ಬಂಟ್ವಾಳ: ತುಳು ಭಾಷೆಯನ್ನು ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರ್ಪಡೆಗೆ ಹಲವು ಕಡೆಗಳಿಂದ ಒತ್ತಡಗಳಿವೆ.
ಪ್ರಧಾನಿಯವರಿಗೂ ಮನವಿ ಸಲ್ಲಿಸಲಾಗಿದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಹೇಳಿದರು.
ಅವರು ನ.4ರಂದು ಮಂಗಳೂರು ಪಿಲಿಕುಳದ ತುಳು ಸಂಸ್ಕೃತಿ ಗ್ರಾಮದಲ್ಲಿ ತುಳುನಾಡೋಚ್ಚಯ- 2017ರ ಲಾಂಛನ ಬಿಡುಗಡೆಗೊಳಿಸಿ ಮಾತನಾಡಿದರು.
ತುಳು 8ನೇ ಪರಿಚ್ಛೇದಕ್ಕೆ ಸೇರಿಸಲು ಸ್ಪಷ್ಟ ಮಾನದಂಡಗಳೇನೆಂದು ಇದುವರೆಗೆ ಗೊಂದಲಗಳಿದ್ದವು. ಈ ಬಗ್ಗೆ ಮಾಹಿತಿ ಸಂಗ್ರಹಿಸಿ ತುಳು ಭಾಷೆಗೆ ಬೇಕಾದ ಮಾನದಂಡಗಳೇನೆಂಬುದನ್ನು ಅರಿತು ಕೆಲಸ ಮುಂದುವರಿಸಬೇಕಾಗಿದೆ. ಅಲ್ಲದೆ ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ತಪ್ಪು ಮಾಹಿತಿ ನೀಡಿ ಗೊಂದಲವನ್ನುಂಟುಮಾಡುವುದು ಸಮಂಜಸವಲ್ಲ ಎಂದು ಅವರು ಅಭಿಪ್ರಾಯಪಟ್ಟರು.
ಡಿ. 23,24ರಂದು ಮಂಗಳೂರಿನ ಪಿಲಿಕುಳದ ತುಳು ಸಂಸ್ಕೃತಿ ಗ್ರಾಮದಲ್ಲಿ ತುಳುನಾಡೋಚ್ಚಯ ನಡೆಯಲಿದೆ. ತುಳುನಾಡಿನಲ್ಲಿ ಜಾತಿ, ಮತ, ಭಾಷಾ ಸಾಮರಸ್ಯ ಉಂಟುಮಾಡುವ ಉತ್ತಮ ಉದ್ದೇಶದೊಂದಿಗೆ ಜರಗುವ ತುಳುನಾಡೋಚ್ಚಯವು ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು.
ತುಳು ನಾಡೋಚ್ಚಯದ ಅಧ್ಯಕ್ಷ ಡೇವಿಡ್ ಫ್ರಾಂಕ್ ಫೆರ್ನಾಂಡಿಸ್, ಜಗದೀಶ್ ಅಧಿಕಾರಿ, ಶಮೀನಾ ಆಳ್ವ ಮೂಲ್ಕಿ,
ಮೋಹನ ಸ್ವಾಮೀಜಿ ಮುದ್ರಾಡಿ, ಯೋಗೀಶ್ ಶೆಟ್ಟಿ ಜಪ್ಪು,ಜೀವನ್ ಶೆಟ್ಟಿ ಮೂಲ್ಕಿ, ಜ್ಯೋತಿಕಾ ಜೈನ್ ಮೊದಲಾದವರಿದ್ದರು. ಲೋಗೋ ರಚಿಸಿದ ಭೂಷಣ್ ಕುಲಾಲ್ ಅವರನ್ನು ಅಭಿನಂದಿಸಲಾಯಿತು.