ಬೆಂಗಳೂರು: ನಮ್ಮ ಮೆಟ್ರೋದ ರೀಚ್ 6 (ಕಾಳೇನ ಅಗ್ರಹಾರ-ನಾಗವಾರ) ರಲ್ಲಿ ವೆಂಕಟೇಶಪುರದಿಂದ ಸುರಂಗ ಕೊರೆಯುತ್ತಿದ್ದ ತುಂಗಾ ಸುರಂಗ ಕೊರೆಯುವ ಯಂತ್ರವು ಕಾಡುಗೊಂಡ ನಹಳ್ಳಿ (ಕೆ. ಜಿ. ಹಳ್ಳಿ)ಯಲ್ಲಿ ಹೊರಬಂದಿದೆ.
ತನ್ಮೂಲಕ ಬೆಂಗಳೂರಿನಲ್ಲಿ ಅತಿ ಉದ್ದದ ಸುರಂಗ ಮಾರ್ಗವನ್ನು ಹೊಂದಿರುವ ಗುಲಾಬಿ ಮಾರ್ಗದ ಶೇ. 90ರಷ್ಟು ಸುರಂಗ ಕೊರೆಯುವ ಕಾಮಗಾರಿ ಮುಕ್ತಾಯಗೊಂಡಿದೆ.
2022ರ ಅಕ್ಟೋಬರ್‌ನಲ್ಲಿ ವೆಂಕಟೇಶಪುರದಿಂದ ತುಂಗಾ ತನ್ನ ಸುರಂಗ ಕೊರೆಯುವ ಕಾರ್ಯಾಚರಣೆಯನ್ನು ಪ್ರಾರಂಭಿಸಿತ್ತು. ಒಟ್ಟು 1.184.4 ಮೀಟರ್ ಸುರಂಗ ಕೊರೆದು ಬುಧವಾರ ಕೆ.ಜಿ.ಹಳ್ಳಿ ನಿಲ್ದಾಣದಲ್ಲಿ ಹೊರಬರುತ್ತಿದ್ದಂತೆ ನೂರಾರು ಮೆಟ್ರೋ ಕಾರ್ಮಿಕರು ಸಂಭ್ರಮಾಚರಣೆ ಮಾಡಿದರು.
ಗುಲಾಬಿ ಮಾರ್ಗ ಮೆಟ್ರೋ ಒಟ್ಟು 21.26 ಕಿ.ಮೀ. ಉದ್ದ ಹೊಂದಿದೆ. ಈ ಪೈಕಿ 13.92 ಕಿ.ಮೀ. ಸುರಂಗ ಮಾರ್ಗವೇ ಇದೆ. ಈ ಮಾರ್ಗದಲ್ಲಿ ಒಟ್ಟು 18 ನಿಲ್ದಾಣಗಳಿದ್ದು ಅವುಗಳಲ್ಲಿ 12 ಭೂಗತ ಮತ್ತು 6 ಸಾಮಾನ್ಯ ನಿಲ್ದಾಣಗಳಾಗಿವೆ.
ತುಂಗಾ ಈ ಮೊದಲು ಈ ಮಾರ್ಗದಲ್ಲಿನ ವೆಂಕಟೇಶಪುರ ನಿಲ್ದಾಣ ಮತ್ತು ಟ್ಯಾನರಿ ರಸ್ತೆ ನಡುವೆ ಸುರಂಗ ಕೊರೆದಿತ್ತು. ಇದೀಗ ವೆಂಕಟೇಶಪುರ ಮತ್ತು ಕೆ. ಜಿ. ಹಳ್ಳಿ ಮಧ್ಯೆ ಸುರಂಗ ಕಾಮಗಾರಿ ಪೂರ್ಣಗೊಳ್ಳುವದರೊಂದಿಗೆ ಮಾರ್ಗದಲ್ಲಿನ 24 ಸುರಂಗ ನಿರ್ಮಾಣ ಕಾರ್ಯಗಳ ಪೈಕಿ 21 ಸುರಂಗ ಕಾಮಗಾರಿ ಪೂರ್ಣಗೊಂಡಂತೆ ಆಗಿದೆ.
ಬೆಂಗಳೂರು ಮೆಟ್ರೊ ರೈಲು ನಿಗಮದ ಪ್ರಕಾರ, ಒಟ್ಟು 20.992 ಮೀಟರ್ ಸುರಂಗ ಕಾಮಗಾರಿಯ ಪೈಕಿ 18.832.30 ಮೀಟರ್ ಅಂದರೆ ಗುಲಾಬಿ ಮಾರ್ಗದ ಶೇ. 89.70ರಷ್ಟು ಸುರಂಗ ಕಾಮಗಾರಿ ಪೂರ್ಣಗೊಂಡಂತೆ ಆಗಿದೆ. ಸುರಂಗ ಕಾಮಗಾರಿಗೆ ನಿಯೋಜಿಸಲಾದ ಒಟ್ಟು 9 ಟಿಬಿಎಂಗಳ ಪೈಕಿ 7 ತಮ್ಮ ಕಾರ್ಯಗಳನ್ನು ಪೂರ್ಣಗೊಳಿಸಿವೆ.