Advertisement

Tungabhadra Dam ನೀರು ತಡೆ ಸಾಹಸ ಯಶಸ್ವಿ: 26 ಟಿಎಂಸಿ ಉಳಿಕೆ!

12:49 AM Aug 18, 2024 | Team Udayavani |

ಕೊಪ್ಪಳ: ತುಂಗಭದ್ರಾ ಜಲಾಶಯದ 19ನೇ ಕ್ರಸ್ಟ್‌ ಗೇಟ್‌ ಮುರಿದ ಸ್ಥಳದಲ್ಲಿ ಎಲ್ಲ ಐದು ಸ್ಟಾಪ್‌ ಲಾಗ್‌ ಗೇಟ್‌ಗಳ ಅಳವಡಿಕೆ ಕಾರ್ಯ ಪೂರ್ಣಗೊಂಡಿದೆ. ಆ ಮೂಲಕ 26 ಟಿಎಂಸಿಯಷ್ಟು ನೀರು ಪೋಲಾಗುವುದನ್ನು ತಡೆಯುವಲ್ಲಿ ಹಿರಿಯ ತಜ್ಞ ಕನ್ನಯ್ಯ ನಾಯ್ಡು ಅವರ ತಂಡ ಯಶಸ್ಸು ಕಂಡಿದೆ.

Advertisement

ತುಂಗಭದ್ರಾ ಜಲಾಶಯದಲ್ಲಿ ಶುಕ್ರವಾರ ರಾತ್ರಿ 9 ಗಂಟೆ ವೇಳೆಗೆ ಮೊದಲ ತಡೆಗೇಟನ್ನು ಅತ್ಯಂತ ಎಚ್ಚರಿಕೆಯಿಂದ ಇಳಿಸಿ ಯಶಸ್ಸು ಕಂಡಿದ್ದ ತಂಡವು ಶನಿವಾರ ಇಡೀ ದಿನ ಕಾರ್ಯನಿರ್ವಹಿಸಿ ಇನ್ನುಳಿದ ನಾಲ್ಕು ಗೇಟ್‌ಗಳನ್ನೂ ಅಳವಡಿಸಿದೆ.

ಅಣೆಕಟ್ಟು ತಜ್ಞ ಕನ್ನಯ್ಯ ನಾಯ್ಡು ಅವರ ಮಾರ್ಗದರ್ಶನದಲ್ಲಿ ಈ ಕಾರ್ಯಾಚರಣೆ ಯಶಸ್ವಿಯಾಗುತ್ತಲೇ ಜಲಾಶಯ ತಜ್ಞರು-ಅಧಿ ಕಾರಿ ವಲಯದಲ್ಲಿ ಸಂಭ್ರಮ ಮನೆ ಮಾಡಿತು. ಸಿಎಂ, ಡಿಸಿಎಂ ಡಿಕೆಶಿ, ವಿವಿಧ ಸಚಿವರ ಸಹಿತ ಗಣ್ಯರು ಹಾಗೂ ಅನ್ನದಾತರ ವಲಯದಿಂದ ಶ್ರಮಿಸಿದ ತಜ್ಞರು ಹಾಗೂ ಕಾರ್ಮಿಕರಿಗೆ ಅಭಿನಂದನೆ ವ್ಯಕ್ತವಾಯಿತು.

ಈ ಐದು ಸ್ಟಾಪ್‌ ಲಾಗ್‌ ಅಳವಡಿಕೆ ಹಿನ್ನೆಲೆಯಲ್ಲಿ ಜಲಾಶಯದ ಎಲ್ಲ ಗೇಟ್‌ಗಳನ್ನು ಬಂದ್‌ ಮಾಡಲಾಗಿದೆ. ಆ ಮೂಲಕ ಜಲಾಶಯದ ಭದ್ರತೆಯ ದೃಷ್ಟಿಯಿಂದ ನದಿಪಾತ್ರಕ್ಕೆ ಹರಿಬಿಡಲಾಗಿದ್ದ ನೀರನ್ನು ಸ್ಥಗಿತಗೊಳಿಸಲಾಯಿತು. ಕಳೆದ ಆರು ದಿನಗಳಲ್ಲಿ ನದಿ ಪಾತ್ರಕ್ಕೆ 35 ಟಿಎಂಸಿ ಹಾಗೂ ಕಾಲುವೆಗಳಿಗೆ ಎಂಟು ಟಿಎಂಸಿ ನೀರನ್ನು ಹರಿಸಲಾಗಿತ್ತು ಎಂದು ಮೂಲಗಳು ತಿಳಿಸಿವೆ.

