Advertisement

ಹೆಣ್ಣಿನ ಆಂತರ್ಯವನ್ನು ಧ್ವನಿಸುವ ‘ತೇಜೋ ತುಂಗಭದ್ರಾ’

03:17 PM Jul 11, 2021 | Team Udayavani |

ಐತಿಹಾಸಿಕ ವಿಷಯದೆಳೆಯಲ್ಲಿ ಜನಸಾಮಾನ್ಯರ ಬದುಕನ್ನು ಹೆಣೆದ ಬಹುತೇಕ ಕಾದಂಬರಿಗಳು ಕನ್ನಡದಲ್ಲಿವೆ. ಕೃಷ್ಣಮೂರ್ತಿ ಹನೂರರ ’ಅಜ್ಞಾತನೊಬ್ಬನ ಆತ್ಮಚರಿತ್ರೆ’ ಯನ್ನು ಮೊದಲ ಬಾರಿಗೆ ಓದಿದಾಗ ಸಾಮಾನ್ಯ ಸೈನಿಕನೊಬ್ಬನ ಒಳಗನ್ನು ದರ್ಶಿಸುವ ಮುಖೇನ ಇತಿಹಾಸಕ್ಕೆ ಹೊಸ ದೃಷ್ಟಿಯನ್ನು ಬೀರಬಹುದೆಂಬ ಸಾಧ್ಯತೆಗಳನ್ನು ತೆರೆದಿಟ್ಟಿತು. ಜಾಗತಿಕ ಮಟ್ಟದಲ್ಲಿ ದಾಖಲಿತವಾದ ಪ್ರಮುಖ ಐತಿಹಾಸಿಕ ಅಂಶಗಳಲ್ಲಿ ಸಾಮಾನ್ಯರ ಕೊಡುಗೆ ಅಪಾರ ಎನ್ನುವುದು ತಿಳಿದ ಸತ್ಯ. ಘಟಿಸಿದ ಚರಿತ್ರೆಗಳೆಲ್ಲವೂ ವಾಸ್ತವದ ನೆಲೆಗಟ್ಟಿನಲ್ಲಿ ನಿರಂತರ ಹುಡುಕಾಟದಿಂದ, ತರ್ಕ ಚರ್ಚೆಗಳೊಂದಿಗೆ ಬೆರೆಯದೇ ಆಗಿ ಧ್ವನಿಸುತ್ತದೆ. ’ತೇಜೋ ತುಂಗಭದ್ರಾ’ ಓದಿದ ಬಳಿಕ ಅಂತಹದ್ದೇ ಭಾವ.

Advertisement

ಕಾದಂಬರಿ ಎನ್ನುವ ಹೊಸ ಸಾಹಿತ್ಯ ಪ್ರಕಾರವನ್ನು ಬೆಳೆಸಿದ ಸಂಸ್ಕೃತದ ಬಾಣನ ‘ಕಾದಂಬರಿ’ಯು ‘ಕರ್ಣಾಟ ಕಾದಂಬರಿ’ಯಾಗಿ ಒಂದನೇ ನಾಗವರ್ಮನು ಕನ್ನಡದಲ್ಲಿ ಬಂದಿತೆನ್ನುವುದು ಗೊತ್ತಿರುವ ವಿಷಯ. ಗುಲ್ವಾಡಿ ವೆಂಕಟರಾಯರ ’ಇಂದಿರಾಬಾಯಿ’, ಕನ್ನಡದ ಮೊದಲ ಸ್ವತಂತ್ರ ಸಾಮಾಜಿಕ ಕಾದಂಬರಿಯಾದರೆ, ಕೆರೂರು ವಾಸುದೇವಾಚಾರ್ಯರ ’ಇಂದಿರಾ’ ಐತಿಹಾಸಿಕ ಮಹತ್ವವನ್ನು ಪಡೆದ ಕಾದಂಬರಿ. ತದನಂತರದ ಸಾಹಿತ್ಯದ ವಿವಿಧ ಕಾಲಘಟ್ಟದಲ್ಲಿ ಹೆಣ್ಣನ್ನು ಪ್ರಧಾನ ಪಾತ್ರಧಾರಿಯಾಗಿಸಿದ ಕಾದಂಬರಿಗಳು ಕನ್ನಡದಲ್ಲಿ ಬಹಳಷ್ಟು ಬಂತು. ಮುಖ್ಯವಾಗಿ ಈ ಕಾದಂಬರಿಯಲ್ಲಿ ಮುನ್ನಲೆಗೆ ತಂದ ಹಲವು ವಿಷಯಗಳ ನಡುವೆ, ಸೂಕ್ಷ್ಮ ಮನಸ್ಸಿನ ಹೆಣ್ಣಿನ ಸಂವೇದನೆ ಕಾದಂಬರಿಯಲ್ಲಿ ಅಡಕವಾಗಿದೆ ಎನ್ನುವುದು ನನ್ನ ಅಭಿಪ್ರಾಯ.

