Advertisement

ಆಮೆಗಳನ್ನು ಸುಟ್ಟುತಿಂದು ತೇಗಿದ ಭಕ್ಷಕರು

03:52 PM Aug 22, 2021 | Team Udayavani |

ಕುಷ್ಟಗಿ: ಆಮೆಗಳನ್ನು ಅಕ್ರಮವಾಗಿ ಹಿಡಿದು ಸುಟ್ಟು ತಿಂದಿರುವ ಘಟನೆ ಕೊಪ್ಪಳ ಜಿಲ್ಲೆ ಕುಷ್ಟಗಿ ಪಟ್ಟಣದ ಹೊರವಲಯದಲ್ಲಿ ನಡೆದಿದೆ.

Advertisement

ಪಟ್ಟಣದ ಕೆಐಡಿಬಿಯ ಗ್ರಾನೈಟ್‌ ಪಾಲೀಶ್‌ ಕಾರ್ಖಾನೆ ಬಳಿ, ಸಂತ ಶಿಶುನಾಳ ಶರೀಫ್‌ ಬಡಾವಣೆ ಹತ್ತಿರದ ನಿರ್ಜನ ಪ್ರದೇಶದಲ್ಲಿ ಸುಮಾರು ಹತ್ತಕ್ಕೂ ಹೆಚ್ಚು ಆಮೆಗಳನ್ನು ಸುಟ್ಟಿರುವುದು ಬೆಳಕಿಗೆ ಬಂದಿದೆ. ಸ್ಥಳದಲ್ಲಿ ಆಮೆಗಳ ಸುಟ್ಟ ಚಿಪ್ಪುಗಳು ಬಿದ್ದಿದ್ದು ಅವುಗಳನ್ನು ಹಿಡಿದು ಮಾಂಸವನ್ನು ಸುಟ್ಟು ನಂತರ ತಿನ್ನಲಾಗಿದೆ.

ಈ ಪ್ರದೇಶದಲ್ಲಿ ಸಣ್ಣ ನಾಲೆಯೊಂದು ಇದ್ದು, ಮಳೆಗಾಲದಲ್ಲಿ ಮಾತ್ರ ಇಲ್ಲಿ ನೀರು ಹರಿಯುತ್ತದೆ. ಈ ವೇಳೆ ಕಾಣಿಸಿಕೊಂಡ ಆಮೆಗಳನ್ನು ಹಿಡಿಯಲಾಗಿದೆ. ಆಮೆಯ ಚಿಪ್ಪುಗಳ ಅವಶೇಷಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ನಾಲ್ಕೈದು ದೊಡ್ಡ ಆಮೆ, ಹಾಗೂ ಚಿಕ್ಕ ಆಮೆಗಳ ಚಿಪ್ಪು ದೊರಕಿದ್ದು ಅವೂ ಸಹ ಸುಟ್ಟು ಕರಕಲಾಗಿವೆ.

ಮಳೆಗಾಲದ ಸಂದರ್ಭದಲ್ಲಿ ಹಳ್ಳ ಹಾಗೂ ಕೆರೆಗಳಲ್ಲಿ ಹೊಸ ನೀರು ಬಂದಾಗ ಆಮೆಗಳು ಆಹಾರ ಅರಸಿ ಬಯಲಿಗೆ ಬರುತ್ತವೆ. ಇದೇ ಸಂದರ್ಭದಲ್ಲಿ ಮೀನು ಹಿಡಿಯುವವರು, ಆಮೆಗಳನ್ನು ಹಿಡಿಯುತ್ತಾರೆ. ಆಮೆಗಳಲ್ಲಿ ಹೆಚ್ಚು ಪ್ರೊಟೀನ್‌ ಕಾರಣದಿಂದಾಗಿ ಅಕ್ರಮವಾಗಿ ಆಮೆ ಹಿಡಿದು ತಿನ್ನುತ್ತಿದ್ದರೂ ಅರಣ್ಯ ಇಲಾಖೆ ಎಚ್ಚೆತ್ತುಕೊಂಡಿಲ್ಲ. ಕಳೆದ ಮೇ ತಿಂಗಳಿನಲ್ಲಿ ಮುದೇನೂರು ತೋಳದ ಹಳ್ಳದಲ್ಲಿ ಇಂತಹ ಪ್ರಕರಣ ಬೆಳಕಿಗೆ ಬಂದಿತ್ತು. ಈ ಪ್ರಕರಣದ ಬೆನ್ನಲ್ಲೇ ಕುಷ್ಟಗಿ ಪಟ್ಟಣದ ಹೊರವಲಯದಲ್ಲಿ ಕಂಡು ಬಂದಿದ್ದು, ಆಮೆಗಳಿಗೆ ರಕ್ಷಣೆ ಇಲ್ಲದಂತಾಗಿದೆ. ಆಮೆಗಳ ರಕ್ಷಣೆಗೆ ಅರಣ್ಯ ಇಲಾಖೆ ಪ್ರತಿಬಂಧಕ ಕಾನೂನು ಜಾರಿಯಲ್ಲಿದ್ದರೂ, ಆಮೆಗಳ ರಕ್ಷಣೆ ನಿಜಕ್ಕೂ ಅರಣ್ಯ ಇಲಾಖೆಗೆ ಸವಾಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next