ಪಣಜಿ: ಕಡಲತೀರಗಳಲ್ಲಿ ಹೆಚ್ಚುತ್ತಿರುವ ಜನಸಂದಣಿ ಮತ್ತು ಆಮೆ ಸಂರಕ್ಷಣಾ ಪ್ರದೇಶದ ಮೇಲೆ ಪ್ರವಾಸಿಗರಿಂದ ಅತಿಕ್ರಮಣದಿಂದಾಗಿ ಗೋವಾದ ಬೀಚ್ಗಳಲ್ಲಿ ಸಮುದ್ರ ಆಮೆಗಳ ಸಂತಾನೋತ್ಪತ್ತಿ ಕಡಿಮೆಯಾಗಿದೆ. ಆದರೆ, ನ್ಯಾಯಾಲಯದ ಮಧ್ಯಪ್ರವೇಶ ಹಾಗೂ ಅರಣ್ಯ ಇಲಾಖೆ ಕೈಗೊಂಡಿರುವ ಭದ್ರತಾ ಕ್ರಮಗಳು ಇದೀಗ ಫಲ ನೀಡುತ್ತಿವೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ಈ ವರ್ಷ ದಕ್ಷಿಣ ಗೋವಾದಲ್ಲಿ ಆಮೆ ಮರಿಗಳ ಸಂಖ್ಯೆ ದ್ವಿಗುಣಗೊಂಡಿದೆ ಎಂದು ಅರಣ್ಯ ಇಲಾಖೆ ಮಾಹಿತಿ ನೀಡಿದೆ. ಪರಿಸರ ಪ್ರೇಮಿಗಳಿಗೆ ಇದೊಂದು ಸಂತಸದ ಸುದ್ದಿಯಾಗಿದೆ.
ದಕ್ಷಿಣ ಗೋವಾದ ವನ್ಯಜೀವಿ ಮತ್ತು ಪರಿಸರ ಪ್ರವಾಸೋದ್ಯಮ ಇಲಾಖೆಯ ಉಪ ಸಂರಕ್ಷಣಾಧಿಕಾರಿ ಅನಿಕೇತ್ ಗಾವ್ಕರ್ ಅವರು ನೀಡಿರುವ ಮಾಹಿತಿಯ ಅನುಸಾರ- ಆಮೆಗಳು ಮುಖ್ಯವಾಗಿ ದಕ್ಷಿಣ ಗೋವಾದ ಅಗೊಂದಾ ಮತ್ತು ಗಲ್ಜಿಬಾಗ್ ಕರಾವಳಿಯಲ್ಲಿ ಮೊಟ್ಟೆಗಳನ್ನು ಇಡುತ್ತವೆ. ಆದರೆ, ಈ ಬಾರಿ ಈ ಎರಡು ಸ್ಥಳಗಳ ಜತೆಗೆ ತಲ್ಪಾನ್, ಬೇತುಲ್, ಕೆಲ್ಶಿ ಮತ್ತು ಉಟೋರ್ಡಾ ಕಡಲ ತೀರದಲ್ಲಿಯೂ ಆಮೆಗಳು ಮೊಟ್ಟೆ ಇಟ್ಟಿವೆ. ಕಳೆದ ವರ್ಷ ಸಮುದ್ರ ಆಮೆಗಳು 41 ಸ್ಥಳಗಳಲ್ಲಿ ಮೊಟ್ಟೆ ಇಟ್ಟಿದ್ದವು. ಈ ವರ್ಷ, ಅಂಕಿ 92 ತಲುಪಿದೆ, ಇದು ಆಮೆ ಸಂತಾನೋತ್ಪತ್ತಿಯ ವಿಷಯದಲ್ಲಿ ಸಕಾರಾತ್ಮಕ ಬೆಳವಣಿಗೆಯಾಗಿದೆ ಎಂದರು.
