Advertisement

ತುಳು ಯಕ್ಷಗಾನ ವೈಭವ ನೆನಪಿಸಿದ ಗೇಲ್ದಬೀರೆ ವಾಲಿ 

06:00 AM Jul 20, 2018 | Team Udayavani |

ಉಡುಪಿಯ ತುಳುಕೂಟದ ಮಲ್ಪೆ ರಾಮದಾಸ ಸಾಮಗ ಪ್ರಶಸಿಯನ್ನು ಜು. 7ರಂದು ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಜರಗಿದ ಕಾರ್ಯಕ್ರಮದಲ್ಲಿ ಹಿರಿಯ ಯಕ್ಷಗಾನ ಕಲಾವಿದ ಶಿವರಾಮ ಜೋಗಿ ಅವರಿಗೆ ಪ್ರದಾನಿಸಲಾಯಿತು. 

Advertisement

ಈ ಸಂದರ್ಭದಲ್ಲಿ ಗೇಲ್ದಬೀರೆ ವಾಲಿ ತುಳು ಯಕ್ಷಗಾನ ಪ್ರದರ್ಶನ ಹವ್ಯಾಸಿ ಕಲಾವಿದರ ಪ್ರತಿಭಾ ಸಾಮರ್ಥ್ಯಕ್ಕೆ ಸಾಕ್ಷಿಯಾಯಿತು. ಹಿರಿಯ ಪ್ರಸಂಗ ಕರ್ತ ಗಣೇಶ್‌ ಕೊಲಕಾಡಿ ಬರೆದಿರುವ ಈ ಪ್ರಸಂಗವನ್ನು ಸುಮಾರು 2 ತಾಸುಗಳ ಕಾಲ ಪ್ರದರ್ಶಿಸಲಾಗಿದ್ದು, ಪ್ರೇಕ್ಷಕರಿಂದ ಮೆಚ್ಚುಗೆ ಪಡೆಯಿತು. ಭಾಗವತ ಹೊಸಮೂಲೆ ಗಣೇಶ್‌ ಭಟ್‌ ಅವರಿಗೆ ಹಿಮ್ಮೇಳದಲ್ಲಿ ಪದ್ಯಾಣ ಶಂಕರನಾರಾಯಣ ಭಟ್‌ ಮತ್ತು ಅಕ್ಷಯ ವಿಟ್ಲ ಸಹಕರಿಸಿದರು . ಕೆಲವು ಹಾಡುಗಳಿಗೆ ಪ್ರೇಕ್ಷಕರಿಂದ ಚಪ್ಪಾಳೆಯ ಮೆಚ್ಚುಗೆ ವ್ಯಕ್ತವಾಯಿತು. 

ಇಡೀ ಪ್ರದರ್ಶನದಲ್ಲಿ ಸುಗ್ರೀವನ ಪಾತ್ರಧಾರಿ ಉಬರಡ್ಕ ಉಮೇಶ್‌ ಶೆಟ್ಟಿ ಅದ್ಭುತ ಪ್ರದರ್ಶನ ನೀಡಿದ್ದಾರೆ. ವೃತ್ತಿಪರ ಕಲಾವಿದರಾಗಿರುವ ಅವರ ಜತೆಗೆ ಕೆಲವು ಹವ್ಯಾಸಿ ಕಲಾವಿದರೂ ಸಮರ್ಥ ಪ್ರದರ್ಶನ ನೀಡಿದ್ದಾರೆ. ವಾಲಿಯಾಗಿ ಹವ್ಯಾಸಿ ಕಲಾವಿದ ಹಾಗೂ ತುಳು ಕೂಟದ ಗೌರವಾಧ್ಯಕ್ಷರಾಗಿರುವ ಹಿರಿಯ ವೈದ್ಯ ಡಾ| ಭಾಸ್ಕರಾನಂದ ಕುಮಾರ್‌ ಅವರು ತೃಪ್ತಿದಾಯಕ ಪ್ರದರ್ಶನ ನೀಡಿದ್ದಾರೆ. ಕೊನೆಯಲ್ಲಿ ಅವರ ಅಭಿನಯ ಹೃದಯವನ್ನು ತಟ್ಟಿತ್ತು. ರಾಮನಿಂದ ಸಾಯುವ ಹೊತ್ತಿನಲ್ಲಿ ವಾಲಿಯ ಪ್ರತಿಯೊಂದು ಮಾತು ಮತ್ತು ಅಭಿನಯ ಕಣ್ಣೀರು ಬರುವಂತೆ ಮಾಡಿತು. ವೃತ್ತಿಯಲ್ಲಿ ವೈದ್ಯರಾಗಿದ್ದರೂ ಅವರು ಯಕ್ಷಗಾನದಲ್ಲಿ ಹೊಂದಿರುವ ಆಸಕ್ತಿ ಮೆಚ್ಚತಕ್ಕದ್ದು. ರಾಮನಾಗಿ ಸುನಿಲ್‌ ಪಲ್ಲಮಾರ್‌ ಕೂಡ ಉತ್ತಮ ಪ್ರದರ್ಶನ ನೀಡಿದ್ದಾರೆ. 

ಹನುಮಂತನಾಗಿ ಶ್ರೀನಿಧಿ ಆಚಾರ್ಯ, ಬ್ರಹ್ಮಚಾರಿಯ ಪಾತ್ರದಲ್ಲಿ ಸುರೇಶ್‌ ಕೊಲಕಾಡಿ, ಲಕ್ಷ್ಮಣನಾಗಿ ಹರಿರಾಜ ಕಟೀಲು ಅವರೆಲ್ಲರೂ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿಕೊಡುವಲ್ಲಿ ಸ‌ಫ‌ಲರಾಗಿದ್ದಾರೆ. ಇಡೀ ಪ್ರಸಂಗದಲ್ಲಿ ಇದ್ದ ಏಕೈಕ ಸ್ತ್ರೀಪಾತ್ರವಾಗಿದ್ದ ತಾರೆಯಾಗಿ ರಮೇಶ್‌ ಆಚಾರ್ಯ ಅವರು ಉತ್ತಮ ಪ್ರದರ್ಶನ ನೀಡಿದ್ದಾರೆ. ಯುದ್ಧಕ್ಕೆ ಹೋಗದಂತೆ ಗಂಡನನ್ನು ತಡೆಯುವ ಸನ್ನಿವೇಶ ಮನಸ್ಪರ್ಶಿಯಾಗಿತ್ತು.

 ಹಿತಮಿತವಾಗಿ ಪ್ರದರ್ಶನವಾದ ಈ ಪ್ರಸಂಗವು ತುಳುವಿನಲ್ಲೂ ಒಂದು ಉತ್ತಮ ಪೌರಾಣಿಕ ಪ್ರಸಂಗವನ್ನು ಮನಸ್ಪರ್ಶಿಯಾಗಿ ಪ್ರದರ್ಶಿಸಬಹುದು ಎಂಬುದನ್ನು ತೋರಿಸಿಕೊಟ್ಟಿತು. 

Advertisement

ಮಧುಶ್ರೀ

Advertisement

Udayavani is now on Telegram. Click here to join our channel and stay updated with the latest news.

Next