ, ಆಹಾರ ಸಾಮಗ್ರಿ, ತರಕಾರಿ ಎಲ್ಲವೂ ನೀರಲ್ಲಿ ಹೋಗಿದೆ. ಗ್ಯಾಸ್ ಸಿಲಿಂಡರ್ ಕೂಡ ನೀರಿನಲ್ಲಿ ಮುಳುಗಿತ್ತು ಎನ್ನುವಾಗ ಮನೆಮಂದಿಯ ಮುಖದಲ್ಲಿ ದುಃಖ ಮಡುಗಟ್ಟಿತ್ತು. ಬೆಂಗಳೂರಿನಿಂದ ರಾತ್ರಿಯೇ ಹೊರಟು ಬಂದೆ
ಇಲ್ಲಿನ ಮನೆಯೊಂದರ ಗೃಹಿಣಿಯೋರ್ವರು ಬೆಂಗಳೂರಿನಲ್ಲಿರುವ ಮಗಳ ಮನೆಗೆ ಕಾರ್ಯಕ್ರಮ ನಿಮಿತ್ತ ತೆರಳಿದ್ದ ಅವರು, ಮಳೆಯಿಂದ ಮನೆಗೆ ನೀರು ನುಗ್ಗಿರುವ ಕುರಿತು ಪಕ್ಕದ ಮನೆಯವರಿಂದ ತಿಳಿದುಕೊಂಡು ರಾತ್ರಿಯೇ ಹೊರಟು ಬಂದರು. ವಾಹನಕ್ಕೂ ಹಾನಿ
ದಿನೇಶ್ ಅವರ ಮನೆ ಮುಂದೆ ನಿಲ್ಲಿಸಲಾಗಿದ್ದ ಮೂರು ಕಾರು, ಮೂರು ಬೈಕ್ ಗಳಿಗೆ ಹಾಗೂ ಕಿಶೋರ್ ಅವರ ಮೂರು ದ್ವಿಚಕ್ರ ವಾಹನಗಳಿಗೆ ಮಳೆ ನೀರಿನಿಂದ ಹಾನಿಯಾಗಿದ್ದು, ಚಾಲನೆ ಮಾಡಲಾಗದ ಸ್ಥಿತಿಯಲ್ಲಿವೆ. ತೋಡಿನಿಂದ ಸಮಸ್ಯೆ ಸೃಷ್ಟಿ
ಪಂಪ್‌ವೆಲ್‌ನಲ್ಲಿ ಹರಿಯುತ್ತಿರುವ ತೋಡಿನಿಂದ ನೀರು ಓವರ್ ಫ್ಲೋ ಆಗಿ ಹರಿದಿರುವುದು, ಒಳ ಚರಂಡಿ ಅವ್ಯವಸ್ಥೆಗಳಿಂದಾಗಿ ಇಲ್ಲಿ ಕೃತಕ ನೆರೆ ಸೃಷ್ಟಿ ಯಾಗಿದೆ. ನಿರ್ಮಾಣ ಹಂತದ ಫ್ಲೈ ಓವರ್ ಕಾಮಗಾರಿಗಾಗಿ ರಸ್ತೆ ಅಗೆದಿರುವುದು ಕಾರಣ ಆಗಿರಬಹುದು ಎನ್ನುತ್ತಾರೆ ಇಲ್ಲಿನ ನಿವಾಸಿಗಳು. ‘ರಸ್ತೆ ವಿಸ್ತ ರಣೆ, ಕಟ್ಟಡ ನಿರ್ಮಾಣ ಕಾರ್ಯಗಳಿಗಾಗಿ ಈ ತೋಡನ್ನು ಕಿರಿದುಗೊಳಿಸುತ್ತಿದ್ದಾರೆ. ಈ ಬಾರಿ ತೋಡಿನ ಸ್ವಚ್ಛತೆಯನ್ನೂ ಮಾಡಿಲ್ಲ. ಅಧಿಕಾರಿಗಳು, ಜನಪ್ರತಿನಿಧಿಗಳು ವೀಕ್ಷಣೆಯ ನೆಪದಲ್ಲಿ ಬಂದು ಫೋಟೋ ತೆಗೆಸಿ ಕೊಂಡು ಹೋಗುತ್ತಾರೆ. ತೊಂದರೆ ತಪ್ಪಿದ್ದಲ್ಲ’ ಎಂಬುದು ಸ್ಥಳೀ ಯ ವ್ಯಾಪಾರಸ್ಥ ರವಿಕುಮಾರ್ ಆಕ್ರೋಶಿತ ನುಡಿ. ನೋವಿನಲ್ಲಿ ಮಾನವೀಯತೆ ಮೆರೆದ ಆಶಾ