ಇದನ್ನೂ ಓದಿ : ‘ಒಂದು ಬಾಗಿಲು ಮತ್ತು ಮೂರು ಚಿಲ್ಲರೆ ವರ್ಷಗಳು’ ಹೆಣ್ಣೆದೆಯ ಅಂತರಂಗ

ಕಾದಂಬರಿಯುದ್ದಕ್ಕೂ ವಾಸ್ತವ ಮೌಲ್ಯಗಳನ್ನು ಪ್ರತಿಪಾದಿಸಿರುವ ಸ್ತ್ರೀ ಪಾತ್ರಗಳನ್ನು ಲೇಖಕರು ಅಚ್ಚುಕಟ್ಟಾಗಿ ಕಟ್ಟಿಕೊಟ್ಟಿದ್ದಾರೆ. ಲಿಸ್ಬನ್ ನಗರದ ಜೀವಸೆಲೆಯಂತಿರುವ ’ತೇಜೋ’ ಮತ್ತು ವಿಜಯನಗರ ಸಾಮ್ರಾಜ್ಯಕ್ಕೆ ಜೀವದಾಯಿನಿಯಾದ ’ತುಂಗಭದ್ರಾ’, ಎರಡೂ ನದಿಗಳು ಸ್ಥಿತಪ್ರಜ್ಞತೆಯನ್ನು ಸಂಕೇತಿಸುತ್ತದೆ. ನದಿಗಿರುವ ಮತ್ತು ಇರಬೇಕಾದ ಸಹಜ ಪರಿಮಳವನ್ನು ಮಸಾಲೆ ಪದಾರ್ಥಗಳ ಗಾಢ ವಾಸನೆಯಿಂದ ಮಾಸಿಕೊಂಡಿದ್ದರೂ ತನ್ನ ರೌದ್ರ ರೂಪವನ್ನು ಪ್ರದರ್ಶಿಸದೆ, ನಿತ್ಯಹರಿವ ಗುಣ ಆಕೆಗಿದೆ. ಯಹೂದಿ ಮತ್ತು ಕ್ರೈಸ್ತ ಧರ್ಮೀಯರ ತೀವ್ರ ಸಂಘರ್ಷದಲ್ಲಿ ಹರಿದ ರಕ್ತದ ಹರಿವನ್ನು ಮೈಗಂಟಿಸಿಕೊಂಡಿದ್ದರೂ ಸೌಮ್ಯಳು. ಬೆಲ್ಲಾ ಗೇಬ್ರಿಯಲ್ ರ ಮುಗ್ಧ ಪ್ರೀತಿಯನ್ನು ಸ್ವತಃ ಬಲ್ಲವಳು. ತುಂಗಭದ್ರಾಳೂ ಅಷ್ಟೆ. ವಿಜಯನಗರ ಬಹಮನಿ ಸಾಮ್ರಾಜ್ಯಗಳು ನಡೆಸಿದ ಧಾರ್ಮಿಕ ತಿಕ್ಕಾಟಗಳ ಪ್ರತ್ಯಕ್ಷದರ್ಶಿ. ಹಂಪಮ್ಮ ಅಮ್ಮದ ಕಣ್ಣರ ಸ್ನೇಹದೊಲವಿನ ತಾಣ ಆಕೆಯ ತೀರ. ಸಾಮ್ರಾಜ್ಯ ಸೃಷ್ಟಿಸುವ ಮನುಷ್ಯನ ಲಾಲಸೆ, ಬದುಕನ್ನು ಉದ್ದೀಪನಗೊಳಿಸುವ ಧರ್ಮಗಳ ಏಳಿಗೆ  ಅವನತಿಯ ಸ್ಥಿತ್ಯಂತರಗಳ ನಡುವೆಯೇ ನಿತ್ಯ ನಿರಂತರತೆಯನ್ನು ಒಂದಿನಿತು ಕದಲಿಸಿಕೊಳ್ಳದ ಗಟ್ಟಿಗಿತ್ತಿಯರಿವರು.

