Advertisement

ತುಳು ವಿದ್ವಾಂಸ, ಭಾಷಾ ಸಂಶೋಧಕ ಯು. ಪಿ ಉಪಾಧ್ಯಾಯ ಇನ್ನಿಲ್ಲ

01:26 PM Jul 18, 2020 | keerthan |

ಉಡುಪಿ: ಹಿರಿಯ ಸಂಶೋಧಕ, ತುಳು ವಿದ್ವಾಂಸ, ಅಂತಾರಾಷ್ಟೀಯ ಮಟ್ಟದ ಭಾಷಾ ಮಹೋಪಾಧ್ಯಾಯ ಡಾ| ಉಳಿಯಾರು ಪದ್ಮನಾಭ ಉಪಾಧ್ಯಾಯ (88) ಅವರು ಜು. 17ರಂದು ರಾತ್ರಿ ಮಣಿಪಾಲದ ಖಾಸಗಿ ಆಸ್ಪತ್ರೆಯಲ್ಲಿ ಅಸೌಖ್ಯದಿಂದಾಗಿ ನಿಧನ ಹೊಂದಿದರು.

Advertisement

ಉಡುಪಿ ಜಿಲ್ಲೆಯ, ಕಾಪು ತಾಲೂಕಿನ ಮಜೂರು ಗ್ರಾಮದ ಉಳಿಯಾರು ನಿವಾಸಿಯಾಗಿದ್ದ ಅವರು ಪುತ್ರ ಮತ್ತು ಪುತ್ರಿಯನ್ನು ಅಗಲಿದ್ದಾರೆ. ಭಾಷೆ, ಜನಪದ, ಸಂಸ್ಕೃತಿ ಮತ್ತು ಧಾರ್ಮಿಕ ಕ್ಷೇತ್ರಗಳಲ್ಲಿ ಬಹಳಷ್ಟು ಸಾಧನೆ ಮಾಡಿದ್ದ ಡಾ| ಯು.ಪಿ. ಉಪಾಧ್ಯಾಯ ಅವರ ಪತ್ನಿ ಬಹುಭಾಷಾ ಸಂಶೋಧಕಿ ಡಾ| ಸುಶೀಲಾ ಉಪಾಧ್ಯಾಯ ಅವರು 2014ರಲ್ಲಿ ನಿಧನ ಹೊಂದಿದ್ದರು.

ಕನ್ನಡ, ತುಳು, ಸಂಸ್ಕೃತ, ಮಲಯಾಳಂ, ತಮಿಳು, ಇಂಗ್ಲೀಷ್, ಫ್ರೆಂಚ್, ಆಫ್ರಿಕನ್ ಭಾಷೆಗಳಲ್ಲಿ ಪ್ರಭುತ್ವವನ್ನು ಸಾಧಿಸಿದ್ದ ಅವರು ಭೂತ ವರ್ಷಿಪ್, ಫೋಕ್ ರಿಚುವಲ್ಸ್, ಫೋಕ್ ಎಫಿಕ್ಸ್ ಆಫ್ ತುಳುನಾಡು, ಕಾನ್ವರ್‍ಸೇಶನಲ್ ಕನ್ನಡ ಮೊದಲಾದ ನೂರಾರು ಕೃತಿಗಳನ್ನು ಪ್ರಕಟಿಸಿದ್ದಾರೆ. ತುಳು ಭಾಷೆಗೆ ಬೃಹತ್ ನಿಘಂಟು ರಚಿಸಿ ನೀಡಿದ್ದ ಉಪಾಧ್ಯಾಯರು ತುಳು ಭಾಷಾ ಅಧ್ಯಯನಕ್ಕೆ ವಿಶೇಷ ಕೊಡುಗೆ ನೀಡಿದ್ದ ಉಪಾಧ್ಯಾಯ ಅವರು ಹಲವಾರು ಕೃತಿಗಳನ್ನು ರಚಿಸಿದ್ದರು. ತುಳು ಮೌಖಿಕ ಸಾಹಿತ್ಯದ ದಾಖಲೀಕರಣದಲ್ಲಿ ತೊಡಗಿಕೊಂಡಿದ್ದ ಅವರು ಹಲವಾರು ಸಂಶೋಧನಾತ್ಮಕ ಕೃತಿಗಳನ್ನು ಬರೆದಿದ್ದರು.

