ಥಾಣೆ: ವಿದ್ಯೆ ಕಲಿಯಲು ವಯಸ್ಸಿನ ಮಿತಿಯಿಲ್ಲ ಎಂಬುದು ಮತ್ತೂಮ್ಮೆ ಸಾಬೀತಾಗಿದೆ. ವಿದ್ಯೆ ಕಲಿಯುವುದು ಜೀವನೋಪಾಯಕ್ಕಾಗಿ ಅಲ್ಲ, ಜ್ಞಾನಕ್ಕಾಗಿ ಎಂಬುದಕ್ಕೆ ಮಹಾರಾಷ್ಟ್ರದ ಥಾಣೆ ಸಮೀಪದ ಫಂಗಣೆ ಗ್ರಾಮದ ಈ ವೃದ್ಧೆಯರು ಜ್ವಲಂತ ಸಾಕ್ಷಿಯಾಗಿದ್ದಾರೆ.
ಗ್ರಾಮದಲ್ಲಿರುವ “ಅಜಿಬೈಂಚಿ ಶಾಲಾ’ ಎಂಬ ಹೆಸರಿನ ಈ ವೃದ್ಧೆಯರ ಪ್ರಾಥಮಿಕ ಶಾಲೆಯನ್ನು ಆರಂಭಿಸಿದ್ದು ಇಲ್ಲಿಯ ನಿವಾಸಿ ಯೋಗೇಂದ್ರ ಬಂಗರ್ (45) ಎಂಬುವರು. ಕೃಷಿಯೇ ಪ್ರಧಾನ ಕಸುಬಾಗಿರುವ ಇಲ್ಲಿನ ಹಲವು ಕುಟುಂಬಗಳಲ್ಲಿ ವೃದ್ಧೆಯರು ಇದ್ದು, ಅವರೆಲ್ಲ ಅವಿದ್ಯಾವಂತರು ಎಂಬುದನ್ನು ಅರಿತ ಯೋಗೇಂದ್ರ ಬಂಗರ್ ಅವರಿಗೆ ಪ್ರಾಥಮಿಕ ಶಿಕ್ಷಣ ನೀಡುವ ಶಾಲೆಯನ್ನು ಆರಂಭಿಸಿಯೇ ಬಿಟ್ಟರು. ಇವರ ಉತ್ಸಾಹಕ್ಕೆ ವೃದ್ಧೆಯರು ಹಾಗೂ ಕುಟುಂಬದವರೂ ಒಮ್ಮತ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಶಾಲೆ ಆಂಭವಾಗಿದೆ. ಇಲ್ಲೀಗ 60 ರಿಂದ 90 ವಯಸ್ಸಿನ ಸುಮಾರು 30 ವೃದ್ಧೆಯರು ಪ್ರತಿ ದಿನ ಬೆಳಗ್ಗೆ ಶಿಸ್ತಿನಿಂದ ಶಾಲೆಗೆ ಬರುತ್ತಾರೆ.
ಈ ವೃದ್ಧ ವಿದ್ಯಾರ್ಥಿನಿಯರೆಲ್ಲ ಸಮವಸ್ತ್ರವಾಗಿ ಕೆಂಪು ಬಣ್ಣದ ಸೀರೆಯನ್ನು ಧರಿಸುತ್ತಾರೆ. ಶಾಲೆಯಲ್ಲಿ ಅವರಿಗೆ ಮೂಲ ಗಣಿತ, ಅಕ್ಷರ ಮಾಲೆಗಳು ಸೇರಿದಂತೆ ಎಲ್ಲ ಪ್ರಾಥಮಿಕ ಶಿಕ್ಷಣ ಹಾಗೂ ಅವುಗಳ ಸರಿಯಾದ ಉಚ್ಛಾರ ಕಲಿಸಲಾಗುತ್ತದೆ. ಇವನ್ನು ಮಕ್ಕಳಂತೆಯೇ ಕಪ್ಪು ಬಳಪದಲ್ಲಿ ಸುಣ್ಣದ ಕಡ್ಡಿಯನ್ನು ಹಿಡಿದು ತಿದ್ದುತ್ತಾರೆ. ಜೊತೆಗೆ ಮರಾಠಿ ಪದ್ಯಗಳು ಹಾಗೂ ಶ್ಲೋಕಗಳನ್ನೂ ಇಲ್ಲಿ ಕಲಿಸಲಾಗುತ್ತದೆ.
ಈ ಶಿಕ್ಷಣವನ್ನು ಅಜ್ಜಿಯರೆಲ್ಲ ಮುಜುಗರ ತೊರೆದು, ಉತ್ಸಾಹದಿಂದಲೇ ಕಲಿಯುತ್ತಿದ್ದಾರೆ. ಈ ಮೂಲಕ ಇತರ ವೃದ್ಧರಿಗೂ ಮಾದರಿಯಾಗಿದ್ದಾರೆ.
ಇಲ್ಲಿ ಶಿಕ್ಷಣ ಪಡೆಯುತ್ತಿರುವ ಕಾಂತಾ ಎಂಬ ವೃದ್ಧೆ ಈಗ ಮರಾಠಿಯಲ್ಲಿ ಬರೆಯಬಲ್ಲರು ಹಾಗೂ ಓದಬಲ್ಲರು. ಶಿಕ್ಷಣ ಪಡೆಯುತ್ತಿರುವ ಕಾರಣ ತಮಗೀಗ ಸ್ವತಂತ್ರಗೊಂಡ ಭಾವನೆ ಬರುತ್ತಿದೆ ಎಂದು ಹೇಳಿಕೊಂಡಿದ್ದಾರೆ. “ನನಗೀಗ ಶಿಕ್ಷಣದ ಮಹತ್ವ ಅರ್ಥವಾಗಿದೆ. ಇದರಿಂದ ಆತ್ಮಗೌರವ ಹೆಚ್ಚುತ್ತದೆ. ಮೊದಲು ನನ್ನ ಬ್ಯಾಂಕ್ ದಾಖಲಾತಿಗಳಲ್ಲಿ ಹೆಬ್ಬೆಟ್ಟು ಒತ್ತುತ್ತಿದ್ದೆ. ಈಗ ಸಹಿ ಮಾಡುತ್ತಿದ್ದೇನೆ. ಇದಕ್ಕಾಗಿ ಇತರರ ಸಹಾಯವೂ ಅಗತ್ಯವಿಲ್ಲ’ ಎಂದು ಹೇಳಿಕೊಂಡಿದ್ದಾರೆ. ಇವರ ಮೊಮ್ಮಗಳೂ ಈ ಶಾಲೆಯಲ್ಲಿ ಕಲಿಸುತ್ತಿದ್ದಾರೆ.