ಧಾರ್ಮಿಕ ಕುರುಡುತನ ಅಥವಾ ಅಪನಂಬಿಕೆಯ ಸಾದೃಶ್ಯರೂಪದ ಪಾತ್ರವಾಗಿ ಸ್ಪೇನಿನ ರಾಣಿ ಇಸಾಬೆಲ್ಲಾ ಕಾಣಿಸಿಕೊಳ್ಳುತ್ತಾಳೆ. ಯಹೂದಿಗಳನ್ನು ತನ್ನ ದೇಶದಿಂದ ತೊಲಗಿಸಿದ್ದಕ್ಕೆ, ದೇಶದ ಆರ್ಥಿಕತೆಗೆ ಬೀರಿದ ನೇರ ಪರಿಣಾಮವನ್ನು ಇಸಾಬೆಲ್ಲಾ ಎದುರಿಸಿದ ಕುರಿತು ಕಾದಂಬರಿಕಾರರು ಚರ್ಚಿಸುತ್ತಾರೆ. “ಧರ್ಮವನ್ನು ಮುನ್ನಲೆಗೆ ತಂದುಕೊಂಡು ಇಸಾಬೆಲ್ಲಾ ಅರ್ಥವನ್ನು ಕಳೆದುಕೊಂಡಿದ್ದಳು…” ಎಂಬ ಸಾಲು ಇಂದಿನ ಪರಿಸ್ಥಿತಿಯನ್ನು ಹೇಗೆ ಬಿಂಬಿಸುತ್ತವೆ ನೋಡಿ! ಈ ಧಾರ್ಮಿಕ ಶ್ರೇಷ್ಟತೆಯ ವ್ಯಸನದಿಂದ ಮುಕ್ತಳಾಗದೆ ನಂತರದಲ್ಲಿ ಧರ್ಮದ ಮೂಲಕವೇ ಪ್ರತಿಕಾರವನ್ನು ತೀರಿಸಿಕೊಂಡ ಬಗೆ ಕಾದಂಬರಿಯಲ್ಲಿ ವ್ಯಕ್ತವಾಗಿದೆ.

