ತುಮಕೂರು: ಪಿಒಪಿ ಗಣೇಶ ಮೂರ್ತಿ ಪೂಜಿಸುವ ಬದಲು ಮಣ್ಣಿನ ಗಣಪತಿಗೆ ಆದ್ಯತೆ ನೀಡಿ ಪರಿಸರ ಸ್ನೇಹಿಯಾಗಿ ಹಬ್ಬ ಆಚರಿಸುವಂತೆ ಅಧಿಕಾರಿಗಳು ತಿಂಗಳಿನಿಂದ ಜಾಗೃತಿ ಮೂಡಿಸುತ್ತಿದ್ದರೂ ಗೌರಿ- ಗಣೇಶ ಹಬ್ಬಕ್ಕೆ ಕೆಲವೇ ದಿನ ಇರುವುದರಿಂದ ನಗರದ ಮಾರುಕಟ್ಟೆಯಲ್ಲಿ ಕದ್ದು ಮುಚ್ಚಿ ಪಿಒಪಿ ಮೂರ್ತಿ ಮಾರಾಟ ನಡೆಯುತ್ತಿದೆ.
100 ರೂ.ನಿಂದ ಸಾವಿರಾರೂ ರೂ. ಬೆಲೆಯ ವಿಗ್ರಹಗಳು ಗಾತ್ರಕ್ಕನುಗುಣವಾಗಿ ಮಾರಾಟವಾಗು ತ್ತಿದೆ. ಪಿಒಪಿ ಮೂರ್ತಿ ಪೂಜಿಸಿ ಕೆರೆ, ಕಟ್ಟೆಗಳಲ್ಲಿ ವಿಸರ್ಜಿಸುವುದರಿಂದ ಜಲಮಾಲಿನ್ಯ ಉಂಟಾಗುವು ದಲ್ಲದೆ ಪರಿಸರದ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂದು ಅಧಿಕಾರಿಗಳು ಅರಿವು ಮೂಡಿಸುತ್ತಿದ್ದರೂ ಕೆಲವರು ಪಿಒಪಿ ಮೂರ್ತಿ ಖರೀದಿಸುತ್ತಾರೆ. ಹಬ್ಬದ ಹಿಂದಿನ ದಿನ ಹೆಚ್ಚು ಪಿಒಪಿ ಮೂರ್ತಿಗಳು ಮಾರಾಟ ವಾಗುವ ಸಾಧ್ಯತೆಯಿದೆ. ಈ ಹಿಂದೆ ಪಿಒಪಿ ಮೂರ್ತಿ ಮಾರಾಟ ಮಾಡುವಾಗ ಅಧಿಕಾರಿಗಳು ದಾಳಿ ನಡೆಸಿ ವಶಪಡಿಸಿಕೊಂಡಿದ್ದರು. ಹಬ್ಬಕ್ಕೆ ಇನ್ನು ಕೆಲವೇ ದಿನಗಳು ಇರುವುದರಿಂದ ಪಿಒಪಿ ವಿಗ್ರಹ ಮಾರಾಟಕ್ಕೆ ಕಡಿವಾಣ ಹಾಕಬೇಕಿದೆ.
ಪ್ಲಾಸ್ಟರ್ ಆಫ್ ಪ್ಯಾರೀಸ್ ಮೂರ್ತಿ ಬಾವಿ, ಕೆರೆ- ಕಟ್ಟೆ ಹಾಗೂ ನದಿಗಳಲ್ಲಿ ವಿಸರ್ಜಿಸಿದರೆ ನೀರಿನ ಮಾಲಿನ್ಯವಾಗುವುದಲ್ಲದೆ ಜಲಚರಗಳ ಜೀವಕ್ಕೂ ಕುತ್ತು. ಅಂತರ್ಜಲ, ಕುಡಿಯುವ ನೀರಿನ ಸೆಲೆ ಬತ್ತಿ ಹೋಗುವ ಸಾಧ್ಯತೆಯಿರುತ್ತದೆ.
ವಿಘ್ನನಿವಾರಿಸಲೆಂದು ಪೂಜಿಸುವ ಹಬ್ಬದಿಂದ ವಿಘ್ನ ಗಳುಂಟಾಗದಂತೆ ಎಚ್ಚರ ವಹಿಸುವುದು ನಾಗರಿಕರ ಜವಾಬ್ದಾರಿಯಾಗಬೇಕು. ಪರಿಸರ ಸ್ನೇಹಿ ವಿಗ್ರಹ ಪೂಜಿಸುವ ಮೂಲಕ ಹಬ್ಬ ಆಚರಿಸಬೇಕು. ನೈಸರ್ಗಿಕ ಅಲಂಕಾರಗಳೇ ಗಣೇಶನಿಗೆ ಶ್ರೇಷ್ಟವಾಗಿರುವುದರಿಂದ ಪರಿಸರಸ್ನೇಹಿ ವಸ್ತಗಳನ್ನೇ ಬಳಸಬೇಕು. ಸೂಚಿತ ಸ್ಥಳಗಳಲ್ಲಿ ವಿಸರ್ಜಿಸುವ ಮುನ್ನ ಗಣೇಶನ ಮೇಲಿರುವ ಹೂವು, ವಸ್ತ್ರ, ಹಾರ ತೆಗೆದು ವಿಸರ್ಜಿಸಬೇಕು.
ಪರಿಸರಸ್ನೇಹಿ ಗಣೇಶ ಮೂರ್ತಿ ಖರೀದಿಸಿ ಪೂಜಿಸಬೇಕು. ಯಾವುದೇ ಮಾಲಿನ್ಯಕ್ಕೆ ಆಸ್ಪದ ನೀಡಬಾರದು. ರಸ್ತೆ, ಚರಂಡಿಗಳಲ್ಲಿ ತಟ್ಟೆ- ಲೋಟ-ಎಲೆ ಎಸೆಯದೆ ಸ್ಥಳೀಯ ಸಂಸ್ಥೆಯ ವಾಹನ ಗಳಲ್ಲಿ ವಿಲೇವಾರಿ ಮಾಡಬೇಕು.
ಹಬ್ಬದ ದಿನ ರಾತ್ರಿ 10ರಿಂದ ಬೆಳಗ್ಗೆ 6 ಗಂಟೆ ಯವರೆಗೆ ಧ್ವನಿವರ್ಧಕ ಬಳಕೆ ಮಾಡಬಾರದು. ಮೆರವಣಿಗೆ ವೇಳೆ ಶಾಂತಿ ಕಾಪಾಡಿಕೊಳ್ಳುವುದರೊಂದಿಗೆ ಪೆಟ್ರೋಲ್ ಗಾಡಿ ಮಿತವಾಗಿ ಬಳಸಬೇಕು ಎಂದು ಜಿಲ್ಲಾ ಪರಿಸರ ಅಧಿಕಾರಿ ಭೀಮ್‌ಸಿಂಗ್ ಗೌಗಿ ತಿಳಿಸಿದ್ದಾರೆ.