Advertisement

ತುಳುನಾಡಿನ ಆಚರಣೆಗಳು ಸೌಹಾರ್ದದ ಸಂಕೇತ: ಡಾ|ವಿವೇಕ ರೈ

01:11 PM Apr 16, 2018 | |

ಉಪ್ಪಿನಂಗಡಿ: ಸಂಸ್ಕೃತಿಯ ನೆಲೆವೀಡಾಗಿರುವ ತುಳುನಾಡಿನ ಆಚರಣೆಗಳು ಶ್ರೀಮಂತವಾಗಿದ್ದು, ಸೌಹಾರ್ದದ ಸಂದೇಶವನ್ನು ನೀಡುತ್ತಿವೆ. ಇಲ್ಲಿನ ಹಬ್ಬ, ಆರಾಧನೆಗಳಲ್ಲಿ ಮನುಷ್ಯ ಸಂಬಂಧವನ್ನು ಕಾಪಾಡುವ, ಪ್ರಕೃತಿಯನ್ನು ಗೌರವಿಸುವ ಜೀವನಾದರ್ಶಗಳಿವೆ ಎಂದು ಹಂಪಿ ಕನ್ನಡ ವಿವಿಯ ವಿಶ್ರಾಂತ ಉಪಕುಲಪತಿ, ವಿದ್ವಾಂಸ ಡಾ| ಬಿ.ಎ. ವಿವೇಕ್‌ ರೈ ತಿಳಿಸಿದರು.

Advertisement

‘ನಮ್ಮೂರು- ನೆಕ್ಕಿಲಾಡಿ’ ಸಂಸ್ಥೆಯ ವತಿಯಿಂದ 34ನೇ ನೆಕ್ಕಿಲಾಡಿ ಗ್ರಾಮದ ಸಾರ್ವಜನಿಕ ಮೈದಾನದಲ್ಲಿ ಶನಿವಾರ ಎಲ್ಲ ಧರ್ಮೀಯರನ್ನು ಒಳಗೊಂಡು ಸೌಹಾರ್ದ ಯುತವಾಗಿ ನಡೆದ ‘ಬಿಸುತ ಪೊಲಬು’ ಕಾರ್ಯಕ್ರಮವನ್ನು ದೀಪ ಪ್ರಜ್ವಲನಗೈದು, ‘ಬಿಸು ಕಣಿ’ ಇಡುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

ತುಳು ಯಾವುದೇ ಜಾತಿಗೆ, ನಿರ್ದಿಷ್ಟ ಸಮುದಾಯಕ್ಕೆ ಸೀಮಿತವಾದ ಭಾಷೆ ಅಲ್ಲ. ಇದು ತುಳುನಾಡಿನ ಜನರ ಭಾಷೆ. ಇದರಲ್ಲಿ ನೆಲದ ಸಂಸ್ಕೃತಿ ಅಡಗಿದೆ. ಇಲ್ಲಿನ ಪ್ರತಿಯೊಂದು ಆಚರಣೆಗಳು ಸೌಹಾರ್ದಯುತವಾಗಿವೆ. ತುಳು ಸಂಸ್ಕೃತಿಯ ಸೊಗಡು, ಪ್ರಾದೇಶಿಕ ವಾಸನೆಯುಳ್ಳ ಸಂಪದ್ಭರಿತ ಭಾಷೆಯಾಗಿದ್ದು, ತುಳುನಾಡಿನವರ ಅಂತರಂಗದ ಭಾಷೆಯಾಗಿದೆ. ಸೂರ್ಯನ ಚಲನೆಯನ್ನು ಆಧರಿಸಿ ನಿರ್ಧರಿಸುವ ತುಳುವರ ಹೊಸ ವರ್ಷವೇ ವಿಷು ಹಬ್ಬ. ಇದರಲ್ಲಿ ತಾವು ಬೆಳೆದ ಫ‌ಲವಸ್ತುಗಳನ್ನು ಪೂಜಿಸಿ ಅದರಲ್ಲೇ ದೇವರನ್ನು ಕಾಣಲಾಗುತ್ತದೆ. ತುಳುನಾಡಿನಲ್ಲಿ ಪ್ರತಿಯೊಂದು ಧರ್ಮದವರೂ ಒಬ್ಬರನ್ನೊಬ್ಬರು ಅವಲಂಬಿಸಿರುವುದು ಕಂಡು ಬರುತ್ತಿದ್ದು, ಇಂತಹ ಸೌಹಾರ್ದಯುತ ವಾತಾವರಣ ಇನ್ನಷ್ಟು ಗಟ್ಟಗೊಳಿಸಬೇಕು ಎಂದರು.