Advertisement

ಇನ್ನು ಅಗ್ವೇದಳ ಪಾತ್ರ ಅಪೂರ್ವವಾದದ್ದು. ಒಂದುಮಟ್ಟಿಗೆ ದೈನ್ಯತೆ ಎನಿಸಿದರೂ ಅವಳ ಬುದ್ಧಿಚಕ್ಷು ಬಹಳ ತೀಕ್ಷ್ಣವಾದದ್ದು ಎನ್ನುವ ಅರಿವು ಕ್ರಮೇಣ ದಕ್ಕಿತು. “ವೇಶ್ಯೆಯರನ್ನು ಯಾವ ಧರ್ಮ ಪುರಸ್ಕರಿಸುತ್ತದೆ ? …. ಜಗತ್ತಿನ ಯಾವ ಧರ್ಮವೂ ನಮ್ಮನ್ನು ವಿನಾಶಗೊಳಿಸಲು ಸಾಧ್ಯವಿಲ್ಲ, ವಿರೋಧಿಸಬಹುದಷ್ಟೇ!”  ಪ್ರಾಚೀನತೆಯ ದೃಷ್ಟಿಯಿಂದಲೂ ವೈರುಧ್ಯಗಳನ್ನೇ ಸಾಧಿಸಿಕೊಂಡುಬಂದ ವೇಶ್ಯಾವೃತ್ತಿ ಮತ್ತು ಧರ್ಮಗಳನ್ನು ಮುಖಾಮುಖಿಯಾಗಿಸುತ್ತಲೇ ಕಾದಂಬರಿಕಾರರು ಸುದೀರ್ಘವಾಗಬಹುದಾಗಿದ್ದ ಚರ್ಚೆಯನ್ನು ಸರಳೀಕರಣಗೊಳಿಸಿ ಸ್ಪಷ್ಟವಾಗಿಸುತ್ತಾರೆ. ಇದಕ್ಕೆ ಪೂರಕವಾಗುವ ಪಾತ್ರವೆಂದರೆ ಮಮ್ತಾಜ್ ಳದ್ದು. ಯುದ್ಧ ಗೆದ್ದವರ ಕೈಗೆ ಸಿಕ್ಕ ಹೆಣ್ಣು ಮಕ್ಕಳ ಒಡಲುರಿಯ ನೋವು, ಹಿಂಸೆಯನ್ನು ಪ್ರತಿಬಿಂಬಿಸುವಾಕೆ. ಕಾಮವನ್ನು ಹಸಿವಾಗಿ ನುಂಗುವ ವಿಕೃತಿ ಒಂದೆಡೆಯಾದರೇ, ಹಸಿವಿನ ಶಮನಕ್ಕೆ ಸಿಕ್ಕ ಆಹಾರ ಸೇವನೆ ಅದು ಮತ್ತೊಂದು ಮಗ್ಗಲಿನ ದಯನೀಯ ಸ್ಥಿತಿ. ಆದರೊಂದು, ಬದುಕಬೇಕೆನ್ನುವ ಆಶಾಭಾವ ಇವೆಲ್ಲವನ್ನು ನಗಣ್ಯವಾಗಿಸುತ್ತದೆ ಎನ್ನುವ ಅಂಶ ಮಮ್ತಾಜ್ ಪಾತ್ರದಲ್ಲಿದೆ ಎನ್ನಿಸಿತು. ತನ್ನ ಬದುಕಿಸಿದವರ ಬದುಕನ್ನು ಹೆಣ್ಣು ಮರಳಿ ದಕ್ಕಿಸಿಕೊಡುತ್ತಾಳೆ ಎನ್ನುವುದಕ್ಕೆ ಮಾನವೀಯ ಮೌಲ್ಯಗಳನ್ನು ಇಟ್ಟುಕೊಂಡ ಇವಳ ಬದುಕೇ ದೃಷ್ಟಾಂತ.

ಇದನ್ನೂ ಓದಿ : ಸಾವಿಗೆದುರಾಗಿ ನಿಂತ ‘ಮರುಭೂಮಿಯ ಹೂ’ವಿನ ಘಮ…!

ಹಂಪಮ್ಮನಿಗೆ ತಾಯ್ತನದ ಒಲವನ್ನು ಸ್ನೇಹದ ಮುಖೇನ ಕಾಣಿಸಿಕೊಟ್ಟ ಪಾತ್ರವೇ ಚಂಪಕ್ಕಳದ್ದು. “ಮಾತೃ ರೂಪಿನ ಗಂಡು ಪಿತೃ ಕೊರಳಿನ ಹೆಣ್ಣು” ಎನ್ನುವ ವೈದೇಹಿಯವರ ಕವನದ ಸಾಲಿಗೆ ಚಂಪಕ್ಕ ಮೂರ್ತರೂಪವೆನಿಸಿತು. ಜೀವನವನ್ನು ಪ್ರೀತಿಯಿಂದ ರೂಪಿಸಬಹುದಾದ ಎಲ್ಲಾ ಸಾಧ್ಯತೆಗಳ ಸಿದ್ಧರೂಪ. ಯುದ್ಧೋತ್ಸಾಹದೊಳಗೆ ಬದುಕಿನ ದಾರುಣತೆಯನ್ನು ಅನುಭವಿಸಿದವಳು. ವರ್ತಮಾನದ ಆತಂಕಗಳ ಜೊತೆಗೆ ಭವಿಷ್ಯತ್ತನ್ನು ರೂಪಿಸುತ್ತಾಳೆಂಬುದಕ್ಕೆ ತೆಂಬಕ್ಕ ಮತ್ತು ಹಂಪಮ್ಮರ ಸತಿ ಹೋಗುವ ಸಂದರ್ಭಗಳೇ ಸಾಕ್ಷಿ. ಸೂಕ್ಷ್ಮಗ್ರಾಹಿತ್ವದ ಸಂಕೀರ್ಣ ಪಾತ್ರವಾಗಿ ಚಿತ್ರಿತವಾಗಿದ್ದಾಳೆ.