ಎಳೆವೆಯಲ್ಲಿಯೇ ಹಿಂದಿ ಶಿಕ್ಷಣ ಮತ್ತು ಹಿಂದಿ ಪ್ರಚಾರ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದ ಅವರು ಸಾಹಿತ್ಯದ ಅಭಿರುಚಿಯೊಂದಿಗೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದಿದ್ದರು. ಹಾರ್ಮೋನಿಯಂ, ಕೊಳಲು ವಾದನದಲ್ಲೂ ತರಬೇತಿ ಪಡೆದಿದ್ದ ಅವರು ವೇದಾಧ್ಯಯನ, ಪೌರೋಹಿತ್ಯ ನಿರ್ವಹಣೆಯ ಜೊತೆಗೆ ನಾಟಕ ಅಭಿನಯ, ನಿರ್ದೇಶನ, ರಚನೆ ಮತ್ತು ಹರಿಕಥಾ ಕಾರ್ಯಕ್ರಮದ ನಿರ್ವಹಣೆಗೈದಿದ್ದರು.

ನಿರಂತರ ಅಧ್ಯಯನಶೀಲರಾಗಿದ್ದ ಅವರು 1955ರಲ್ಲಿ ಮದರಾಸಿನ ವಿವೇಕಾನಂದ ಕಾಲೇಜಿನಲ್ಲಿ ಸಂಸ್ಕೃತದಲ್ಲಿ ಬಿಎ ಆನರ್ಸ್ ಪದವಿ, ಎಂ.ಎ. ಪದವಿ ಪಡೆದಿದ್ದು, 1958ರಲ್ಲಿ ಮದರಾಸಿನ ಪ್ರಾಚ್ಯ ಹಸ್ತಪ್ರತಿ ಗ್ರಂಥಾಲಯದ ಉಪಗ್ರಂಥಪಾಲಕರಾಗಿ ಕಾರ್ಯನಿರ್ವಹಿಸುತ್ತಿರುವಾಗಲೇ ಮದರಾಸು ವಿವಿಯಲ್ಲಿ ಕನ್ನಡ ಎಂ.ಎ. ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ್ದರು. 1959ರಲ್ಲಿ ಬೆಂಗಳೂರಿನ ಸೈಂಟ್ ಜೋಸೆಫ್ ಕಾಲೇಜಿನಲ್ಲಿ ಸಂಸ್ಕೃತ / ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ ಅವರು 1965ರಲ್ಲಿ ಪೂನಾ ಡೆಕ್ಕನ್ ಕಾಲೇಜು ಭಾಷಾ ವಿಜ್ಞಾನ ಸಂಸ್ಥೆಯ ವಿಶ್ವವಿದ್ಯಾಲಯದಲ್ಲಿ ಸಂಶೋಧಕರಾಗಿ ಕಾರ್ಯನಿರ್ವಹಿಸಿದ್ದಾರೆ.

Advertisement

ಬಳಿಕ 1969ರಲ್ಲಿ ಮೈಸೂರಿನ ಭಾರತೀಯ ಭಾಷಾ ವಿಜ್ಞಾನದ ದಕ್ಷಿಣ ಭಾರತ ಭಾಷಾ ಕೇಂದ್ರದ ಪ್ರಾಂಶುಪಾಲರಾಗಿ ಕಾರ್ಯನಿರ್ವಹಿಸಿದ್ದು, 1973ರಲ್ಲಿ ಇಂಡಿಯನ್ ಕೌನ್ಸಿಲ್ ಫಾರ್ ಕಲ್ಚರಲ್ ರಿಲೇಷನ್ಸ್ ಭಾರತೀಯ ಸಾಂಸ್ಕೃತಿಕ ಸಂಬಂಧ ಪರಿಷತ್ ಮೂಲಕ ಪಶ್ಚಿಮ ಆಫ್ರಿಕಾದ ಸೆನೆಗಲ್ ರಾಷ್ಟ್ರದ ಡಕಾರ್ ವಿವಿಯಲ್ಲಿ ಇಂಡೋ ಆಫ್ರಿಕನ್ ಅಧ್ಯಯನ ವಿಭಾಗದಲ್ಲಿ ಪ್ರಾಧ್ಯಾಪಕ ಜೊತೆಗೆ ಲಂಡನ್ ಪ್ಯಾರಿಸ್ ವಿಶ್ವವಿದ್ಯಾಲಯಗಳಲ್ಲಿಆರು ತಿಂಗಳುಗಳ ಕಾಲ ಸಂದರ್ಶಕ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸಿದ್ದರು.