ಜಿಂದಾಲ್‌ ಕ್ರೇನ್‌ಗಳ ಸಹಾಯ
ಜಲಾಶಯದಲ್ಲಿ ಸ್ಟಾಪ್‌ ಲಾಗ್‌ ಗೇಟ್‌ ಅಳವಡಿಕೆಗೆ ಬೃಹತ್‌ ಕ್ರೇನ್‌ಗಳ ಆವಶ್ಯಕತೆ ಇತ್ತು. ಆದರೆ ಸ್ಥಳೀಯ ಕೈಗಾರಿಕೆಗಳಲ್ಲಿ ಅಂತಹ ಕ್ರೇನ್‌ಗಳು ಇರಲಿಲ್ಲ. ಜಿಂದಾಲ್‌ ಕಂಪೆನಿ ಸಹಕಾರ ನೀಡಿದ್ದರಿಂದ ಆ ಕಂಪೆನಿಯ ಎರಡು ಕ್ರೇನ್‌ಗಳನ್ನು ಬಳಸಿ ಕಾರ್ಯಾಚರಣೆ ನಡೆಸಿ ಎಲ್ಲ ಸ್ಟಾಪ್‌ ಲಾಗ್‌ಗಳನ್ನು ಅಳವಡಿಸಲಾಯಿತು.

Advertisement

ನದಿಯಲ್ಲಿ ಮುರಿದ ಗೇಟ್‌ !
ಶನಿವಾರ ನದಿ ಪಾತ್ರಕ್ಕೆ ಹರಿಯುವ ನೀರು ಹೆಚ್ಚುಕಡಿಮೆ ಸಂಪೂರ್ಣ ಸ್ಥಗಿತಗೊಂಡ ಹಿನ್ನೆಲೆಯಲ್ಲಿ ನದಿ ಪಾತ್ರದಲ್ಲಿ ನೀರಿನ ಮಟ್ಟ ಕಡಿಮೆಯಾಗುತ್ತಿದ್ದಂತೆ ಮುರಿದ ಹೋಗಿದ್ದ 19ನೇ ಕ್ರೆಸ್ಟ್‌ ಗೇಟ್‌ ಗೋಚರಿಸಿತು

ಸ್ಟಾಪ್‌ ಲಾಗ್‌ನಲ್ಲಿ ಸಣ್ಣ ಸೋರಿಕೆ!
ಜಲಾಶಯದ 19ನೇ ಕ್ರೆಸ್ಟ್‌ ಗೇಟ್‌ನಲ್ಲಿ ಐದು ತಡೆಗೇಟು ಅಳವಡಿಕೆ ಮಾಡಿದ್ದರೂ ಸಣ್ಣ ಪ್ರಮಾಣದ ನೀರು ಸೋರಿಕೆ ಇದೆ. ಇದನ್ನು ಪೂರ್ಣವಾಗಿ ತಡೆಯಲು ಅಸಾಧ್ಯ. ಇನ್ನು ಮುಂದೆ ಜಲಾಶಯದಲ್ಲಿ 100 ಟಿಎಂಸಿ ನೀರು ಸಂಗ್ರಹವಾದರೂ ತಡೆಯಬಲ್ಲ ಸಾಮರ್ಥ್ಯವನ್ನು ಈ ಸ್ಟಾಪ್‌ ಲಾಗ್‌ಗಳು ಹೊಂದಿವೆ. ಆದರೂ ಮುಂದಿನ ಮುಂಗಾರು ವೇಳೆಗೆ ಹೊಸ ಕ್ರೆಸ್ಟ್‌ ಗೇಟ್‌ ಅಳವಡಿಕೆ ಮಾಡುವುದು ಅನಿವಾರ್ಯ ಎಂದು ತಜ್ಞ ಕನ್ನಯ್ಯ ನಾಯ್ಡು ಹೇಳಿದ್ದಾರೆ.

ಈ ಜಲಾಶಯಕ್ಕೆ 70 ವರ್ಷ ಆಗಿದೆ. ಪ್ರತೀ 45 ವರ್ಷಗಳಿಗೆ ಒಮ್ಮೆ ಕ್ರಸ್ಟ್‌ ಗೇಟ್‌ ಬದಲಿಸಬೇಕು. ಆದರೆ ಇಲ್ಲಿ ಬದಲಿಸಿಲ್ಲ. ಮುಂದೆ ಎಲ್ಲ ಗೇಟ್‌ಗಳನ್ನು ಬದಲಿಸುವಂತೆ ಸರಕಾರಕ್ಕೆ ಸಲಹೆ ನೀಡಲಾಗುವುದು.
– ಕನ್ನಯ್ಯ ನಾಯ್ಡು , ಅಣೆಕಟ್ಟು ತಜ್ಞ

Advertisement

Udayavani is now on Telegram. Click here to join our channel and stay updated with the latest news.

Next