ದಿಬ್ಬಕ್ಕ ಮತ್ತು ಗುಣಸುಂದರಿಯರ ಪಾತ್ರಗಳು ಅರಿವಿನ ಸಂಕೇತ. ವೈಜ್ಞಾನಿಕವಾಗಿ ಆಲೋಚಿಸುವ ಇವರಿಬ್ಬರ ಮತಿತ್ವ ಕಾದಂಬರಿಯಲ್ಲಿ ಕಾಣಿಸುತ್ತದೆ. ಮೈ ನೆರೆದ ಮಗಳನ್ನು ಮದುವೆಮಾಡಿ ಕಳಿಸುವ ನಾಗವ್ವೆಯ ಯೋಚನೆಗೆ ವೈರುಧ್ಯವನ್ನು ನೇರವಾಗಿ ದಿಬ್ಬಕ್ಕ ಪ್ರಕಟಪಡಿಸುತ್ತಾಳೆ. ಬಹಳ ಪ್ರಾಕ್ಟಿಕಲ್ ಆಗಿರುವ ಗುಣಸುಂದರಿ ಪ್ರಕೃತಿಯನ್ನು ಆರಾಧಿಸುವಾಕೆ. ಸಾಹಿತ್ಯದ ಸೊಲ್ಲನಾಲಿಸುವ ಪ್ರವೀಣೆ. ಕೃಷ್ಣದೇವರಾಯನ ’ಆಮುಕ್ತಮಾಲ್ಯದ’ ಕೃತಿಯನ್ನು ಸ್ವತಃ ಅವನೆದುರು ವಿಮರ್ಶಿಸುವ ವೇಳೆ, ಭಾಷೆಯ ಕ್ಲಿಷ್ಟತೆಯನ್ನು ತಿಳಿಸುವ ಸಂದರ್ಭವೊಂದಿದೆ. ಹೀಗೆ ತನ್ನ ಅಭಿಪ್ರಾಯವನ್ನು ನಾಜೂಕಿನಲ್ಲಿ ದೊರೆಗಳೆದುರು ಪ್ರಸ್ತುತಪಡಿಸಬೇಕಾದರೆ ಇರಬೇಕಾದ ಆಕೆಯ ಸೂಕ್ಷಪ್ರಜ್ಞತೆಯನ್ನು ಶ್ಲಾಘಿಸಲೇಬೇಕು. ಜೊತೆಗೆ, “ಕವಿಯಾದವನು ರೂಢಿಯನ್ನು ಮುರಿಯಬೇಕು” ಎಂಬ ಮಾತು ನನ್ನಲ್ಲಿನ ಪ್ರಶ್ನೆಗಳಿಗೆ ಉತ್ತರವಾಯಿತು. ಕಾದಂಬರಿಕಾರರು ಸಾಹಿತ್ಯ ಪ್ರಪಂಚದಲ್ಲಿ ಶತಮಾನಗಳಿಂದ ತಲೆಯೆತ್ತಿದ್ದ ವಿಮರ್ಶಾ ಪರಿಧಿಯ ವಿಸ್ತಾರಕ್ಕೆ ಓದುಗನನ್ನು ಕೇಂದ್ರವಾಗಿಸುತ್ತಾರೆ.