ಮುಖ್ಯ ಅತಿಥಿಗಳಾದ ಡಾ| ನಿರಂಜನ್‌ ರೈ ಮಾತನಾಡಿ, ತುಳುವರ ಹಬ್ಬವೆಂದರೆ ಅದು ಪ್ರಕೃತಿಯ ಆರಾಧನೆ. ಬಿಸು ಹಬ್ಬವನ್ನು ತಮಿಳುನಾಡು, ಅಸ್ಸಾಂ, ಕೇರಳ ರಾಜ್ಯಗಳಲ್ಲಿ ಬೇರೆ ಬೇರೆ ಹೆಸರಿನಲ್ಲಿ ಆಚರಿಸಲಾಗುತ್ತಿದೆ. ಆದರೆ ಬದಲಾವಣೆಯ ಗಾಳಿ ಬೀಸಿದ್ದು, ಹೊಸತನ್ನು ನಾವು ಒಪ್ಪಿಕೊಂಡರೂ ಈ ನೆಲದ ಜೀವನ ಮೌಲ್ಯ, ಕಲಾ ಮೌಲ್ಯಗಳನ್ನು ಉಳಿಸುವ ಪಣತೊಡಬೇಕು ಎಂದರು.

ದಂತ ವೈದ್ಯ ಡಾ| ರಾಜಾರಾಮ್‌ ಕೆ.ಬಿ. ಮಾತನಾಡಿ, ಕೃಷಿಯೊಂದಿಗೆ ಬೆರೆತಿರುವ ತುಳು ಸಂಸ್ಕೃತಿಗೆ ತನ್ನದೇ ಸೊಗಡಿದೆ. ಆದರೆ ಇತ್ತೀಚೆಗೆ ತುಳುವರ ಬದುಕು ಸ್ಥಿತ್ಯಂತರಗೊಳ್ಳುತ್ತಿದ್ದು, ಜೀವನ ಶೈಲಿಯಲ್ಲಿ ಅನೇಕ ಬದಲಾವಣೆಗಳಾಗಿವೆ. ಆಹಾರ ಪದ್ಧತಿ, ಜೀವನ ಪದ್ಧತಿಯಿಂದಾಗಿ ಆರೋಗ್ಯ ಭಾಗ್ಯ ಇಲ್ಲದಂತಾಗಿದೆ. ತುಳು ಭಾಷೆ, ತುಳು ಸಂಸ್ಕೃತಿಯನ್ನು ಉಳಿಸಲು ನಾವೆಲ್ಲ ಒಗ್ಗೂಡಿ ಶ್ರಮಿಸಬೇಕಾಗಿದೆ ಎಂದರು.

Advertisement

ಉದ್ಯಮಿ ಧನ್ಯಕುಮಾರ್‌ ರೈ ಬಿಳಿಯೂರುಗುತ್ತು ಮಾತನಾಡಿ, ತುಳುವರ ಪ್ರತಿಯೊಂದು ಆಚರಣೆಗಳು ಸೌಹಾರ್ದದ ಸಂದೇಶ ಸಾರುತ್ತಿದ್ದು, ತುಳುನಾಡಿನ ಹಬ್ಟಾಚರಣೆಯ ಮೂಲಕ ಪರಸ್ಪರ ಸಾಮರಸ್ಯದ ಬದುಕು ನಮ್ಮದಾಗಬೇಕಿದೆ ಎಂದರು.