ಇದೀಗ ಅರಣ್ಯ ಇಲಾಖೆ ತನ್ನದೇ ಆದ ಕಡಲ ಇಲಾಖೆಯನ್ನು ಸ್ಥಾಪಿಸಿದ್ದು, ಈ ಇಲಾಖೆಯ ಸಿಬ್ಬಂದಿ ಆಮೆ ಧಾಮದಲ್ಲಿ ಗಸ್ತು ತಿರುಗುತ್ತಿದ್ದಾರೆ ಎಂದು ಗಾಂವ್ಕರ್ ತಿಳಿಸಿದರು. ಇದು ಉತ್ತಮ ಪರಿಣಾಮ ಬೀರಿದ್ದು, ನ್ಯಾಯಾಲಯದ ಆದೇಶದ ನಂತರ ಈ ಭಾಗದಲ್ಲಿ ಜನಸಂದಣಿ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿದೆ. ಆಗೊಂದ ಬೀಚ್ನಲ್ಲಿ ಹೆಚ್ಚು ಆಮೆಗಳು ಮೊಟ್ಟೆ ಇಡುವುದು ಕಂಡುಬಂದಿದೆ. ಗಲ್ಜಿಬಾಗ್ ಕರಾವಳಿಯಲ್ಲಿ ತುಲನಾತ್ಮಕವಾಗಿ ಶಾಂತವಾಗಿದ್ದರೂ, ಆಮೆಗಳು ಕೆಲ ಮೊಟ್ಟೆಗಳನ್ನು ಇಟ್ಟಿವೆ. ಅರಣ್ಯ ಇಲಾಖೆಯು ಕಳೆದ ಕೆಲವು ವರ್ಷಗಳ ಅಂಕಿಅಂಶಗಳನ್ನು ಸಿದ್ಧಪಡಿಸುತ್ತದೆ ಮತ್ತು ಈ ಬದಲಾವಣೆಗಳಿಗೆ ಕಾರಣಗಳನ್ನು ಅಧ್ಯಯನ ಮಾಡುತ್ತದೆ ಎಂದು ಪರಿಸರ ಪ್ರವಾಸೋದ್ಯಮ ಇಲಾಖೆಯ ಉಪ ಸಂರಕ್ಷಣಾಧಿಕಾರಿ ಅನಿಕೇತ್ ಗಾವ್ಕರ್ ಮಾಹಿತಿ ನೀಡಿದರು.
ದಕ್ಷಿಣ ಗೋವಾದಲ್ಲಿ ಕಳೆದ ವರ್ಷ ಆಮೆಗಳು 4,230 ಮೊಟ್ಟೆಗಳನ್ನು ಇಟ್ಟಿದ್ದವು ಇವುಗಳಿಂದ 3,737 ಮರಿಗಳು ಜನಿಸಿದ್ದವು. ಈ ವರ್ಷ ಇದುವರೆಗೆ ಆಮೆಗಳು 9,355 ಮೊಟ್ಟೆಗಳನ್ನು ಇಟ್ಟಿವೆ. ಇವುಗಳಲ್ಲಿ 6,868 ಮೊಟ್ಟೆಯೊಡೆದಿವೆ.
Related Articles
ಉತ್ತರ ಗೋವಾದ ಉಪ ಸಂರಕ್ಷಣಾಧಿಕಾರಿ ಆನಂದ್ ಜಾಧವ್ ಮಾಹಿತಿ ನೀಡಿ- ಉತ್ತರ ಗೋವಾದಲ್ಲಿಯೂ ಆಮೆಗಳ ಸಂಖ್ಯೆ ಹೆಚ್ಚಾಗಿದ್ದು, ಈ ಬಾರಿ ಕಂಡೋಲಿಯಂತಹ ಜನನಿಬಿಡ ಬೀಚ್ಗಳಲ್ಲಿ ಆಮೆಗಳು ಮೊಟ್ಟೆ ಇಟ್ಟಿವೆ. ಆಮೆಗಳ ಸಂತಾನಾಭಿವೃದ್ಧಿಗೆ ವಾತಾವರಣವೂ ಅನುಕೂಲಕರವಾಗಿತ್ತು. ಈ ಬಾರಿ ಮಳೆ ಬಾರದ ಕಾರಣ ಹೆಚ್ಚಿನ ಸಂಖ್ಯೆಯಲ್ಲಿ ಆಮೆಗಳು ದಡಕ್ಕೆ ಬಂದು ಹೆಚ್ಚಿನ ಸಂಖ್ಯೆಯಲ್ಲಿ ಮೊಟ್ಟೆ ಇಟ್ಟಿವೆ ಎಂಬ ಮಾಹಿತಿ ನೀಡಿದರು.