ದೃಢ ಭಕ್ತಿಯ ಚಿತ್ತದಿಂದ ಹನಿಗಣ್ಣಾಗಿಸುವ ಪಾತ್ರ ತೆಂಬಕ್ಕಳದ್ದು. ಸಾಂಪ್ರದಾಯಿಕ ಹೆಣ್ತನದ ಚೌಕಟ್ಟು ಮೀರದ ಪಾತ್ರ. ಬೇಡರ ಕಣ್ಣಪ್ಪನ ಭಕ್ತಿಯ ಪರಿಯನ್ನು ಆದರ್ಶವಾಗಿಯೂ ಮತ್ತು ತನ್ನ ಭಕ್ತಿಗೆ ಸಮೀಕರಿಸಿಕೊಳ್ಳುವಾಕೆ. ದೈವತ್ವದ ನಡುವೆ ದಾಳವಾಗಿಬಿಡುವ ಸನ್ನಿವೇಶಕ್ಕೆ ಕಿರುಬೆರಳ ಸಮರ್ಪಣೆ ನಿದರ್ಶನವಾಗಿ ನಿಲ್ಲುತ್ತದೆ. ತನ್ನ ಇನಿಯ ಮಾಪಳನ ಬದುಕನ್ನು ಪ್ರೇಮಿಸಿದಾಕೆ. ತನ್ನವನೆನ್ನುವ ಭಾವವನ್ನೂ ಮೀರಿ, ಪ್ರೇಮಿಸಿದ ಬದುಕನ್ನು ಹಂಪಮ್ಮನಲ್ಲಿ ಮಿಳಿತಗೊಳಿಸುವ ತುಡಿತದವಳು. “ಮೇಲೆ ಕೈಲಾಸದಾಗೆ ಗಂಡನ ಜೊತೆ ಸೇರಿದ್ರೆ ಹಡವಣಿಗೆಯಲ್ಲಿ ಯಾವ ತೊಂದರೇನೂ ಆಗಲ್ಲ ಅಲ್ಲೇನೆ…” ಎಂಬಲ್ಲಿ ವ್ಯವಸ್ಥೆಯ ವಿರುದ್ಧ ಸೌಮ್ಯ ಪ್ರತಿಭಟನೆಯಿದೆ; ಕ್ಷಮೆ ಎನ್ನುವುದಕ್ಕೆ ಅವಳ ತೀವ್ರ ತಿರಸ್ಕಾರವಿದೆ.

ಇದನ್ನೂ ಓದಿ : ಅದು ಬಿಸಿಲು ಚುಚ್ಚುವ ‘ನೆರಳು ಮರಗಳಿಲ್ಲದ ದಾರಿ’

ತೆಂಬಕ್ಕನ ಮಗಳಾದ ಈಶ್ವರಿಯು ಮುಗ್ಧತೆಗೆ ಮತ್ತೊಂದು ರೂಪ. ವರ್ತಮಾನದ ಪ್ರತೀ ನಡೆಗಳು ಮಕ್ಕಳ ಭವಿತವ್ಯವನ್ನು ಪ್ರಭಾವಿಸುತ್ತಲೇ ಇರುತ್ತದೆ. ಈ ಮಾತಿಗೆ ಈಶ್ವರಿಯೇನು ಹೊರತಲ್ಲ. ಈಕೆಯ ಮನಸ್ಸು ಹೆಣ್ಣಿನ ಸಾಂಪ್ರದಾಯಿಕ ಸೀಮೆಯನ್ನು ಹಾದುಹೋಗಿರುವ ಅಂಶ ಕೊಡಗೂಸಿನ ಕಥೆಯನ್ನು ಭಕ್ತಿ-ನೀತಿಯ ಸಾರದೊಂದಿಗೆ ತೆಂಬಕ್ಕ ತಿಳಿಸಿಕೊಡುವ ವೇಳೆ ಗಮನಿಸಬಹುದು. ತಂದೆಯ ಸಾವಿನ ಭೀಕರ ದೃಶ್ಯವನ್ನು ಕಂಡ ನಂತರ ತನ್ನ ಗುರಿಯನ್ನು ಜಟ್ಟಿಯಾಗುವುದಕ್ಕೆ ಹರಿಸುತ್ತಾಳೆ. ಇಲ್ಲಿ ಅವಳ ವ್ಯಕ್ತಿತ್ವ ರೂಪುಗೊಳ್ಳುತ್ತಿದ್ದ ಚಿತ್ರಣವಿದೆ. ತನ್ನವರಿಲ್ಲದೆ ಅನಾಥಪ್ರಜ್ಞೆಯನ್ನು ಮತ್ತು ಪ್ರೀತಿಯ ಅಭಾವದಿಂದಾದ ವಿರಕ್ತ ಭಾವವನ್ನು ಮೇಲ್ಮೈನಲ್ಲಿ ಹಂಪಮ್ಮ ಅಳಿಸಲೆತ್ನಿಸಿದರೂ ಈಶ್ವರಿಯ ಎದೆಯಾಳದಲ್ಲಿ ಅದು ಬೇರೂರಿತ್ತು.

