ಕಡಬ: ತುಳು ಸಂಸ್ಕೃತಿಯ ಆಚರಣೆಗಳು ಕಾರ್ಯಕ್ರಮಗಳಿಗೆ ಸೀಮಿತವಾಗದೆ ನಿತ್ಯೋತ್ಸವವಾಗಬೇಕು. ನಮ್ಮ ಆದರ್ಶ ತುಳು ಸಂಸ್ಕೃತಿಗೆ ವಿಶ್ವದಲ್ಲಿಯೇ ವಿಶೇಷ ಸ್ಥಾನವಿದೆ ಎಂದು ಮಂಗಳೂರು ಆಕಾಶವಾಣಿಯ ಕಾರ್ಯಕ್ರಮ ನಿರ್ವಹಣಾಧಿಕಾರಿ ಡಾ| ಸದಾನಂದ ಪೆರ್ಲ ನುಡಿದರು.
ಅವರು ರಾಮಕುಂಜದ ನೇತ್ರಾವತಿ ತುಳುಕೂಟದ ಆಶ್ರಯದಲ್ಲಿ ಶ್ರೀ ರಾಮಕುಂಜೇಶ್ವರ ಆಂಗ್ಲಮಾಧ್ಯಮ ಪ್ರೌಢಶಾಲೆಯ ಸಹಯೋಗದಲ್ಲಿ ರಾಮಕುಂಜದಲ್ಲಿ ಶನಿವಾರ ಜರಗಿದ ತುಳು ಸಾಂಸ್ಕೃತಿಕ ಸ್ಪರ್ಧೆಗಳ ‘ರಸ ಮಂಟಮೆ’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಸಂಸ್ಕೃತಿ ಉಳಿಸುವ ಕೆಲಸ ಆಗಲಿ
ಪಾಶ್ಚಿಮಾತ್ಯ ಸಂಸ್ಕೃತಿಯ ವ್ಯಾಮೋಹದಿಂದ ತುಳು ಸಂಸ್ಕೃತಿ ಕಣ್ಮರೆಯಾಗುತ್ತಿದೆ. ತುಳು ಸಂಸ್ಕೃತಿಯನ್ನು ಉಳಿಸುವ ಕೆಲಸ ಎಲ್ಲ ಶಾಲೆ, ಕಾಲೇಜುಗಳಲ್ಲಿಯೂ ಆಗಬೇಕು. ಯಕ್ಷಗಾನ, ದೇವತಾರಾಧನೆ, ಭೂತಾರಾಧನೆ ಸಹಿತ ತುಳು ಸಂಸ್ಕೃತಿಯ ಬಗ್ಗೆ ನಮ್ಮ ಮಕ್ಕಳಿಗೆ ತಿಳಿವಳಿಕೆ ನೀಡುವ ಕೆಲಸ ಆಗಬೇಕೆಂದು ಅವರು ಹೇಳಿದರು.
ತುಳುನಾಡಿನ ಹಳೆಯ ಕಾಲದ ವಸ್ತುಗಳ ಪ್ರದರ್ಶನವನ್ನು ಅಖೀಲ ಭಾರತ ತುಳು ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಶಶಿಧರ ಶೆಟ್ಟಿ ನಿಟ್ಟೆ ಉದ್ಘಾಟಿಸಿದರು. ಉಡುಪಿ ಅರಸು ಮನೆತನದ ವಂಶಸ್ಥ ಡಾ| ಆಕಾಶ್‌ರಾಜ್ ಆಲುಪ, ತುಳು ಸಾಹಿತ್ಯ ರತ್ನ ಪ್ರಶಸ್ತಿ ಪುರಸ್ಕೃತ ಮಹೇಂದ್ರನಾಥ ಸಾಲೆತ್ತೂರು, ನ್ಯಾಯವಾದಿ ಮತ್ತು ನೋಟರಿ ಅಕ್ಷತಾ ಆದರ್ಶ ಮಂಗಳೂರು, ಪತ್ರಕರ್ತ ಶಶಿ ಬಂದಿಮಾರು, ಉಬಾರ್ ತುಳು ಕೂಡುಕಟ್ಟ್ ಅಧ್ಯಕ್ಷ ಡಾ| ನಿರಂಜನ ರೈ, ರಾಮಕುಂಜ ಗ್ರಾ.ಪಂ. ಅಧ್ಯಕ್ಷ ಪ್ರಶಾಂತ್ ಆರ್.ಕೆ. ಮಾತನಾಡಿದರು. ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಗೋಪಾಲ ಶೆಟ್ಟಿ ಕಳೆಂಜ, ಅಕಾಡೆಮಿ ಸದಸ್ಯ ನಿರಂಜನ ರೈ ಮಠಂತಬೆಟ್ಟು, ಶ್ರೀ ರಾಮಕುಂಜೇಶ್ವರ ಆಂಗ್ಲಮಾಧ್ಯಮ ಪ್ರೌಢಶಾಲಾ ಆಡಳಿತಾಧಿಕಾರಿ ಆನಂದ, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಪ್ರದೀದ್ ರೈ ಮನವಳಿಕೆ, ಮುಖ್ಯ ಶಿಕ್ಷಕಿಯರಾದ ಗಾಯತ್ರಿ, ಲೋಹಿತಾ ಮೊದಲದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಶ್ರೀ ರಾಮಕುಂಜೇಶ್ವರ ಆಂಗ್ಲಮಾಧ್ಯಮ ಪ್ರೌಢಶಾಲಾ ಕಾರ್ಯದರ್ಶಿ ಕೆ. ಸೇಸಪ್ಪ ರೈ ಅವರು ಸ್ವಾಗತಿಸಿದರು ಪ್ರಸ್ತಾವನೆಗೈದರು. ಶಿಕ್ಷಕಿ ಸರಿತಾ ಜನಾರ್ದನ ಅವರು ನಿರೂಪಿಸಿದರು ರಮೇಶ್ ರೈ ಅವರು ವಂದಿಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಎ.ಸಿ. ಭಂಡಾರಿ, ಪ್ರೌಢಶಾಲೆಯಲ್ಲಿ 3ನೇ ಐಚ್ಛಿಕ ಭಾಷೆಯಾಗಿ ತುಳು ಕಲಿಸಲಾಗುತ್ತಿದೆ. ದ.ಕ. ಜಿಲ್ಲೆಯ 42 ಪ್ರೌಢಶಾಲೆಗಳಲ್ಲಿ ತುಳು ಭಾಷೆ ಕಲಿಸಲಾಗುತ್ತಿದೆ. ತುಳು ಭಾಷೆಯ 180 ಪುಸ್ತಕಗಳನ್ನು ಕರ್ನಾಟಕ ತುಳು ಅಕಾಡೆಮಿ ಪ್ರಕಟಿಸಿದೆ. ಅಕಾಡೆಮಿ ವತಿಯಿಂದ ಕಳೆದ ವರ್ಷ ಶಾಲಾ ಕಾಲೇಜುಗಳಲ್ಲಿ 36 ವಿವಿಧ ತುಳು ಕಾರ್ಯಕ್ರಮಗಳನ್ನು ನಡೆಸಲಾಗಿದೆ ಎಂದು ಡಾ| ಸದಾನಂದ ಪೆರ್ಲ ತಿಳಿಸಿದರು.