1980ರಲ್ಲಿ ಉಡುಪಿಯ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರದ ಪ್ರಾಧ್ಯಾಪಕ, ಸಂಶೋಧನಾ ಮಾರ್ಗದರ್ಶಕರಾಗಿ, ತುಳು ನಿಘಂಟಿನ ಪ್ರಧಾನ ಸಂಪಾದಕರಾಗಿದ್ದರು. 1998ರಲ್ಲಿ ಋಷಿ ಸಂಸ್ಕೃತಿ ವಿದ್ಯಾ ಕೇಂದ್ರ ಬೆಂಗಳೂರು ಇದರ ಉಡುಪಿ ಶಾಖೆಯಲ್ಲಿ ಸಿದ್ಧ ಯೋಗ ಶಿಕ್ಷಕರಾಗಿ, ಕೇಂದ್ರದ ವ್ಯವಸ್ಥಾಪಕರಾಗಿ ಕಾರ್ಯನಿರ್ವಹಿಸಿದ್ದರು2005ರಲ್ಲಿ ಮುಂಬಯಿಯಲ್ಲಿ ನಡೆದ ಭಾರತೀಯ ಸ್ಥಳನಾಮ ಪರಿಷತ್‌ನ ವಾರ್ಷಿಕ ಅಧ್ಯಯನದ ಅಧ್ಯಕ್ಷತೆ ವಹಿಸಿದ್ದರು.

ನಿರಂತರ ಮಾರ್ಗದರ್ಶಕರು: ಅಂತಾರಾಷ್ಟ್ರೀಯ ಭಾಷಾ ವಿಜ್ಞಾನಿ , ತುಳುನಿಘಂಟುಕಾರ, ರಾಷ್ಟ್ರಮಟ್ಟದ ಬಹು ಶ್ರುತ ವಿದ್ವಾಂಸರಾಗಿದ್ದ ಡಾ| ಯು.ಪಿ. ಉಪಾಧ್ಯಾಯ ಅವರ ಬಳಿಯಲ್ಲಿ ಪದ್ಮನಾಭ ಕೇಕುಣ್ಣಾಯ, ಸಂಗೀತಾ ಎಂ. ಕುಂಜೂರು ಲಕ್ಷ್ಮೀ ನಾರಾಯಣ ಕುಂಡಂತಾಯ, ಅರುಣ್ ಕುಮಾರ್ ಎಸ್.ಆರ್. ಮೊದಲಾದವರಿಗೆ ಸಂಶೋಧಕನಾ ಮಾರ್ಗದರ್ಶಕರಾಗಿದ್ದು, ಡಾ| ಎಂ. ಪ್ರಭಾಕರ ಜೋಷಿ, ಡಾ| ರಾಘವ ನಂಬಿಯಾರ್, ಡಾ| ಜನಾರ್ದನ ಭಟ್ ಮೊದಲಾದವರಿಗೆ ಪಿಎಚ್‌ಡಿ ಗೈಡ್ ಆಗಿದ್ದರು.

ಪ್ರಶಸ್ತಿ – ಪುರಸ್ಕಾರಗಳು : ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ವಿಶ್ವ ತುಳು ಸಮ್ಮೇಳನ ಪ್ರಶಸ್ತಿ, ಗುಂಡರ್ಟ್ ಪ್ರಶಸ್ತಿ, ಸೇಡಿಯಾಪು ಪ್ರಶಸ್ತಿ, ಕಾರಂತ ಪ್ರಶಸ್ತಿ, ತುಳು ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕಿಟ್ಟೆಲ್ ಪ್ರಶಸ್ತಿ, ಸಂದೇಶ ಪ್ರಶಸ್ತಿ, ಅಂತಾರಾಷ್ಟ್ರೀಯ ನಿಘಂಟುಕಾರ ರಚನಾಕಾರರ ಸಮ್ಮೇಳನ ಪ್ರಶಸ್ತಿ, ದ್ರಾವಿಡ ಭಾಷಾ ವಿಜ್ಞಾನಿಗಳ ಸಮ್ಮೇಳನದ ಬಹುಮಾನ, ಕನ್ನಡ ಸಂಘದ ತ್ರಿದಶಮಾನೋತ್ಸವ ಪ್ರಶಸ್ತಿ, ಶ್ರೀ ರಾಮ ವಿಠಲ ಪ್ರಶಸ್ತಿ, ಸುವರ್ಣ ಕರ್ನಾಟಕ ದಿಬ್ಬಣ ಪ್ರಶಸ್ತಿ, ಶಂಭಾ ಜೋಷಿ ಪ್ರಶಸ್ತಿ, ಹುಟ್ಟೂರ ಸಮ್ಮಾನ ಸಹಿತವಾಗಿ ನೂರಾರು ಪ್ರಶಸ್ತಿ, ಪುರಸ್ಕಾರ ಮತ್ತು ಗೌರವ ಸಮ್ಮಾನಗಳು ದೊರಕಿದ್ದವು.

Advertisement

Udayavani is now on Telegram. Click here to join our channel and stay updated with the latest news.

Next