ಸಣ್ಣ ವಿಷಯಗಳಿಂದ ಹಿಡಿದು ಜಗತ್ತಿನ ತಲ್ಲಣಗಳನ್ನು ಕುರಿತ ಚರ್ಚೆಗೆ ನಿಲ್ಲುವ ಬೆಲ್ಲಾ, ಪರಿಸರದ ಅನುಭವ ಗಾಥೆಗಳೊಂದಿಗೆ ಮನದ ಮಾತಿಗೆ ಕಿವಿಯಾಗುವ ಹಂಪಮ್ಮ  ಪ್ರೀತಿಯ ದ್ಯೋತಕ. ಮನ ನೆಚ್ಚಿದ ಹುಡುಗನ ಕನವರಿಕೆಯಲ್ಲಿ ಕ್ಷಣ ವ್ಯಯಿಸುವ ಸಹಜ ಪ್ರೇಮಿಯಂತೆ ಕಾಣಿಸಿಕೊಳ್ಳುತ್ತಾರೆ. ಇವರಿಬ್ಬರ ಮನೋಭಾವಗಳು ಸಹಜ ಹೆಣ್ಣಿನ ಮನಸ್ಥಿತಿಯನ್ನು ಸಾದೃಶಗೊಳಿಸುತ್ತದೆ. ದೇಶ ಭಕ್ತಿಗಾಗಿ ಪ್ರೇಮವನ್ನು ಬದಿಗಿರಿಸಿ ಹೊರಟವರ ದಾರಿಯಲ್ಲಿಯೇ ಹೆಣ್ಣು ಕಾಯುತ್ತಿರಬಹುದಾದರೂ ಭಕ್ತಿಯ ಮೇಳೈಸುವಿಕೆಯಲ್ಲಿ ಆ ಸಮಾಜವೇ ಪರಿವರ್ತನೆಗೊಂಡಿರುತ್ತದೆ; ಪ್ರೀತಿಯ ವ್ಯಾಖ್ಯೆಯನ್ನೇ ಬದಲಾಯಿಸುವಷ್ಟು. ಕೈಗೆಟುಕಿದ ಪ್ರೀತಿ ಕೈಜಾರುವ ಕ್ಷಣದ ನಿಜಸ್ಥಿತಿಯನ್ನು ಮನುಷ್ಯನ ಮನಸ್ಸು ಪ್ರತಿಭಟಿಸುತ್ತಲೇ ಇರುತ್ತದೆ. “ನಾಳೆಗಾಗಿ ಕಾಯಲೇ ಗೇಬಿ?”, ಬೆಲ್ಲಾಳ ಈ ಪ್ರಶ್ನೆಗೆ ಮೌನವನ್ನು ಸಮ್ಮತಿಯಾಗಿ ಸ್ವೀಕರಿಸದೇ ಇದ್ದುದಕ್ಕೆ, ಅವಳದ್ದೆನ್ನಬಹುದಾದ ಪ್ರಪಂಚವನ್ನು ಕಟ್ಟಿಕೊಳ್ಳಲು ಸಾಧ್ಯವಾಗಿದ್ದು. ಬೆಲ್ಲಾ ಶುದ್ಧ ಪ್ರೀತಿಗಾಗಿ ಪರಿತಪಿಸಿ, ಸಿಡಿದೇಳುವ ಭಾವ ಮತ್ತು ವಾಸ್ತವದೊಂದಿಗೆ ಬದುಕನ್ನು ರೂಢಿಸಿಕೊಂಡ ಅರಿವುಗಳ ಸಮ್ಮಿಶ್ರಣ.

