Advertisement

ತುಳು ಬೋಧಕರ ಕೊರತೆ ನೀಗಲು ತುಳು ಎಂಎ ಆರಂಭ

11:07 AM Jul 13, 2018 | Team Udayavani |

ಮಂಗಳೂರು: ಮಂಗಳೂರು ವಿ.ವಿ.ಯು ಈ ವರ್ಷದಿಂದಲೇ ತುಳು ಎಂಎ ಪದವಿ ಆರಂಭಿಸುತ್ತಿದ್ದು, ತುಳು ಭಾಷಾ ಅಧ್ಯಾಪಕರ ಕೊರತೆ ಭವಿಷ್ಯದಲ್ಲಿ ನೀಗಲಿದೆ.ಅವಿಭಜಿತ ದ.ಕ. ಜಿಲ್ಲೆಯ 40 ಶಾಲೆಗಳಲ್ಲಿ 6ರಿಂದ 10 ತರಗತಿವರೆಗೆ ತುಳುವನ್ನು ಐಚ್ಛಿಕ ಭಾಷಾ ವಿಷಯವಾಗಿ ಬೋಧಿಸಲಾಗುತ್ತಿದೆ. ಕೆಲವೆಡೆ 4 ವರ್ಷಗಳ ಹಿಂದೆಯೇ ತುಳು ತರಗತಿ ಆರಂಭವಾಗಿದ್ದು, ವಿದ್ಯಾರ್ಥಿಗಳು ಉತ್ತಮ ಫ‌ಲಿತಾಂಶ ಪಡೆಯುತ್ತಿದ್ದಾರೆ. ಆದರೆ ಉಪನ್ಯಾಸಕರ ಕೊರತೆ ಇತ್ತು. ತುಳು ಪರಿಣತರು ಮತ್ತು ಭಾಷಾಧ್ಯಯನದಲ್ಲಿ ಆಸಕ್ತಿ ಇರುವವರನ್ನು ಬಳಸಲಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ವಿ.ವಿ.ಯೊಂದಿಗೆ ಮಾತುಕತೆ ನಡೆಸಿದ ಪರಿಣಾಮ ಹಂಪನಕಟ್ಟೆಯ ವಿ.ವಿ. ಸಂಧ್ಯಾ ಕಾಲೇಜಿನಲ್ಲಿ ತುಳು ಸ್ನಾತಕೋತ್ತರ ಎಂಎ ಪದವಿ ಆರಂಭಗೊಳ್ಳುತ್ತಿದೆ.

Advertisement

ಸಂಶೋಧನೆಗೂ ಅವಕಾಶ
ತುಳು ಎಂಎ ಪದವಿಗಾಗಿ ಈಗಾಗಲೇ ಅರ್ಜಿ ಆಹ್ವಾನಿಸಲಾಗಿದೆ.  ಜು. 16ರ ವರೆಗೆ ಅರ್ಜಿ ಸಲ್ಲಿಕೆಗೆ ಅವಕಾಶವಿದೆ. ಆಗಸ್ಟ್‌ 2ನೇ ವಾರದಲ್ಲಿ ತರಗತಿ ಆರಂಭವಾಗಲಿದೆ. ಸ್ನಾತಕೋತ್ತರ ಪದವಿ ಬಳಿಕ ತುಳು ಬೋಧನೆಗೆ ಅವಕಾಶಕ್ಕೆ ಅಕಾಡೆಮಿ ಯೋಚಿಸಿದೆ. ಸಂಶೋಧನೆಗೆ ತೊಡಗಿಸಿಕೊಳ್ಳುವವರಿಗೂ ಇದು ಅನುಕೂಲಕರ.