ಮಜಲಕೋಡಿಯ ಆಶಾ ಅವರ ಮನೆಗೆ ಸುಮಾರು ಎರಡೂವರೆ ಅಡಿಯಷ್ಟು ಮಳೆ ನೀರು ನುಗ್ಗಿದೆ. ಆದರೆ ಮಂಗಳೂರು-ಬೆಂಗಳೂರು ಕೆಎಸ್ಸಾರ್ಟಿಸಿ ಬಸ್‌ನಲ್ಲಿ ಚಾಲಕರಾಗಿರುವ ಆಶಾರ ಪತಿ ಸೋಮನಾಥ ಅವರಿಗೆ ಮನೆಗೆ ನೀರು ನುಗ್ಗಿ ವಸ್ತುನಾಶ ಆಗಿರುವ ಬಗ್ಗೆ ತಿಳಿದದ್ದು ಬುಧವಾರ ಬೆಳಗ್ಗೆಯೇ! ‘ಪತಿ ರಾತ್ರಿ ಹೊತ್ತಿನಲ್ಲಿ ಬಸ್ ಚಾಲನೆಯಲ್ಲಿರುತ್ತಾರೆ. ಚಾಲಕ ಅಂದ ಮೇಲೆ ಬಸ್‌ನಲ್ಲಿರುವ ಸುಮಾರು ಎಪ್ಪತ್ತಕ್ಕೂ ಹೆಚ್ಚು ಮಂದಿಯ ಜೀವ ಅವರ ಕೈಯಲ್ಲಿರುತ್ತದೆ. ಈ ವಿಷಯ ಅವರಿಗೆ ತಿಳಿಸಿದರೆ ಆತಂಕಗೊಂಡಲ್ಲಿ ಅದು ಬಸ್ ಪ್ರಯಾಣಿಕರ ಮೇಲೂ ಪರಿಣಾಮ ಬೀರಬಹುದು ಎಂಬ ಮುನ್ನೆಚ್ಚರಿಕೆಯಿಂದ ನಾನು ಹೇಳಲಿಲ್ಲ. ಸ್ವಲ್ಪ ನೀರು ಬಂದಿದ್ದು, ಚಿಂತೆ ಮಾಡುವ ಅವಶ್ಯವಿಲ್ಲ ಎಂದಿದ್ದೆ’ ಎನ್ನುತ್ತಾರೆ ಗೃಹಿಣಿಯಾಗಿರುವ ಪತ್ನಿ ಆಶಾ. ಆ ಮೂಲಕ ತಮ್ಮ ಮನೆಯಲ್ಲದ ನಷ್ಟದ ನೋವಿನ ನಡುವೆಯೂ ಎಪ್ಪತ್ತು ಪ್ರಯಾಣಿಕರ ಜೀವದ ಬಗ್ಗೆ ಯೋಚಿಸಿದ ಆಶಾ ಅವರದು ಮಾದರಿ ನಡೆಯಾಗಿದೆ. ಯಾಕೆ ಸ್ವಚ್ಛ ಮಾಡುತ್ತೀರಿ!
ನೆರೆ ನೀರಿನಿಂದ ಹಾನಿಗೊಳಗಾದ ಕೆಲವು ಮನೆಗಳಿಗೆ ಈಗಾಗಲೇ ಈ ಭಾಗದ ಕಾರ್ಪೊರೇಟರ್ ಮತ್ತಿತರರು ಭೇಟಿ ನೀಡಿದ್ದಾರೆ. ಈ ಸಂದರ್ಭ ಹಾನಿಯ ಬಗ್ಗೆ ತಿಳಿದುಕೊಂಡಿದ್ದಾರೆ. ಕೆಲವು ಮನೆಗಳಲ್ಲಿ ಒಳ ಚರಂಡಿ ವ್ಯವಸ್ಥೆ, ತೋಡಿನ ನೀರು ಬರದಂತೆ ವ್ಯವಸ್ಥೆ ಮಾಡದ್ದರ ಬಗ್ಗೆ ಜನರೂ ಆಕ್ರೋಶಿತರಾಗಿದ್ದಾರೆ. ಈ ಸಂದರ್ಭದಲ್ಲಿ ಒಂದು ಮನೆಯಲ್ಲಿ ಮನೆ ಮಂದಿ ಅಂಗಳವನ್ನು ಸ್ವಚ್ಛ ಮಾಡುತ್ತಿರುವಾಗ ‘ಯಾಕೆ ಸ್ವಚ್ಛ ಮಾಡುತ್ತೀರಿ, ಇನ್ನೂ ಮಳೆ ಬರುತ್ತದೆ’ ಎಂದು ಜನಪ್ರತಿನಿಧಿಯೊಬ್ಬರು ಹೇಳಿದ್ದರ ಬಗ್ಗೆ ಮನೆ ಮಂದಿ ಅಸಮಾಧಾನ ವ್ಯಕ್ತಪಡಿಸಿದರು. ಧನ್ಯಾ ಬಾಳೆಕಜೆ