ಯುಗ ಯುಗಗಳಿಂದ ಹೆಣ್ಣಿಗಾಗಿ ನಡೆದ ಯುದ್ಧ ಕಥನಗಳು   ಮಹಾಕಾವ್ಯಗಳಾಗಿರುವಾಗ, ಹಂಪಮ್ಮನ ಸಲುವಾಗಿ ಘಟಿಸಿದ ಮಲ್ಲಯುದ್ಧವು ಅವಳ ಬದುಕಿನ ಇನ್ನೊಂದು ತಿರುವಿನ ಮುನ್ಸೂಚನೆ. ಬದುಕನ್ನು ಅನುಕ್ಷಣವೂ ಪ್ರಜ್ಞಾವಸ್ಥ ಸ್ಥಿತಿಯಲ್ಲಿ ಇರಿಸುವ ಕಲೆಯನ್ನು ರೂಢಿಸಿಕೊಂಡಾಕೆ. ಕೇಶವನಿಗಾಗಿ ಹಪಹಪಿಸಿ, ಪ್ರಕ್ಷುಬ್ದಗೊಂಡ ಮನಸ್ಸನ್ನು ಬೇರೆಡೆಗೆ ಹರಿಸುವ ಶಕ್ತಿ ಕಲೆಗಲ್ಲದೆ ಇನ್ನಾವುದಕ್ಕಿದೆ! ಈ ಕಲಾಪ್ರಜ್ಞೆಯೇ ಮುಂದಿನ ಬದುಕ ಚಲನೆಯ ದಿಕ್ಕನ್ನು ಬದಲಾಯಿಸುತ್ತದೆ. ಒಲವು ಹುಟ್ಟುವ ಬಗೆ ಎಂದಿಗೂ ವಿಸ್ಮಯವೇ. ಈ ಟಿಸಿಲೊಡೆದ ವಿಸ್ಮಯ ಕೌತುಕವಾಗಿ ಕಡೆವರೆಗೂ ಕಾಡಿಸುತ್ತದೆ: “ಹಲವಾರು ಬಗೆಯ ಕುಲಾವಿಗಳನ್ನು ಹೊಲಿದವಳು ನಾನು…. ಬಣ್ಣಗಳನ್ನು ಸರಿಯಾಗಿ ಸೇರಿಸಿದರೆ ಎಲ್ಲವೂ ಸೊಗಸಾಗಿ ಹೊಂದಿಕೊಳ್ಳುತ್ತವೆ. ಇನ್ನು ನಿಮ್ಮ ದೇಶದ ಉಣ್ಣೆ ಬಟ್ಟೆಯನ್ನು ಬಳಸುವುದು ಕಷ್ಟವೇ?”

ಒಟ್ಟಿನಲ್ಲಿ, ಹೆಣ್ಣಿನ ಅಂತಃಕರಣವನ್ನು ಸ್ಫುಟವಾಗಿ ತೆರೆದಿಡುವುದರೊಂದಿಗೆ ಸಾಂಪ್ರದಾಯಿಕ ಚೌಕಟ್ಟುಗಳ ಸಾರ್ವಕಾಲಿಕ ಆದರ್ಶಗಳಾಚೆಗೆ ಮಾನವೀಯ ಗುಣಮೌಲ್ಯಗಳನ್ನು ಧ್ವನಿಸಿದೆ ತೋಜೋ ತುಂಗಾಭದ್ರಾ.

-ಕೀರ್ತಿ ಎಸ್. ಭಟ್

ಇದನ್ನೂ ಓದಿ : ಜು.17ರಿಂದ ತೆರೆಯಲಿದೆ ಶಬರಿಮಲೆ ದೇವಸ್ಥಾನ: ಭಕ್ತರು ಈ ನಿಯಮಗಳನ್ನು ಪಾಲಿಸಲೇಬೇಕು

Advertisement

Udayavani is now on Telegram. Click here to join our channel and stay updated with the latest news.

Next