ಡಾ| ಬಿ.ಎ. ವಿವೇಕ್‌ ರೈ ಅವರಿಗೆ ಸಂಸ್ಥೆಯ ವತಿಯಿಂದ ಗೌರವ ಸಲ್ಲಿಸಲಾಯಿತು. ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ – ಮಹಾಕಾಳಿ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಅಲಿಮಾರ್‌ ರಘುನಾಥ ರೈ, ಸದಸ್ಯ ಪ್ರಕಾಶ್‌ ರೈ ಬೆಳ್ಳಿಪ್ಪಾಡಿ, ಪ್ರಮುಖರಾದ ಯು.ಜಿ. ರಾಧ, ಜಗದೀಶ್‌ ಶೆಟ್ಟಿ, ಮಾರ್ಕೋ ಟೈಲರ್‌, ಜಯಂತ ಪೊರೋಳಿ, ರಾಮಚಂದ್ರ ಮಣಿಯಾಣಿ, ಗೋಪಾಲ ಹೆಗ್ಡೆ, ಮಥಾಯಿಸ್‌, ಇಸ್ಮಾಯಿಲ್‌, ಮೊಯ್ದೀನ್‌ ಕುಟ್ಟಿ, ಹಮೀದ್‌ ಪಿ.ಟಿ., ಹರೀಶ್‌ ನಾಯಕ್‌ ನಟ್ಟಿಬೈಲು, ವಿಶ್ವನಾಥ ನಾಯಕ್‌ ಕೊಳಕೆ, ಯೂಸುಫ್ ಬೇರಿಕೆ, ‘ನಮ್ಮೂರು ನೆಕ್ಕಿಲಾಡಿ’ಯ ಕಾರ್ಯದರ್ಶಿ ಅಬ್ದುರ್ರಹ್ಮಾನ್‌ ಯುನಿಕ್‌, ಉಪಾಧ್ಯಕ್ಷರಾದ ರೂಪೇಶ್‌ ರೈ ಅಲಿಮಾರ್‌, ಅನಿ ಮೆನೇಜಸ್‌, ಜಾನ್‌ ಕೆನ್ಯೂಟ್‌, ಖಜಾಂಚಿ ಶಿವಕುಮಾರ್‌ ಬಾರಿತ್ತಾಯ, ಜೊತೆ ಕಾರ್ಯದರ್ಶಿ ಸತ್ಯವತಿ ಪೂಂಜಾ, ಜೊತೆ ಸಂಘಟನ ಕಾರ್ಯದರ್ಶಿ ಅಮಿತಾ ಹರೀಶ್‌, ಸದಸ್ಯರಾದ ಖಲಂದರ್‌ ಶಾಫಿ, ಝಕಾರಿಯಾ ಕೊಡಿಪ್ಪಾಡಿ, ಜಯಶೀಲಾ, ವೀಣಾ ಮಸ್ಕರೇನ್ಹಸ್‌ ಉಪಸ್ಥಿತರಿದ್ದರು. ನಮ್ಮೂರು ನೆಕ್ಕಿಲಾಡಿಯ ಅಧ್ಯಕ್ಷ ಜತೀಂದ್ರ ಶೆಟ್ಟಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಘಟನ ಕಾರ್ಯದರ್ಶಿ ಜಯಪ್ರಕಾಶ್‌ ಶೆಟ್ಟಿ, ಪ್ರಾಂಶುಪಾಲ ಲೊಕೇಶ್‌ ಬೆತ್ತೋಡಿ ಕಾರ್ಯಕ್ರಮ ನಿರೂಪಿಸಿದರು.

ಕೃಷಿ ಸಾಧಕರಿಗೆ ಸಮ್ಮಾನ 
‘ಬಿಸುತ ಪೊಲಬು’ ಕಾರ್ಯಕ್ರಮದಲ್ಲಿ ಹಿರಿಯ ಕೃಷಿ ಸಾಧಕರಾದ ರಾಮಣ್ಣ ರೈ ಅಲಿಮಾರ್‌, ಆದಂ ಕುಂಞಿ ಕೊಡಿಪ್ಪಾಡಿ, ಸೆವರಿನ್‌ ಮಸ್ಕರೇನ್ಹಸ್‌ ನೆಕ್ಕಲ ಅವರನ್ನು ಸಮ್ಮಾನಿಸಲಾಯಿತು. ಸಾರ್ವಜನಿಕ ಆಟದ ಮೈದಾನಕ್ಕೆಂದು 55 ಸೆಂಟ್ಸ್‌ ಕುಮ್ಕಿ ಜಾಗವನ್ನು ಬಿಟ್ಟು ಕೊಟ್ಟ ಅನಿಲ್‌ ಮೆನೇಜಸ್‌ ಅಲಿಮಾರ್‌ ಮತ್ತು ಗ್ರಾಮಕ್ಕೊಂದು ಆಟದ ಮೈದಾನಬೇಕೆಂದು ಹೋರಾಟ ನಡೆಸಿದ ಜತೀಂದ್ರ ಶೆಟ್ಟಿ ನೆಕ್ಕಿಲಾಡಿ ಅವರನ್ನು ಗೌರವಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next