ತಯಾರಾಗುತ್ತಿದೆ ಪಠ್ಯಕ್ರಮ
ಪಠ್ಯ ರಚನಾ ಸಮಿತಿ ಅಧ್ಯಕ್ಷ ಪ್ರೊ| ಶಿವರಾಮ ಶೆಟ್ಟಿ ನೇತೃತ್ವದಲ್ಲಿ ಎಂಎಗೆ ಪಠ್ಯ ರಚಿಸುವ ಕಾರ್ಯ ಪೂರ್ಣಗೊಳ್ಳುತ್ತಿದೆ. ಈ ಕುರಿತು “ಉದಯವಾಣಿ’ ಜತೆ ಮಾತನಾಡಿದ ಪ್ರೊ| ಶಿವರಾಮ ಶೆಟ್ಟಿ, ಕೋರ್ಸ್‌ ಸ್ವಲ್ಪ ವಿಭಿನ್ನವಾಗಿದೆ. ತುಳು ಚರಿತ್ರೆ, ಅರ್ಥಶಾಸ್ತ್ರ, ಸಾಂಪ್ರದಾಯಿಕ ತಂತ್ರಜ್ಞಾನ ಸಂಗತಿಯನ್ನೂ ಇದು ಒಳಗೊಳ್ಳಲಿದೆ. ಸಂಶೋಧನೆಗೂ ಒಂದು ಪತ್ರಿಕೆ ಇರಲಿದೆ. ಎಂದಿದ್ದಾರೆ.

ಮುಂದಿನ ವರ್ಷ ಪದವಿಯಲ್ಲೂ ತುಳು
ಮುಂದಿನ ವರ್ಷದಿಂದ ಪದವಿಯಲ್ಲೂ ತುಳುವನ್ನು ಐಚ್ಛಿಕವಾಗಿ ಬೋಧಿಲಾಗುವುದು. ಪಿಯುಸಿಯಲ್ಲಿ ತುಳು ಪಠ್ಯ ಅಳವಡಿಸುವಂತೆ ಸರಕಾರವನ್ನು ಒತ್ತಾಯಿಸಲಾಗುತ್ತಿದೆ.

100 ಶಾಲೆಗಳಲ್ಲಿ ತುಳು ಕಲಿಸುವ ಗುರಿ
ತುಳು ಎಂಎ ಆರಂಭದಿಂದ 2 ವರ್ಷಗಳಲ್ಲಿ ಸ್ನಾತಕೋತ್ತರ ಪದವೀಧರ ಉಪನ್ಯಾಸಕರೇ ತುಳು ಬೋಧಿಸಲಿದ್ದಾರೆ ಆಗ ಅವಿಭಜಿತ ದ.ಕ. ಜಿಲ್ಲೆಯ 100 ಶಾಲೆಗಳಲ್ಲಿ ತುಳು ತರಗತಿ ಆರಂಭಿಸುವ ಉದ್ದೇಶವಿದೆ.
– ಎ. ಸಿ. ಭಂಡಾರಿ, ಅಧ್ಯಕ್ಷರು, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ

Advertisement

ಹೆಚ್ಚುತ್ತಿರುವ ವಿದ್ಯಾರ್ಥಿ ಸಂಖ್ಯೆ
4 ವರ್ಷಗಳಲ್ಲಿ ಎಸೆಸೆಲ್ಸಿಯಲ್ಲಿ ತುಳು ತೃತೀಯ ಭಾಷೆಯಾಗಿ ಪರೀಕ್ಷೆ ಬರೆದವರ ಸಂಖ್ಯೆ ಹೆಚ್ಚುತ್ತಿದೆ. 2014-15ರಲ್ಲಿ 18, 2015-16ರಲ್ಲಿ 25, 2016-17ರಲ್ಲಿ 283 ಹಾಗೂ 2017-18ರಲ್ಲಿ 417 ಮಂದಿ ಪರೀಕ್ಷೆ ಬರೆದಿದ್ದರು. 

*ಧನ್ಯಾ ಬಾಳೆಕಜೆ

Advertisement

Udayavani is now on Telegram. Click here to join our channel and stay updated with the latest news.

Next